ರಿಯಾದ್ ನಲ್ಲಿ ಸೌಹಾರ್ದ ಪಂದ್ಯ: ರೊನಾಲ್ಡೊ-ಮೆಸ್ಸಿ ಮುಖಾಮುಖಿ
ಹೊಸದಿಲ್ಲಿ: ಆಧುನಿಕ ಯುಗದ ಇಬ್ಬರು ಶ್ರೇಷ್ಠ ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ಗುರುವಾರ ರಿಯಾದ್ ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾರೆ.
ಅರ್ಜೆಂಟೀನದ ಪರ FIFA ವಿಶ್ವಕಪ್ 2022 ಅನ್ನು ಗೆದ್ದ ನಂತರ ರೊನಾಲ್ಡೊ ನೇತೃತ್ವದ ಸೌದಿ ಆಲ್-ಸ್ಟಾರ್ XI (ರಿಯಾದ್ XI) ವಿರುದ್ಧ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ತಂಡವನ್ನು ಮೆಸ್ಸಿ ಮುನ್ನಡೆಸುತ್ತಿದ್ದಾರೆ. ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ ರಂತಹ ವಿಶ್ವ ದರ್ಜೆಯ ಆಟಗಾರರನ್ನು ಒಳಗೊಂಡಿರುವ ಪಿಎಸ್ ಜಿ ಪರ ಮೆಸ್ಸಿ 3ನೇ ನಿಮಿಷದಲ್ಲಿ ಗಳಿಸಿದರು. ಮೆಸ್ಸಿ ಗೋಲು ನೆರವಿನಿಂದ ಪಿಎಸ್ ಜಿ 1-0 ಮುನ್ನಡೆ ಪಡೆದಿತ್ತು. 34ನೇ ನಿಮಿಷದಲ್ಲಿ ರೊನಾಲ್ಡೊ ಬಾರಿಸಿದ ಗೋಲಿನ ನೆರವಿನಿಂದ ಸೌದಿ ಅಲ್ ಸ್ಟಾರ್ ಇಲೆವೆನ್ ಸಮಬಲ ಸಾಧಿಸಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ನೊಂದಿಗಿನ ನಂಟನ್ನು ಕಡಿದುಕೊಂಡ ನಂತರ ರೊನಾಲ್ಡೊ ಇತ್ತೀಚೆಗೆ ಅಲ್-ನಸ್ರ್ ಫುಟ್ಬಾಲ್ ಕ್ಲಬ್ ಗೆ ಸೇರಿದ್ದರು.
ಖತರ್ನಲ್ಲಿ ನಡೆದ FIFA ವಿಶ್ವಕಪ್ನಲ್ಲಿ ಪೋರ್ಚುಗಲ್ನ ಅಭಿಯಾನ ಬೇಗನೆ ಕೊನೆಗೊಂಡ ನಂತರ ಸೌದಿ ಅರೇಬಿಯಾದಲ್ಲಿ ರೊನಾಲ್ಡೊ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.
ಖತರ್ ವಿಶ್ವಕಪ್ ನ ನಾಕೌಟ್ ಸುತ್ತಿನಲ್ಲಿ ಪೋರ್ಚುಗಲ್ ನಿರ್ಗಮಿಸಿದ ನಂತರ ರೊನಾಲ್ಡೊ ರಿಯಾದ್ ಮೂಲದ ಅಲ್ ನಸ್ರ್ ಫುಟ್ಬಾಲ್ ಕ್ಲಬ್ನೊಂದಿಗೆ ಎರಡೂವರೆ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು.