varthabharthi


ಸಂಪಾದಕೀಯ

ಕಾಶ್ಮೀರ್ ಫೈಲ್ಸ್ ಅಥವಾ ಸರಕಾರ: ಯಾವುದು ಹೆಚ್ಚು ಕಳಪೆ!

ವಾರ್ತಾ ಭಾರತಿ : 1 Dec, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಸಿನೆಮಾವೊಂದರ ವಿಮರ್ಶೆ, ಸರಕಾರವೊಂದರ ವಿಮರ್ಶೆಯಾಗಿ ಸುದ್ದಿಯಾಗುತ್ತಿರುವುದು ಇದೇ ಮೊದಲು. ಈ ಹಿಂದೆ ಸಿನೆಮಾಗಳು ಯಾವುದೇ ಸರಕಾರವನ್ನು ಪ್ರತಿನಿಧಿಸುತ್ತಿರಲಿಲ್ಲ. ಅದರ ಸೋಲು ಗೆಲುವು ಆ ಸಿನೆಮಾ ನಿರ್ದೇಶಕ, ನಿರ್ಮಾಪಕನಿಗಷ್ಟೇ ಸಂಬಂಧಿಸಿರುತ್ತಿತ್ತು. ಕೆಲವೊಮ್ಮೆ ಅದರಲ್ಲಿ ಪಾತ್ರವಹಿಸಿದ ನಟರ ಮೇಲೂ ಪರಿಣಾಮ ಬೀರುತ್ತಿತ್ತು. ಸಿನೆಮಾವೊಂದನ್ನು ವಿಮರ್ಶಕನೊಬ್ಬ ಕಳಪೆಯೆಂದು ಕರೆದರೆ ಅದಕ್ಕೆ ಸರಕಾರ ಪ್ರತಿಕ್ರಿಯಿಸಬೇಕಾದ ಸಂದರ್ಭ ಬಂದಿರಲಿಲ್ಲ. ಆದರೆ ಭಾರತದ ಸಿನೆಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಒಂದು ಸಿನೆಮಾವನ್ನು ಅಸಭ್ಯ, ಕಳಪೆ, ಅಭಿರುಚಿಹೀನ ಎಂದು ಅಂತರ್‌ರಾಷ್ಟ್ರೀಯ ಮಟ್ಟದ ನಿರ್ದೇಶಕನೊಬ್ಬ ವಿಮರ್ಶಿಸಿದರೆ, ಸರಕಾರ ಮುಖ ಒರೆಸಿಕೊಳ್ಳುತ್ತಿದೆ. ಕಲೆಗೆ ಸಂಬಂಧ ಪಡದ ರಾಜಕಾರಣಿಗಳು, ಅಧಿಕಾರಿಗಳು, ರಾಯಭಾರಿಗಳು ಅದಕ್ಕೆ ಪ್ರತಿಕ್ರಿಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯಾವುದೋ ಒಂದು ಚಿತ್ರವನ್ನು ತೀರ್ಪುಗಾರನೊಬ್ಬ ಕಳಪೆಯೆಂದು, ಅಭಿರುಚಿಹೀನವೆಂದು ಕರೆದರೆ, ಅದನ್ನು ಇಡೀ ದೇಶಕ್ಕಾದ ಅವಮಾನವೆಂದು ಯಾಕೆ ಬಗೆಯಬೇಕು? ಅದರ ಅವಮಾನವನ್ನು ಹೊತ್ತುಕೊಳ್ಳಬೇಕಾದುದು ಆ ಚಿತ್ರದ ನಿರ್ದೇಶಕ, ನಿರ್ಮಾಪಕರು. ಆದರೆ ಸರಕಾರ ಇದು ದೇಶಕ್ಕಾದ ಅವಮಾನವೆಂದು ಬಿಂಬಿಸಲು ಯತ್ನಿಸುತ್ತಿದೆ. ತೀರ್ಪುಗಾರನ ಮಾತಿಗಾಗಿ ಇಸ್ರೇಲ್‌ನ ರಾಯಭಾರಿ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಪಥೇರ್ ಪಾಂಚಾಲಿ, ಅಂಕುರ್, ಸಲಾಂ ಬಾಂಬೆ, ಉತ್ಸವ್ ಮೊದಲಾದ ಸಿನಿಮಾಗಳ ಮೂಲಕ ಮೂಲಕ ವಿಶ್ವ ಮಟ್ಟದಲ್ಲಿ ಭಾರತ ತನ್ನನ್ನು ತೆರೆದುಕೊಂಡಿದೆ. ಆಸ್ಕರ್ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ. ವಿಪರ್ಯಾಸವೆಂದರೆ, ಭಾರತವಿಂದು ಒಂದು ಕಳಪೆ, ಅಭಿರುಚಿ ಹೀನ, ರಾಜಕೀಯ ಪ್ರೇರಿತ ಸಿನೆಮಾದ ಮೂಲಕ ಜಗತ್ತಿಗೆ ತನ್ನನ್ನು ಪರಿಚಯಿಸುವುದಕ್ಕೆ ಹೊರಟು ನಗೆಪಾಟಲಿಗೀಡಾಗಿದೆ. ಭಾರತೀಯ ಸಿನೆಮಾ ಮತ್ತು ಇಲ್ಲಿನ ರಾಜಕೀಯ ತಲುಪಿರುವ ಪಾತಾಳದ ಆಳವನ್ನು ಇದು ಹೇಳುತ್ತದೆ. ರಾಜಕೀಯದೊಳಗೆ ಸಿನೆಮಾ ಮಂದಿ ಮತ್ತು ಸಿನೆಮಾದೊಳಗೆ ರಾಜಕೀಯ ಮಂದಿ ತೂರಿ ಕೊಂಡರೆ ಏನಾಗಬಹುದು ಎನ್ನುವುದಕ್ಕೆ 'ಕಾಶ್ಮೀರ್ ಫೈಲ್ಸ್' ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ.

ಕಳೆದ ಹತ್ತು ವರ್ಷಗಳಿಂದ ರಾಜಕೀಯ ಉಗುರುಗಳು ಸಿನೆಮಾದ ಸೂಕ್ಷ್ಮತೆಯ ಮೇಲೆ ಮಾಡಿದ ಗಾಯ ಆಳವಾದುದು. ಸಿಬಿಎಫ್‌ಸಿಯಲ್ಲಿ ಹಸ್ತಕ್ಷೇಪ, ಎಫ್‌ಟಿಐಐಯ ನಿಯಂತ್ರಣ, ರಾಷ್ಟ್ರೀಯ ಪ್ರಶಸ್ತಿ ವಿತರಣೆಯಲ್ಲಿ ರಾಜಕೀಯ ಇವೆಲ್ಲವೂ ಭಾರತೀಯ ಸಿನೆಮಾದ ಗುಣಮಟ್ಟದ ಮೇಲೆ ತೀವ್ರ ದುಷ್ಪರಿಣಾಮ ಬೀರಿತು. ಪ್ರಯೋಗ ಶೀಲತೆ ನಿಂತ ನೀರಾಯಿತು. ಇತಿಹಾಸವನ್ನು ಜನಪ್ರಿಯ ಧಾಟಿಯಲ್ಲಿ ಹೇಳುತ್ತಾ, ಸಂಘಪರಿವಾರದ ಭ್ರಾಮಕ ಜಗತ್ತಿಗೆ ಪೂರಕವಾಗುವ ಸಿನೆಮಾಗಳು ಸಾಲು ಸಾಲಾಗಿ ಬರಲಾರಂಭಿಸಿದವು. ದೃಶ್ಯ ವೈಭವವನ್ನೇ ಬಂಡವಾಳವಾಗಿಸಿಕೊಂಡ ಚಂದಮಾಮ ಕತೆಯನ್ನು ವಸ್ತುವಾಗಿಸಿಕೊಂಡ 'ಬಾಹುಬಲಿ'ಯಂತಹ ಸಿನೆಮಾ ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲ, ಸರಕಾರದ ಸರ್ಜಿಕಲ್ ಸ್ಟ್ರೈಕ್‌ಗಳೆಲ್ಲ ಸಿನೆಮಾ ಕತೆಯಾಗತೊಡಗಿದವು. ಎಲ್ಲ ಸೃಜನಶೀಲ ಗೆರೆಗಳನ್ನು ದಾಟಿ ಹಿಂದಿ ಚಿತ್ರೋದ್ಯಮ ರಾಜಕೀಯ ಉದ್ದೇಶಗಳಿಗೆ ತನ್ನನ್ನು ಸಂಪೂರ್ಣ ತೆತ್ತುಕೊಂಡಿತು. ಸೃಜನಶೀಲ ಕಲಾವಿದರು, ನಿರ್ದೇಶಕರು ಬಾಯಿ ತೆರೆಯಲು ಅಂಜತೊಡಗಿದರು. ಮಾತನಾಡ ಬಾರದವರು ಮಾತನಾಡತೊಡಗಿದರು. ಇಂದು ಹಿಂದಿ ಚಿತ್ರೋದ್ಯಮ ಸರ್ವನಾಶವಾಗುವುದರಲ್ಲಿ ಸರಕಾರದ ನೇರ ಪಾತ್ರವಿದೆ. ಅಕ್ಷಯ್ ಕುಮಾರ್‌ನಂತಹ ನಟ ಪ್ರಧಾನಿ ಮೋದಿಯವರನ್ನು ಸಂದರ್ಶನ ಮಾಡುತ್ತಾರೆ. ಸರಕಾರದ ಜನಪ್ರಿಯತೆಗೆ ಸಿನೆಮಾವನ್ನು ಮಾಧ್ಯಮವಾಗಿ ಬಳಸಿಕೊಂಡ ಮೊದಲ ಪ್ರಧಾನಿ ನರೇಂದ್ರ ಮೋದಿ. ಕಾಶ್ಮೀರ್ ಫೈಲ್ಸ್ ಯಾವನೋ ಒಬ್ಬ ನಿರ್ದೇಶಕ, ನಿರ್ಮಾಪಕನ ಚಿತ್ರವಾಗಿದ್ದಿದ್ದರೆ ಇಂದು ವಿವಾದವಾಗುತ್ತಿರಲಿಲ್ಲ. ಅದು ಸರಕಾರದ ಚಿತ್ರವಾಗಿರುವುದರಿಂದಲೇ, ಆ ಚಿತ್ರಕ್ಕಾಗಿ ದೇಶ ಮುಖಮುಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ಘೋರ ದೌರ್ಜನ್ಯವನ್ನು ವಸ್ತುವಾಗಿಟ್ಟು ಸಿನೆಮಾ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಕಾಶ್ಮೀರ ಪಂಡಿತರ ಮೇಲೆ ದೌರ್ಜನ್ಯವೆಸಗುವ ಸಂದರ್ಭದಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದುದು ಬಿಜೆಪಿ ಬೆಂಬಲಿತ ಸರಕಾರ. ಕಾಶ್ಮೀರದಲ್ಲಿ ಅಂದಿನ ರಾಜ್ಯಪಾಲರಾಗಿದ್ದುದು ಯಾರು ಎನ್ನುವುದನ್ನು ಗುರುತಿಸಿದರೆ ಅಂದಿನ ಕಾಶ್ಮೀರ ಪಂಡಿತರ ದುರಂತಕ್ಕೆ ಯಾರು ಕಾರಣ ಎನ್ನುವುದು ಸ್ಪಷ್ಟವಾಗಿ ಬಿಡುತ್ತದೆ. ಕಾಶ್ಮೀರದಲ್ಲಿ ಅಲ್ಲಿನ ಪಂಡಿತರ ಬದುಕನ್ನು ಅತಂತ್ರಗೊಳಿಸಿ ಅವರ ಸಾವು ನೋವುಗಳನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ಯಾರು ಎನ್ನುವುದು ಗೊತ್ತಾಗಿ ಬಿಡುತ್ತದೆ. ಕಾಶ್ಮೀರ್ ಫೈಲ್ಸ್‌ನ್ನು ನಿರಾಕರಿಸುವ ಭರದಲ್ಲಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ಎಸಗಲ್ಪಟ್ಟ ದೌರ್ಜನ್ಯವನ್ನು ಯಾವ ಕಾರಣಕ್ಕೂ ಸಮರ್ಥಿಸುವಂತಿಲ್ಲ. ಆದರೆ, ಕಾಶ್ಮೀರದಲ್ಲಿ ಮೂರು ದಶಕಗಳಲ್ಲಿ ಉಗ್ರರಿಂದ ಮೃತಪಟ್ಟ ಒಟ್ಟು ಸಂಖ್ಯೆಯೆಷ್ಟು ಎಂದು ಆರ್‌ಟಿಐಯಲ್ಲಿ ಕೇಳಿದಾಗ ಸಿಕ್ಕಿದ ಉತ್ತರ ಒಟ್ಟು 1,624. ಇವರಲ್ಲಿ ಕಾಶ್ಮೀರ ಪಂಡಿತರ ಸಂಖ್ಯೆ 89. ಹಾಗಾದರೆ, ಕಾಶ್ಮೀರದಲ್ಲಿ ಮೃತಪಟ್ಟ ಉಳಿದ 1,535 ಜನರು ಯಾರು? ಅವರ ಬಗ್ಗೆ ಈ ಕಾಶ್ಮೀರ್ ಫೈಲ್ಸ್ ಯಾಕೆ ವೌನವಾಗಿದೆ? ಕಾಶ್ಮೀರದಲ್ಲಿ ಉಗ್ರವಾದಿಗಳಿಂದ ಮೃತಪಟ್ಟ ಮುಸ್ಲಿಮರ ಸಂಖ್ಯೆಯ ಬಗ್ಗೆ ಯಾಕೆ ಈ ಚಿತ್ರ ಮಾತನಾಡುವುದಿಲ್ಲ? ಈ ಚಿತ್ರದಲ್ಲಿ ಒಂದಿಷ್ಟು ಪ್ರಾಮಾಣಿಕತೆ ಇದ್ದುದೇ ಆದರೆ, ಕಾಶ್ಮೀರ ಪಂಡಿತರೇ ಬಹಿರಂಗವಾಗಿ ಬೀದಿಗಿಳಿದು ಈ ಚಿತ್ರದ ವಿರುದ್ಧ ಯಾಕೆ ಪ್ರತಿಭಟಿಸಿದ್ದರು? ಈ ಸಿನೆಮಾ ಕಾಶ್ಮೀರದ ಪಂಡಿತರಿಗೆ ಪರಿಹಾರವನ್ನು ನೀಡುವ ಬದಲು ಅವರ ಸಂಕಟಗಳನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಲ್ಲಿನ ಪಂಡಿತರು ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಪಂಡಿತರ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದು, ಕಾಶ್ಮೀರ ಸಂಪೂರ್ಣ ಸೇನೆಯ ವಶದಲ್ಲಿದ್ದರೂ ಪಂಡಿತರ ಮೇಲೆ ದಾಳಿಗಳು ಯಾಕೆ ಹೆಚ್ಚಿವೆ? ಇದರ ಹೊಣೆಯನ್ನು ಕೇಂದ್ರ ಸರಕಾರ ಹೊತ್ತುಕೊಳ್ಳಲು ಸಿದ್ಧವಿದೆಯೆ?

ಸ್ವತಃ ಕಾಶ್ಮೀರ ಪಂಡಿತರಿಂದಲೇ ತಿರಸ್ಕರಿಸಲ್ಪಟ್ಟ, ಕಾಶ್ಮೀರಿಗಳಿಗೇ ಬೇಡವಾದ ಸಿನೆಮಾವೊಂದನ್ನು ದೇಶಾದ್ಯಂತ ಪ್ರದರ್ಶಿಸಲು ಸರಕಾರ ಯಾಕೆ ಮುತುವರ್ಜಿ ವಹಿಸಿತು? ಯಾಕೆ ಅದಕ್ಕೆ ಶೇ.100ರಷ್ಟು ತೆರಿಗೆ ವಿನಾಯಿತಿಯನ್ನು ಘೋಷಿಸಿತು? ಈ ಚಿತ್ರವನ್ನು ಬಳಸಿಕೊಂಡು ದೇಶಾದ್ಯಂತ ಮುಸ್ಲಿಮರ ವಿರುದ್ಧ ದ್ವೇಷವನ್ನು ಬಿತ್ತುವುದಷ್ಟೇ ಸರಕಾರದ ಉದ್ದೇಶವಾಗಿತ್ತು. ಈ ಚಿತ್ರಪ್ರದರ್ಶನವನ್ನು ಈಗಾಗಲೇ ಹಲವು ದೇಶಗಳು ನಿಷೇಧಿಸಿವೆ. ದೇಶಾದ್ಯಂತ ಜನಸಾಮಾನ್ಯರೇ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ. ಇಂತಹ ಚಿತ್ರವನ್ನು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಿರುವುದನ್ನು ಇದೀಗ ಸರಕಾರವೇ ಆಹ್ವಾನಿಸಿದ ಇಸ್ರೇಲ್‌ನ ಖ್ಯಾತ ಚಿತ್ರ ನಿರ್ದೇಶಕ ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇವಲ ಸಿನೆಮಾಕ್ಕಷ್ಟೇ ಸೀಮಿತವಾಗಿಲ್ಲ. ಈ ಸಿನೆಮಾವನ್ನು ಮುಂದಿಟ್ಟುಕೊಂಡು ಸರಕಾರ ನಡೆಸಿದ ಕೆಟ್ಟ ರಾಜಕಾರಣವನ್ನೂ ಆ ಮೂಲಕ ಅವರು ಪ್ರಶ್ನಿಸಿದ್ದಾರೆ. ತಾನಾಗಿಯೇ ನಿರ್ಮಿಸಿ, ನಿರ್ದೇಶಿಸಿ ಇಂತಹದೊಂದು ಅವಮಾನ, ಮುಖಭಂಗವನ್ನು ಸರಕಾರ ತನ್ನದಾಗಿಸಿಕೊಂಡಿದೆ. ಇದೀಗ ಆ ನಿರ್ದೇಶಕನ ಬಾಯಿ ಮುಚ್ಚಿಸಲು ಮತ್ತೆ ಸರಕಾರ ರಾಜತಾಂತ್ರಿಕ ನೆರವನ್ನು ಪಡೆದುಕೊಳ್ಳಲು ಮುಂದಾಗಿದೆ. ಕಲೆಗೂ ಕೊಲೆಗೂ ವ್ಯತ್ಯಾಸವಿದೆ. ಕಲೆಯ ಹೆಸರಿನಲ್ಲಿ ಕೊಲೆಗಳನ್ನು ವೈಭವೀಕರಿಸಿ ಜನಸಾಮಾನ್ಯರನ್ನು ಇನ್ನಷ್ಟು ಕೊಲೆಗಳನ್ನು ನಡೆಸುವುದಕ್ಕೆ ಪ್ರೇರಣೆ ನೀಡಿದ ಸರಕಾರಕ್ಕೆ ಭಾರತದ ಮಿತ್ರದೇಶವಾಗಿರುವ ಇಸ್ರೇಲ್‌ನಿಂದ ಬಂದ ಜ್ಯೂರಿಯೊಬ್ಬರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬುದ್ಧಿ ಮಾತು ಹೇಳಿದ್ದಾರೆ. 'ಅಶ್ಲೀಲ ಮತ್ತು ಕಳಪೆ' ಎಂದು ಆತ ಕರೆದಿರುವುದು ಕೇವಲ 'ಕಾಶ್ಮೀರಫೈಲ್ಸ್' ಚಿತ್ರವನ್ನು ಮಾತ್ರವಲ್ಲ, ಅದನ್ನು ಪ್ರಾಯೋಜಿಸಿದ ಸರಕಾರವನ್ನು ಕೂಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)