varthabharthi


ನಿಮ್ಮ ಅಂಕಣ

ಕಾಲನ ಕರೆಗೆ ಓಗೊಟ್ಟ ಆಲದ ಮರ

ವಾರ್ತಾ ಭಾರತಿ : 22 Jan, 2023
ನಾ. ದಿವಾಕರ


ಇತ್ತೀಚೆಗೆ (ಜನವರಿ 19ರಂದು) ಅಗಲಿದ ಪ. ಮಲ್ಲೇಶ್ ಎರಡು ದಶಕಗಳ ಒಡನಾಟ ಎನ್ನಬಹುದಾದರೂ, ಕಳೆದ ನಾಲ್ಕೈದು ವರ್ಷಗಳ ನಿಕಟ ಒಡನಾಟದಲ್ಲಿ ಪ. ಮಲ್ಲೇಶ್ ನನಗೆ ಕಂಡದ್ದು ಹಲವು ಬಗೆಗಳಲ್ಲಿ, ಹಲವು ಆಯಾಮಗಳಲ್ಲಿ, ಹಲವು ನೆಲೆಗಳಲ್ಲಿ. ಹೋರಾಟಗಾರರಾಗಿ, ಚಿಂತಕರಾಗಿ, ಅಧಿಕಾರ ರಾಜಕಾರಣದಲ್ಲಿ ಇಲ್ಲದಿದ್ದರೂ ಸಕ್ರಿಯ ಮತ್ತು ಕ್ರಿಯಾಶೀಲ ರಾಜಕೀಯ ಪ್ರಜ್ಞೆಯುಳ್ಳವರಾಗಿ, ಸಮಾಜ ಸುಧಾರಣೆಯ ಕಾರ್ಯಕರ್ತರಾಗಿ, ಗಾಂಧಿ ಮತ್ತು ಲೋಹಿಯಾವಾದವನ್ನು ಉಸಿರಾಡಿದ ಸಮಾಜವಾದಿಯಾಗಿ ಮತ್ತು ಎಲ್ಲಕ್ಕಿಂತಲೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ, ಸಮಸ್ಯೆಗೂ ಥಟ್ಟನೆ ಸ್ಪಂದಿಸುವ ಓರ್ವ ಹೋರಾಟಗಾರರಾಗಿ. ಕನ್ನಡ ಭಾಷೆಗಾಗಿ ಹೋರಾಡುವವರು ಹೇರಳವಾಗಿದ್ದರೂ ಕನ್ನಡವನ್ನೇ ಉಸಿರಾಡುವ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ, ಮೊದಲನೇ ತರಗತಿಯಿಂದ ಪದವಿಪೂರ್ವದವರೆಗೆ ಕನ್ನಡ ಮಾಧ್ಯಮದ ಶಾಲೆಯೊಂದನ್ನು, ಉಚಿತವಾಗಿ ಬಡಮಕ್ಕಳಿಗಾಗಿಯೇ ನಡೆಸಿರುವ ವ್ಯಕ್ತಿಗಳು ವಿರಳ. ಅಂತಹ ವ್ಯಕ್ತಿಗಳಲ್ಲಿ ಪ. ಮಲ್ಲೇಶ್ ನಮ್ಮ ಕಾಲಘಟ್ಟದ ಪ್ರಮುಖರಾಗಿ ಕಾಣುತ್ತಾರೆ. ಅವರಿಗೆ 'ಕನ್ನಡ ಭಾಷೆ' ಒಂದು ಹೋರಾಟದ ಆಕರ ಮಾತ್ರ ಆಗಿರಲಿಲ್ಲ ಅಥವಾ ನಾಲ್ಕು ದಶಕಗಳಿಂದ ಅವರೇ ಕಟ್ಟಿ ನಡೆಸುತ್ತಿದ್ದ ಕನ್ನಡ ಕ್ರಿಯಾ ಸಮಿತಿ ಕೇವಲ ಪ್ರತಿರೋಧಗಳ ನೆಲೆಯಾಗಿಯೂ ಇರಲಿಲ್ಲ. ಅದು ಕನ್ನಡ ಭಾಷೆ ಮತ್ತು ಕನ್ನಡಿಗರ ಜೀವನೋಪಾಯದ ಮಾರ್ಗಗಳನ್ನು ಸಮೀಕರಿಸುತ್ತಾ, ಭಾಷಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಸಂಘಟನೆಯಾಗಿತ್ತು.

ಮಾತೃಭಾಷೆಯ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿ ಗೋಕಾಕ್ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಪ. ಮಲ್ಲೇಶ್ ಅವರ ದೃಷ್ಟಿಯಲ್ಲಿ ಕನ್ನಡ ಎನ್ನುವುದು ಕೇವಲ ಭಾಷೆ ಆಗಿರಲಿಲ್ಲ. ಕನ್ನಡ ನಾಡಿನ, ವೈಯಕ್ತಿಕವಾಗಿ ಅವರ ಬದುಕಿನ ಜೀವನಾಡಿಯೂ ಆಗಿತ್ತು. ಪ. ಮಲ್ಲೇಶ್ ಅವರನ್ನು ಕನ್ನಡ ಪರ ಹೋರಾಟಗಾರರು ಎಂದು ಬಿಂಬಿಸುವುದು ಬಹುಶಃ ಅರ್ಧಸತ್ಯ ನುಡಿದಂತಾಗುತ್ತದೆ. ಏಕೆಂದರೆ ಅವರು ಮೂಲತಃ ಜೀವಪರರಾಗಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಕಾರ್ಖಾನೆಗಳ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ನಗರೀಕರಣದಿಂದ, ಕೈಗಾರಿಕೀಕರಣದಿಂದ ಭೂಮಿ ಕಳೆದುಕೊಂಡವರು, ಸೂರಿಗಾಗಿ ಹೋರಾಡುವ ಅಲೆಮಾರಿಗಳು, ಅರಣ್ಯಗಳಿಂದ ಒಕ್ಕಲೆಬ್ಬಿಸಲ್ಪಡುವ ಆದಿವಾಸಿಗಳು, ಅತ್ಯಾಚಾರ-ದೌರ್ಜನ್ಯ ಮತ್ತು ತಾರತಮ್ಯಗಳಿಗೆ ಈಡಾಗುತ್ತಲೇ ಇರುವ ಮಹಿಳಾ ಸಮೂಹ, ಶಿಕ್ಷಣ ವಂಚಿತ ಮಕ್ಕಳು, ಶೈಕ್ಷಣಿಕ ವಲಯದಲ್ಲಿ ಸೌಲಭ್ಯವಂಚಿತ ವಿದ್ಯಾರ್ಥಿ ಸಮುದಾಯ, ಅಲ್ಪಸಂಖ್ಯಾತರು, ಅಸ್ಪೃಶ್ಯತೆಯೇ ಮುಂತಾದ ದೌರ್ಜನ್ಯಗಳನ್ನು ಇಂದಿಗೂ ಎದುರಿಸುತ್ತಿರುವ ದಲಿತ ಸಮುದಾಯ ಹೀಗೆ ಸಮಾಜದ ಎಲ್ಲ ಸ್ತರಗಳ, ಎಲ್ಲ ನೆಲೆಗಳ ಮತ್ತು ಎಲ್ಲ ಆಯಾಮಗಳ ಜನಸಮುದಾಯಗಳು ದಿನನಿತ್ಯ ಎದುರಿಸುವ/ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು ಸದಾ ಸನ್ನದ್ಧರಾಗಿರುತ್ತಿದ್ದ ಜೀವಪರ ಚಿಂತಕರಾಗಿ ಪ. ಮಲ್ಲೇಶ್ ಕಾಣುತ್ತಾರೆ.

ಮೈಸೂರಿನ ಜನಪರ ಹೋರಾಟಗಳು ಯಾವುದೇ ಸ್ವರೂಪದ್ದಾಗಿದ್ದರೂ, ಯಾವುದೇ ಸೈದ್ಧಾಂತಿಕ ನೆಲೆಯನ್ನು ಹೊಂದಿದ್ದರೂ, ಪ. ಮಲ್ಲೇಶ್ ಅಂತಹ ಹೋರಾಟಗಳ ಮುಂಚೂಣಿ ಧ್ವನಿಯಾಗಿ ಕಾಣುತ್ತಿದ್ದರು. ವೈಯಕ್ತಿಕವಾಗಿ ಅವರೊಡನೆ ನನ್ನ ಆಪ್ತ ಸಂಬಂಧ ಬೆಳೆದಿದ್ದೂ ಈ ಹೋರಾಟಗಳ ನೆಲೆಯಲ್ಲೇ. ತುರ್ತುಪರಿಸ್ಥಿತಿಯಿಂದ ಹಿಡಿದು ಇತ್ತೀಚಿನ ಪಠ್ಯಕ್ರಮ ಪರಿಷ್ಕರಣೆ, ಹಲಾಲ್-ಜಟ್ಕಾ-ಹಿಜಾಬ್ ವಿವಾದದವರೆಗೂ, ಗೋಕಾಕ್ ಚಳುವಳಿಯಿಂದ ಶಾಸ್ತ್ರೀಯ ಕನ್ನಡ-ಎನ್‌ಟಿಎಂಎಸ್ ಶಾಲೆಯ ಹೋರಾಟದವರೆಗೂ ಮಲ್ಲೇಶ್ ಅವರ ಪಯಣವನ್ನು ಗಮನಿಸಿದಾಗ, ಸೈದ್ಧಾಂತಿಕವಾಗಿ ಗಾಂಧಿವಾದ ಮತ್ತು ಲೋಹಿಯಾ ಸಮಾಜವಾದಕ್ಕೆ ಬದ್ಧರಾಗಿದ್ದರೂ, ಎಡಪಂಥೀಯ, ದಲಿತ, ಮಹಿಳಾ ಸಂವೇದನೆಯ ಎಲ್ಲ ತಾತ್ವಿಕ ಹೋರಾಟಗಳಲ್ಲೂ ಮುಕ್ತ ಮನಸ್ಸಿನಿಂದ ಪಾಲ್ಗೊಂಡು ಮುಂಚೂಣಿಯಲ್ಲಿ ನಿಲ್ಲುತ್ತಿದ್ದುದು ಅವರ ಹಿರಿಮೆ. ಕೋಮುವಾದ, ಮತಾಂಧತೆ ಮತ್ತು ಭಾರತದ ಬಹುತ್ವ ಸಂಸ್ಕೃತಿಗೆ ವ್ಯತಿರಿಕ್ತವಾದ ಎಲ್ಲವನ್ನೂ ನಿಷ್ಠುರವಾಗಿ ನಿರಾಕರಿಸಿ ವಿರೋಧಿಸುತ್ತಿದ್ದ, ಮಲ್ಲೇಶ್ ಅವರಲ್ಲಿ ದ್ವೇಷ ಭಾವನೆ ಕಿಂಚಿತ್ತೂ ಇರಲಿಲ್ಲ. ಮಾನವತೆಯನ್ನು ಪ್ರೀತಿಸುವ ಎಲ್ಲರನ್ನೂ ಪ್ರೀತಿಸುತ್ತಿದ್ದ ಮಲ್ಲೇಶ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಲೂ ಇಚ್ಛಿಸದ ಅಸೂಕ್ಷ್ಮ ಸಾಂಸ್ಕೃತಿಕ ಮನಸ್ಸುಗಳು ನಮ್ಮ ನಡುವೆ ಇರುವುದನ್ನು ಕಂಡಾಗ, ಮಲ್ಲೇಶ್ ಅವರ ಮೇರು ವ್ಯಕ್ತಿತ್ವದ ಹಿರಿಮೆ ನಮಗೆ ಮನದಟ್ಟಾಗುತ್ತದೆ.

ವ್ಯಕ್ತಿಗತವಾಗಿ ಮಲ್ಲೇಶ್ ಅವರಲ್ಲಿ ಮನುಜ ಸಹಜ ಗುಣಗಳಾದ ಸಿಟ್ಟು, ಸೆಡವು, ಆಕ್ರೋಶ, ಹತಾಶೆ ಮತ್ತು ಭಾವನಾತ್ಮಕತೆ ಎಲ್ಲವನ್ನೂ ಕಾಣಬಹುದಿತ್ತು. ತಾನು ಮುಂಗೋಪಿ ಎನ್ನುವುದನ್ನು ಸ್ವತಃ ಒಪ್ಪಿಕೊಳ್ಳುತ್ತಿದ್ದ ಮಲ್ಲೇಶ್ ಅವರು ಅನೇಕ ಸಂದರ್ಭಗಳಲ್ಲಿ ತಮ್ಮದೇ ಆದ ಅಭಿವ್ಯಕ್ತಿಗೆ ಪಟ್ಟುಬಿಡದೆ ಅಂಟಿಕೊಂಡರೂ, ತಮ್ಮ ಹಿರಿತನವನ್ನು ಅಭಿಪ್ರಾಯ ಹೇರಿಕೆಯ ಅಸ್ತ್ರವಾಗಿ ಬಳಸುತ್ತಿರಲಿಲ್ಲ. ಐದು ದಶಕಗಳಿಗೂ ಹೆಚ್ಚು ಕಾಲ ಸಮಾಜದ ಎಲ್ಲ ಆಯಾಮಗಳ ಜನಪರ ಹೋರಾಟಗಳನ್ನು ಕಂಡಿದ್ದ ಪ. ಮಲ್ಲೇಶ್ ಅವರಿಗೆ ಬಹುತೇಕ ಎಲ್ಲ ಪ್ರಗತಿಪರ ಹೋರಾಟಗಳ ಬಗ್ಗೆಯೂ ಅಸಮಾಧಾನ ಇತ್ತು. ಹೋರಾಟಗಳ ವೈಫಲ್ಯ ಮತ್ತು ಸಂಘಟನೆಗಳಲ್ಲಿನ ದೌರ್ಬಲ್ಯಗಳು ಅವರಲ್ಲಿ ಹತಾಶ ಮನಸ್ಥಿತಿಯನ್ನೂ ಮೂಡಿಸಿತ್ತು. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಿದ್ದರೆ, ಅದು ವ್ಯರ್ಥವಾದಂತೆ ಎಂದೇ ಭಾವಿಸುತ್ತಿದ್ದ ಕಾರಣ ಹೋರಾಟದ ವೈಫಲ್ಯಗಳು ಮತ್ತು ಸಂಘಟನೆಗಳ ದ್ವಂದ್ವ ನೀತಿಗಳು ಮಲ್ಲೇಶ್ ಅವರಲ್ಲಿ ಆಕ್ರೋಶ ಉಂಟುಮಾಡುತ್ತಿತ್ತು.

ಸತ್ಯಸಂಧತೆ, ತತ್ವನಿಷ್ಠೆ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ಧೋರಣೆ ಈ ನಾಲ್ಕು ಮೂಲ ಮಂತ್ರಗಳನ್ನೇ ಉಸಿರಾಡುತ್ತಿದ್ದ ಮಲ್ಲೇಶ್ ಅವರಿಗೆ ಈ ಲಕ್ಷಣಗಳಿಂದ ವಿಮುಖವಾದ ಯಾವುದೇ ವ್ಯಕ್ತಿ/ಸಂಘಟನೆಯ ಬಗ್ಗೆ ಅಸಮಾಧಾನ ತುಸು ಹೆಚ್ಚಾಗಿಯೇ ಇತ್ತು. ಮೈಸೂರಿನಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಗಾಗಿ ಹೋರಾಡುವ ಎಲ್ಲ ಸೈದ್ಧಾಂತಿಕ ಹೋರಾಟಗಳೊಡನೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ ಪ. ಮಲ್ಲೇಶ್ ಬಹುತೇಕ ಎಲ್ಲ ಸಂಘಟನೆಗಳಿಗೂ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಮತ್ತು ಬೀದಿ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿ ಕಾಣುತ್ತಿದ್ದರು. ಹೀಗೆ ಸಿದ್ಧಾಂತದ ಗೋಡೆಗಳನ್ನು ದಾಟಿ ಸಾಮಾನ್ಯ ಜನತೆಯ ನೋವಿಗೆ ಮಿಡಿಯುವ ಅಂತಃಕರಣ ಅವರಲ್ಲಿದ್ದುದು ಮತ್ತು ಪ್ರತಿರೋಧದ ಸುಪ್ತ ಧ್ವನಿ ಇದ್ದುದು ಅವರಲ್ಲಿ ಆಳವಾಗಿ ಬೇರೂರಿದ್ದ ಗಾಂಧಿವಾದದ ಪ್ರೇರಣೆಯಿಂದಲೇ ಎನ್ನಬಹುದು. ಆರು ದಶಕಗಳ ತಮ್ಮ ಹೋರಾಟದ ಬದುಕಿನಲ್ಲಿ, ಜನಪರ ಆಂದೋಲನಗಳ ಎಲ್ಲ ಮಜಲುಗಳನ್ನೂ ಸ್ವತಃ ಪಾಲ್ಗೊಳ್ಳುವಿಕೆಯ ಮೂಲಕ ಕಂಡಿದ್ದ ಪ. ಮಲ್ಲೇಶ್ ಸಹಜವಾಗಿಯೇ ಇತ್ತೀಚಿನ ದಿನಗಳಲ್ಲಿ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಈ ಹತಾಶೆ ಅವರಲ್ಲಿನ ಹೋರಾಟದ ಕಿಚ್ಚು ಮತ್ತು ಆತ್ಮಸ್ಥೈರ್ಯವನ್ನು ಕುಂದಿಸಿರಲಿಲ್ಲ. ಹಾಗಾಗಿಯೇ ಮೈಸೂರಿನ ಜನಪರ ಹೋರಾಟಗಳಿಗೆ, ಸಂಘಟನೆಗಳಿಗೆ ಮತ್ತು ಯುವ ಸಮೂಹಕ್ಕೆ ಪ. ಮಲ್ಲೇಶ್ ಒಂದು ಆಲದ ಮರದಂತೆ ಆಶ್ರಯ ನೀಡಲು ಸಾಧ್ಯವಾಗಿತ್ತು.

ಈ ಆಲದ ಮರ ಇಂದು ಕುಸಿದಿದೆ. ಅದರ ನೆರಳಲ್ಲಿ ತಮ್ಮೆಲ್ಲಾ ತುಡಿತಗಳನ್ನು ಅಭಿವ್ಯಕ್ತಿಸುತ್ತಿದ್ದ ಹೋರಾಟಗಾರರಿಗೆ, ಯುವಪೀಳಿಗೆಗೆ ಮತ್ತು ಜನಪರ ಸಂಘಟನೆಗಳಿಗೆ ಒಂದು ಬೌದ್ಧಿಕ ಆಶ್ರಯ ತಾಣ ಇಲ್ಲವಾಗಿದೆ. ಬಹಳ ವರ್ಷಗಳಿಂದ ಶ್ರಮವಹಿಸಿ ''ಬುದ್ಧ ನಾಗಾರ್ಜುನರಲ್ಲಿ ಶೂನ್ಯ'' ಎಂಬ ಕೃತಿಯನ್ನು ರಚಿಸಿದ್ದ ಪ. ಮಲ್ಲೇಶ್ ಕೃತಿಯ ಬಿಡುಗಡೆಯನ್ನು ಕಾಣದೆ ಹೋದುದು ದುರಾದೃಷ್ಟವೇ ಸರಿ. ಅವರ ನಿರ್ಗಮನವು ಸಮಾನತೆ ಮತ್ತು ಮಾನವತೆಯನ್ನು ಬಯಸುವ ಒಂದು ಸಮಾಜದಲ್ಲೂ ಶೂನ್ಯವನ್ನು ಸೃಷ್ಟಿಸಿದೆ. ಒಂದು ನಿರ್ವಾತವನ್ನು ಸೃಷ್ಟಿಸಿದೆ. ಬಹುಶಃ ಈ ನಿರ್ವಾತವು ಮಲ್ಲೇಶ್ ಅವರು ಎರಡು ಪೀಳಿಗೆಯಲ್ಲಿ ತುಂಬಿದ ಆತ್ಮವಿಶ್ವಾಸದಂತೆಯೇ ಶಾಶ್ವತವಾಗಲಿದೆ. ಅವರ ಹೋರಾಟದ ಸ್ಫೂರ್ತಿ ಮತ್ತು ಜನಪರ ನಿಲುವು, ಸಮಾನತೆಯ ಆಶಯ, ತಾತ್ವಿಕ ಬದ್ಧತೆ ಹಾಗೂ ಬಹುತ್ವದ ಕನಸುಗಳನ್ನು ಸಾಕಾರಗೊಳಿಸುವ ಮೂಲಕ ಆ ನಿರ್ವಾತವನ್ನು ತುಂಬಿಸಬಹುದೇ ಹೊರತು, ಮೈಸೂರಿನ ಜನತೆ ಮತ್ತೊಬ್ಬ ಪ. ಮಲ್ಲೇಶ್ ಅವರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಚಿರನಿದ್ರೆಗೆ ಜಾರಿರುವ ಪ. ಮಲ್ಲೇಶ್ ಅವರು ಬಿಟ್ಟುಹೋದ ಹಾದಿ ಮತ್ತು ಜೀವನಾದರ್ಶಗಳು ಸಮಾನತೆ ಮತ್ತು ಮಾನವತೆಯನ್ನು ಬಯಸುವ ಎಲ್ಲ ಮನಸ್ಸುಗಳಿಗೂ ಶತಮಾನಗಳ ಕಾಲ ಮಾರ್ಗದರ್ಶಕವಾಗಿ ಉಳಿಯುತ್ತವೆ. ಪ. ಮಲ್ಲೇಶ್ ನಮ್ಮೆಡನೆ ಇಲ್ಲವಾದರೂ, ಒಂದು ಜೀವಂತ ಶಕ್ತಿಯಾಗಿ ಜನಮಾನಸದ ನಡುವೆ ಉಳಿಯಲಿದ್ದಾರೆ. ಹೋರಾಟದ ಹಾದಿಯಲ್ಲಿ ಪ್ರತಿಹೆಜ್ಜೆಯಲ್ಲೂ ಅವರ ಸಮಾನತೆಯ ಕೂಗು ಧ್ವನಿಸುತ್ತಲೇ ಇರುತ್ತದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)