varthabharthi


ಪ್ರಚಲಿತ

ಗಾಂಧಿ - ಅಂಬೇಡ್ಕರ್ ಮತ್ತು ಇಂದಿನ ಸವಾಲುಗಳು

ವಾರ್ತಾ ಭಾರತಿ : 9 Jan, 2023
ಸನತ್ ಕುಮಾರ್ ಬೆಳಗಲಿ

ಗಾಂಧೀಜಿ ಧಾರ್ಮಿಕ ವ್ಯಕ್ತಿಯಾಗಿದ್ದು ನಿಜ.ಆರಂಭದಲ್ಲಿ ವರ್ಣಾಶ್ರಮ ಪದ್ಧತಿಯಲ್ಲಿ ಅವರಿಗೆ ನಂಬಿಕೆಯಿತ್ತು. ಆದರೆ ಅವರು ಕೋಮುವಾದಿ ಆಗಿರಲಿಲ್ಲ. ಮನುವಾದಿಯೂ ಅಲ್ಲ. ಕೋಮುವಾದಿ ಆಗಿರಲಿಲ್ಲವೆಂದೇ ಅವರು ಗೋಡ್ಸೆಯ ಗುಂಡಿಗೆ ಬಲಿಯಾದರು. ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಈ ಅಂಶಗಳನ್ನೆಲ್ಲ ನಾವು ಗಮನಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ಸಮಚಿತ್ತದ ಅಧ್ಯಯನ ನಡೆಯಬೇಕಾಗಿದೆ.ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕೇಶವ ಮಳಗಿ ಅವರು ಬರೆದ 'ದಾರಿ ಬೇರೆ ಗುರಿ ಒಂದೇ' ಎಂಬ ಪುಸ್ತಕ ಮತ್ತು ಡಿ.ಎಸ್. ನಾಗಭೂಷಣ ಅವರ 'ಗಾಂಧಿ' ಪುಸ್ತಕಗಳು ಹೊಸ ಬೆಳಕನ್ನು ಚೆಲ್ಲುತ್ತವೆ.


ವೈಯಕ್ತಿಕ ಇಲ್ಲವೇ ಸಾರ್ವಜನಿಕ ಬದುಕಿನಲ್ಲಿ ಯಶಸ್ಸು ಸಾಧಿಸಲು ಒಂದು ಗುರಿ ಇರಬೇಕು. ಗುರಿ ತಲುಪಲು ಆದ್ಯತೆ ( ಪ್ರಯಾರಿಟಿ) ಎಂಬುದು ಇರಬೇಕು. ತಕ್ಷಣದ ಸವಾಲುಗಳನ್ನು ಮೊದಲು ನಿಭಾಯಿಸಬೇಕು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಗೆ ಒಂದು ಗುರಿ ಇತ್ತು. ಭಾರತ ಸ್ವತಂತ್ರವಾಗಬೇಕು ಎಂಬುದು ಅವರ ಮೊದಲ ಆದ್ಯತೆಯಾಗಿತ್ತು. ಅದನ್ನು ಸಾಧಿಸಲು ಜಾತಿ, ಮತವೆನ್ನದೆ ಎಲ್ಲ ಜನ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಅವರ ಮೊದಲ ಆದ್ಯತೆ ಆಗಿತ್ತು. ಆದರೆ, ಬಾಬಾಸಾಹೇಬರ ಗುರಿ ಬೇರೆ ಆಗಿತ್ತು. ಭಾರತಕ್ಕೆ ಸ್ವಾತಂತ್ರ ಸಿಕ್ಕರೆ ಅದುವೊಂದರಿಂದ ಮಾತ್ರ ದುಡಿಯುವ ದಲಿತ ಸಮುದಾಯಗಳಿಗೆ ಬಿಡುಗಡೆ ಸಿಗುವುದಿಲ್ಲ. ಸ್ವತಂತ್ರ ಭಾರತದಲ್ಲೂ ಅವರು ಶ್ರೇಣೀಕೃತ ಜಾತಿ ವ್ಯವಸ್ಥೆಯ ಗುಲಾಮಗಿರಿಯಲ್ಲೇ ನರಳಬೇಕಾಗುತ್ತದೆ. ಅದಕ್ಕಾಗಿ ಸ್ವತಂತ್ರ ಭಾರತದಲ್ಲಿ ನನ್ನ ಜನರಿಗೇನು? ಎಂಬ ಪ್ರಶ್ನೆ ಎತ್ತಿದರು. ಬ್ರಿಟಿಷರು ಮತ್ತು ಮೊಗಲರು ಬರುಬುದಕ್ಕಿಂತ ಮೊದಲಿನಿಂದಲೂ ಯಾತನೆ ಪಡುತ್ತಿದ್ದ ಕರ್ಮ ಸಿದ್ಧಾಂತದಲ್ಲಿ ಅಗೋಚರ ಬೇಡಿಗಳಿಂದ ಬಂಧಿತರಾಗಿದ್ದ ನನ್ನ ಜನರಿಗೆ ಸ್ವಾತಂತ್ರ ಯಾವಾಗ ಎಂದು ಪ್ರಶ್ನಿಸಿದ ಅವರು ಪಟ್ಟು ಹಿಡಿದರು. ಪುಣೆ ಒಪ್ಪಂದದ ಸಂದರ್ಭದಲ್ಲಿ ಉಪವಾಸ ಕುಳಿತಿದ್ದ ಗಾಂಧೀಜಿಯವರನ್ನು ಬದುಕಿಸಲು ಒಂದಿಷ್ಟು ರಾಜಿ ಮಾಡಿಕೊಂಡು ಅಂಬೇಡ್ಕರ್ ತಮ್ಮ ಗುರಿ ಸಾಧಿಸಿದರು. ಇವರಿಬ್ಬರ ನಡುವೆ ವೈಯಕ್ತಿಕ ಹಗೆತನ ಇರಲಿಲ್ಲ. ಶತಮಾನಗಳ ನೋವಿನಿಂದ ಅಂಬೇಡ್ಕರ್ ಗಾಂಧೀಜಿಯನ್ನು ಒರಟಾದ ಭಾಷೆಯಲ್ಲಿ ಬೈದರು ಅದರಲ್ಲಿ ನಂಜಿರಲಿಲ್ಲ. ಇದು ಗಾಂಧೀಜಿಗೂ ಗೊತ್ತಿತ್ತು. ಅಂತಲೇ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷತೆ ಪ್ರಶ್ನೆ ಎದುರಾದಾಗ ಗಾಂಧೀಜಿ ಬಾಬಾಸಾಹೇಬರ ಹೆಸರನ್ನು ಸೂಚಿಸಿದರು. ಇವರಂತೆ ನಮ್ಮ ಮುಂದಿರುವ ಸವಾಲುಗಳು ಮತ್ತು ಆದ್ಯತೆಗಳು ಯಾವವು ಎಂಬುದನ್ನು ಮೊದಲು ಗುರುತಿಸಬೇಕು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಹುತ್ವದ ಬದುಕು ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.ಆರ್ಥಿಕ, ಸಾಮಾಜಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಇವುಗಳನ್ನು ಎದುರಿಸುವುದು ಆರೋಗ್ಯಕರ ಬದುಕಿಗಾಗಿ ಸ್ಪಂದಿಸುವ ಸಮಾನ ಮನಸ್ಕರ ಮೊದಲ ಆದ್ಯತೆ ಆಗಬೇಕು. ಪ್ರಸಕ್ತ ವರ್ತಮಾನದ ಬದುಕಿಗೆ ಸಂಬಂಧ ಪಡದ ವಿಷಯ ಗಳ ಸುತ್ತ ಗಾಳಿ ಗುದ್ದಾಟದಲ್ಲಿ ಪ್ರಯೋಜನವಿಲ್ಲ. ಇದೇ ಮಾನದಂಡ ವೈಯಕ್ತಿಕ ಬದುಕಿಗೆ ಕೂಡ ಅನ್ವಯವಾಗುತ್ತದೆ.

ಭಾರತ ಬ್ರಿಟಿಷ್ ವಸಾಹತುಶಾಹಿಯ ದಾಸ್ಯಕ್ಕೆ ಸಿಲುಕಿದ ಆ ದಿನಗಳಲ್ಲಿ ವಿದೇಶಿ ಆಳ್ವಿಕೆಯಿಂದ ಮೊದಲು ವಿಮೋಚನೆ ಎಂಬ ಗಾಂಧಿ ಮಾರ್ಗ ಅವರ ದೃಷ್ಟಿಯಿಂದ ಸರಿಯಾಗಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಮುನ್ನವೇ ಇಲ್ಲಿ ಸ್ವಾತಂತ್ರ ಹೋರಾಟದ ಸಂಚಲನ ಆರಂಭವಾಗಿತ್ತು. ಮಹಾರಾಷ್ಟ್ರದ ಬಾಲ ಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮೊದಲಾ ದವರು ಪ್ರತಿರೋಧದ ಧ್ವನಿ ಎತ್ತಿದ್ದರು. ಆದರೆ, ಅದು ಎಲ್ಲರನ್ನೂ ಒಳಗೊಂಡಿ ರಲಿಲ್ಲ. ವ್ಯಾಪಕ ಸ್ವರೂಪ ಪಡೆದಿರಲಿಲ್ಲ. ಗಣೇಶೋತ್ಸವದಂಥ ಕಾರ್ಯಕ್ರಮ ಗಳನ್ನು ಸಂಘಟಿಸಿದರೂ ಕೂಡ ಅದು ಎಲ್ಲ ಭಾರತೀಯ ಸಮುದಾಯಗಳನ್ನು ಒಳಗೊಂಡಿರಲಿಲ್ಲ. ಯಾವುದೇ ಒಂದು ಸಮುದಾಯದ ಜನರು ದನಿಯೆತ್ತಿ ದರೆ ಬ್ರಿಟಿಷರು ಈ ದೇಶ ಬಿಟ್ಟು ಹೋಗುತ್ತಾರೆ ಎಂಬುದು ಸುಳ್ಳಾಯಿತು.ಅಂತಲೇ ಮಹಾತ್ಮಾ ಗಾಂಧಿಯವರು ಭಾರತಕ್ಕೆ ಬಂದ ನಂತರ ಮೊದಲು ದೇಶ ಪರ್ಯಟನೆ ಮಾಡಿದರು. ಭಾರತ ಎಂಬುದು ಆಗ ಇನ್ನೂ ಒಂದು ರಾಷ್ಟ್ರದ ಸ್ವರೂಪವನ್ನು ಪಡೆದಿರಲಿಲ್ಲ. ಊರಿಗೊಬ್ಬ ಪಟೇಲರು,ಗೌಡರು, ನಿರ್ದಿಷ್ಟ ಪ್ರದೇಶಕ್ಕೆ ಒಬ್ಬ ಪಾಳೆಯಗಾರ, ಅವನ ಮೇಲೊಬ್ಬ ರಾಜ. ಇದು ಅಂದಿನ ಭಾರತ. ಈ ನೆಲದಲ್ಲಿ ಒಂದೇ ಭಾಷೆಯನ್ನಾಡುವ, ಇಲ್ಲವೇ ಒಂದೇ ಆಹಾರ ಪದ್ಧತಿಯನ್ನು ಹೊಂದಿದ, ಒಂದೇ ಧರ್ಮದ, ಒಂದೇ ಜಾತಿಯ ಜನರಿಲ್ಲ.ಇಲ್ಲಿ ವಿಭಿನ್ನ ಭಾಷೆಗಳನ್ನಾಡುವ, ವಿಭಿನ್ನ ನಂಬಿಕೆಗಳ, ವಿಭಿನ್ನ ಧರ್ಮಗಳ, ಭಿನ್ನ ಆಹಾರ ಪದ್ಧ್ದತಿ ಹೊಂದಿದ ಜನರಿದ್ದಾರೆ ಎಂಬುದನ್ನು ಭಾರತ ಪರ್ಯಟನೆ ಮೂಲಕ ಅರಿತುಕೊಂಡ ಗಾಂಧೀಜಿ ಈ ನೆಲದ ಎಲ್ಲರನ್ನೂ ಬೆಸೆದು ಒಂದು ಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದರು.ಭಾರತ ಎಂಬುದು ಇಲ್ಲಿ ನೆಲೆಸಿರುವ ಎಲ್ಲಾ ಸಮುದಾಯಗಳಿಗೆ ಸೇರಿದ್ದು ಎಂದು ಪ್ರತಿಪಾದಿಸಿದರು.

ಸ್ವಾತಂತ್ರ ಹೋರಾಟಕ್ಕೆ ಬಲ ತಂದು ಕೊಡಲು ಹಿಂದೂ-ಮುಸ್ಲಿಮ್ ಏಕತೆ ಅಗತ್ಯವಾಗಿದೆ ಎಂದು ಮನಗಂಡು ಆ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮ ಪಟ್ಟರು. ಆದರೆ, ಭಾರತದಲ್ಲಿ ಶತಮಾನಗಳಿಂದ ನಾಯಿ ನರಿಗಳಿಗಿಂತ ಕಡೆಯಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇದ್ದ ಅಸ್ಪಶ್ಯ ದಲಿತ ಸಮುದಾಯದ ನೋವು ಆರಂಭ ದಲ್ಲಿ ಗಾಂಧೀಜಿ ಗಮನಕ್ಕೆ ಬರಲಿಲ್ಲಇದನ್ನು ಅವರ ಗಮನಕ್ಕೆ ಬರುವಂತೆ ಮಾಡಿದವರು ಮೇಧಾವಿ ಡಾ. ಅಂಬೇಡ್ಕರ್. ಲಂಡನ್‌ನಲ್ಲಿ ದುಂಡು ಮೇಜಿನ ಸಭೆಗೆ ಗಾಂಧೀಜಿ ಮತ್ತು ಜಿನ್ನಾ ಅವರಂತೆ ಡಾ. ಅಂಬೇಡ್ಕರ್ ಅವರೂ ಹೋಗಿದ್ದರು.ಭಾರತದ ವಂಚಿತ ದಲಿತ ಸಮುದಾಯದ ಪರವಾಗಿ ಅಲ್ಲಿ ಮಾತನಾಡಿದ ಅಂಬೇಡ್ಕರ್, ''ಭಾರತಕ್ಕೆ ಸ್ವಾತಂತ್ರ ಕೊಡುವ ಮೊದಲು ನನ್ನ ಜನರ ಬದುಕಿನ ಪ್ರಶ್ನೆ ಇತ್ಯರ್ಥವಾಗಬೇಕು'' ಎಂದು ಪಟ್ಟು ಹಿಡಿದರು. ಉಳಿದವರು ಬ್ರಿಟಿಷರು ಬಂದ ನಂತರ ಸ್ವಾತಂತ್ರವನ್ನು ಕಳೆದುಕೊಂಡರೆ ನನ್ನ ಜನ ಬ್ರಿಟಿಷರು ಬರುವುದಕ್ಕಿಂತ ಮೊದಲಿನಿಂದಲೂ ಅಂದರೆ ಸಾವಿರಾರು ವರ್ಷಗಳಿಂದಲೂ ಸ್ವಾತಂತ್ರ ಕಳೆದುಕೊಂಡಿದ್ದಾರೆ. ಭಾರತದಿಂದ ಬ್ರಿಟಿಷರು ಹೋದ ನಂತರವೂ ನಮಗೆ ಸ್ವಾತಂತ್ರ ಸಿಗುವುದಿಲ್ಲ.ಜಾತಿ ಪದ್ಧತಿಯ ಯಮ ಪಾಶದಲ್ಲಿ ನಲುಗಿದ ದಲಿತರ ವಿಮೋಚನೆ ಆಗುವುದಿಲ್ಲ. ಕಾರಣ ಸ್ವಾತಂತ್ರಾ ನಂತರ ನನ್ನ ಜನರ ಸುರಕ್ಷತೆ,ಸಮಾನತೆಯ ಪ್ರಶ್ನೆ ಮೊದಲು ಇತ್ಯರ್ಥ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದರು.

ಇವರಿಬ್ಬರ ಮಾರ್ಗ ಸ್ಪಷ್ಟವಾಗಿತ್ತು. ತಮ್ಮ ಗುರಿ ಸಾಧನೆಗಾಗಿ ಹೊಂದಾಣಿಕೆ ಮಾಡಿಕೊಳ್ಳುವ, ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಮನೋಭಾವ ಮತ್ತು ಅನಿವಾರ್ಯತೆ ಮಹಾತ್ಮಾ ಗಾಂಧೀಜಿಯವರಿಗಿತ್ತು. ಅಂತಲೇ ಅಂಬೇಡ್ಕರ್ ಅವರು ಎತ್ತಿದ ಪ್ರಶ್ನೆಗಳಿಗೆ ಸ್ಪಂದಿಸಿದರು. ಮೀಸಲು ವ್ಯವಸ್ಥೆ ಗೆ ಸಂಬಂಧಿಸಿದಂತೆ ಪುಣೆಯಲ್ಲಿ ಹಲವಾರು ಸುತ್ತಿನ ಮಾತುಕತೆ ನಡೆದು ಕೊನೆಗೆ ಒಪ್ಪಂದಕ್ಕೆ ಸಮ್ಮತಿ ನೀಡಿದರು.ಈ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೂ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದ ಬಾಪೂಜಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅಂಬೇಡ್ಕರ್ ಒಪ್ಪಂದಕ್ಕೆ ಒಪ್ಪಿಗೆ ನೀಡುವ ದೊಡ್ಡತನ ತೋರಿಸಿದರು. ಇದು ಯಾರೊಬ್ಬರ ಸೋಲು ಗೆಲುವಿನ ಪ್ರಶ್ನೆಯಲ್ಲ.ದೇಶದ ಹಿತದೃಷ್ಟಿಯಿಂದ ಇಬ್ಬರೂ ಕೈಗೊಂಡ ದಿಟ್ಟ ನಿರ್ಧಾರ.ನಮ್ಮ ಹಿಂದಿನ ರಾಷ್ಟ್ರ ನಾಯಕರಿಗೆ ಇಂಥ ಒಂದು ಪರಸ್ಪರ ತಿಳುವಳಿಕೆ ಇತ್ತು. ಆದರೆ, ಇದೇ ಹೊಂದಾಣಿಕೆ ಸಾವರ್ಕರ್ ಜೊತೆ ಮೇಲ್ಕಂಡ ಇಬ್ಬರಿಗೂ ಇರಲಿಲ್ಲ.

ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯಗಳನ್ನು ಅವರು ಬದುಕಿದ ಕಾಲ ಘಟ್ಟದಲ್ಲಿ ಇಟ್ಟು ಅಧ್ಯಯನ ಮಾಡಬೇಕು. ಅಂದಿನ ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಗಾಂಧೀಜಿ ಬಗ್ಗೆ ನಾವು ಈಗ ಇಂದಿನ ಬದಲಾದ ಸನ್ನಿವೇಶದಲ್ಲಿ ತಪ್ಪು ಕಲ್ಪನೆ ಹೊಂದುವುದು ಎಷ್ಟು ಸಮರ್ಪಕ? ಈಗ ನಮ್ಮ ಮುಂದಿರುವ ಸವಾಲು ಯಾವುದು? ಈಗ ನಮ್ಮ ನಡುವೆ ಬದುಕಿಲ್ಲದ ಮತ್ತು ಮೆದುಳಿಗೆ ವಿಷ ತುಂಬಿದ ಹೊಸ ಪೀಳಿಗೆಯ ದಾರಿ ತಪ್ಪಿದ ವಾಟ್ಸ್‌ಆ್ಯಪ್ ಪ್ರಚಾರದ ಇಂದಿನ ದಿನಗಳಲ್ಲಿ ಗಾಂಧೀಜಿ ಮತ್ತು ಬಾಬಾಸಾಹೇಬರ ನೈಜ ಅನುಯಾಯಿಗಳು ತಮ್ಮ ನಿಜವಾದ ಸೈದ್ಧಾಂತಿಕ ಶತ್ರು ಯಾರೆಂದು ಗುರುತಿಸಿಕೊಳ್ಳಬೇಕಾಗಿದೆ.

ಗಾಂಧಿಯವರಿಗಂತೂ ಈಗ ಅನುಯಾಯಿಗಳೇ ಇಲ್ಲ.ಆದರೂ ನಮ್ಮ ಪ್ರಧಾನಿ ಮತ್ತು ಇತರ ಅತಿ ಗಣ್ಯರು ವಿದೇಶಕ್ಕೆ ಹೋದರೆ ಗಾಂಧಿ ದೇಶದಿಂದ ಬಂದಿದ್ದೇವೆ ಎಂದು ಹೇಳುತ್ತಾರೆಯೇ ವಿನಃ ಗೋಡ್ಸೆ ದೇಶದಿಂದ ಬಂದಿದ್ದೇವೆ ಎಂದು ಹೇಳುವುದಿಲ್ಲ.

ಆದರೆ, ಇದೇ ಪರಿಸ್ಥಿತಿ ಎಷ್ಟು ದಿನ ಇರುತ್ತದೆ. ಭಾರತದ ಸ್ವಾತಂತ್ರ ಹೋರಾಟದ ಮುಂಚೂಣಿ ನಾಯಕ ಗಾಂಧೀಜಿಯವರಾದರೆ ಸ್ವತಂತ್ರ ಭಾರತಕ್ಕೆಒಂದು ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಈಗ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವೇ ಅಪಾಯದಲ್ಲಿದೆ. ಇಂಥ ಸಂಕಷ್ಟದ ಸನ್ನಿವೇಶ ದಲ್ಲಿ ಸಂವಿಧಾನವನ್ನು ಮತ್ತು ಸ್ವಾತಂತ್ರ ವನ್ನು ಕಾಪಾಡಿಕೊಳ್ಳಲು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಒಪ್ಪಿಕೊಳ್ಳುವವರು ಒಂದಾಗಬೇಕಾಗಿದೆ.

ಮೊದಲು ಅಂತರ್ಜಾತಿ ಮತ್ತು ಅಂತಧರ್ಮೀಯ ಮದುವೆಗಳನ್ನು ವಿರೋಧಿಸುತ್ತಿದ್ದ ಗಾಂಧೀಜಿ ಕ್ರಮೇಣ ತಮ್ಮ ಅಭಿಪ್ರಾಯವನ್ನು ಬದಲಿಸಿ ಕೊಂಡರು. ತಮ್ಮ ಆಶ್ರಮದಲ್ಲೇ ಜಾತಿ ರಹಿತ ಮದುವೆಗಳನ್ನು ಮಾಡಿಸಿದರು. ನಮ್ಮ ಹಾವೇರಿ ಜಿಲ್ಲೆಯ ಸಂಗೂರಿನ ಸ್ವಾತಂತ್ರ ಹೋರಾಟಗಾರ ಕರಿಯಪ್ಪ ಯರೆಸೀಮಿ ಅವರು ಗಾಂಧಿ ಆಶ್ರಮದಲ್ಲೇ ಆ ಕಾಲದಲ್ಲಿ ದಲಿತ ಯುವತಿ ಯೊಂದಿಗೆ ವಿವಾಹವಾದರು. ಕೊನೆಗೆ ಗಾಂಧೀಜಿ ಎಲ್ಲಿಯವರೆಗೆ ಹೋದ ರೆಂದರೆ ಸ್ವಜಾತಿಯ ಮದುವೆಗಳಿಗೆ ಅವರು ಹೋಗುತ್ತಿರಲಿಲ್ಲ.

ಬಾಬಾಸಾಹೇಬರಂತೂ ತುಂಬಾ ಎತ್ತರದ ಶ್ರೇಷ್ಠ ಮಾನವ. ಅವಮಾನ ಗಳನ್ನು ನುಂಗಿಕೊಂಡೇ ಬೆಳೆದ ಅವರು ಸಾವಿರಾರು ಅಡ್ಡಿ ಆತಂಕಗಳನ್ನು ದಾಟಿ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿಬಂದರು. ವಕೀಲಿ ವೃತ್ತಿಗೆ ಅಂಟಿಕೊಂಡಿದ್ದರೆ ಕೋಟ್ಯಂತರ ರೂಪಾಯಿ ಗಳಿಸಬಹುದಾಗಿದ್ದ ಅವರು ದೇಶಕ್ಕಾಗಿ, ಜನರಿಗಾಗಿ ತಮ್ಮನ್ನು ತಾವು ದೀಪದಂತೆ ಸುಟ್ಟುಕೊಂಡು ಬೆಳಕು ನೀಡಿದರು. ಇದು ಗೊತ್ತಿದ್ದ ಗಾಂಧೀಜಿ ಅಂಬೇಡ್ಕರ್ ಅವರನ್ನು ತುಂಬಾ ಗೌರವಿಸುತ್ತಿದ್ದರು. ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತದ ಎಲ್ಲಾ ಸಮುದಾಯಗಳ ಉನ್ನತಿಗೆ ಅಗತ್ಯವಾದ ಅಂಶಗಳಿವೆ. ತನ್ನನ್ನು, ತನ್ನ ಸಮುದಾಯವನ್ನು ಶತಮಾನಗಳಿಂದ ತುಳಿದ ಜಾತಿ, ಸಮುದಾಯಗಳ ಬಗೆಗೂ ಅವರಿಗೆ ದ್ವೇಷ ವಿರಲಿಲ್ಲ. ಆದರೆ, ಈ ಸಮುದಾಯಗಳ ಜಾತಿವಾದಿ ಮನೋಭಾವ ಇಂದಿಗೂ ಬದಲಾಗಿಲ್ಲ.

ಗಾಂಧೀಜಿ ಧಾರ್ಮಿಕ ವ್ಯಕ್ತಿಯಾಗಿದ್ದು ನಿಜ.ಆರಂಭದಲ್ಲಿ ವರ್ಣಾಶ್ರಮ ಪದ್ಧತಿಯಲ್ಲಿ ಅವರಿಗೆ ನಂಬಿಕೆಯಿತ್ತು. ಆದರೆ ಅವರು ಕೋಮುವಾದಿ ಆಗಿರಲಿಲ್ಲ. ಮನುವಾದಿಯೂ ಅಲ್ಲ. ಕೋಮುವಾದಿ ಆಗಿರಲಿಲ್ಲವೆಂದೇ ಅವರು ಗೋಡ್ಸೆಯ ಗುಂಡಿಗೆ ಬಲಿಯಾದರು. ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಈ ಅಂಶಗಳನ್ನೆಲ್ಲ ನಾವು ಗಮನಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಗ್ಗೆ ಸಮಚಿತ್ತದ ಅಧ್ಯಯನ ನಡೆಯಬೇಕಾಗಿದೆ.ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕೇಶವ ಮಳಗಿ ಅವರು ಬರೆದ 'ದಾರಿ ಬೇರೆ ಗುರಿ ಒಂದೇ' ಎಂಬ ಪುಸ್ತಕ ಮತ್ತು ಡಿ.ಎಸ್. ನಾಗಭೂಷಣ ಅವರ 'ಗಾಂಧಿ' ಪುಸ್ತಕ ಗಳು ಹೊಸ ಬೆಳಕನ್ನು ಚೆಲ್ಲುತ್ತವೆ. ಈ ನಿಟ್ಟಿನಲ್ಲಿ ಬಹುತ್ವ ಭಾರತದ ಉಳಿವಿಗೆ ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ಹೊಸ ದಾರಿಯನ್ನು ಕಂಡು ಕೊಂಡು ಸಮತೆಯ ಗುರಿಯನ್ನು ಸಾಧಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)