ಆರ್ಥಿಕ ಕುಸಿತ: ಉದ್ಯೋಗ ಕಡಿತ ಘೋಷಿಸಿದ ಅಮೆರಿಕದ ಮಾಧ್ಯಮ ಸಂಸ್ಥೆಗಳು
ವಾಷಿಂಗ್ಟನ್, ಜ.22: ಆರ್ಥಿಕ ಅಭಿವೃದ್ಧಿ ಮಂದಗತಿಯಲ್ಲಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಕ್ರಮಕ್ಕೆ ಮುಂದಾಗಿರುವ ಪ್ರಮುಖ ಸಂಸ್ಥೆಗಳ ಸಾಲಿಗೆ ಈಗ ಅಮೆರಿಕದ ಮಾಧ್ಯಮ ಸಂಸ್ಥೆಗಳು ಸೇರಿಕೊಂಡಿವೆ.
ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಅನಿವಾರ್ಯ ಎಂದು ಸಿಎನ್ಎನ್, ವಾಷಿಂಗ್ಟನ್ ಪೋಸ್ಟ್, ಎನ್ಬಿಸಿ, ಎಂಎಸ್ಎನ್ಬಿಸಿ, ವೋಕ್ಸ್ ಮೀಡಿಯಾ ಸಂಸ್ಥೆಗಳು ಘೋಷಿಸಿವೆ.
ವೋಕ್ಸ್ ಮತ್ತು ವರ್ಜ್ ವೆಬ್ಸೈಟ್ಗಳು, ನ್ಯೂಯಾರ್ಕ್ ಪತ್ರಿಕೆ ಮತ್ತದರ ಆನ್ಲೈನ್ ವೇದಿಕೆಗಳನ್ನು ಹೊಂದಿರುವ ಮಾಧ್ಯಮ ದೈತ್ಯ ಸಂಸ್ಥೆ ವೋಕ್ಸ್ ಮೀಡಿಯಾ, ತನ್ನ 7%ದಷ್ಟು ಸಿಬಂದಿಗಳನ್ನು ವಜಾಗೊಳಿಸುವುದಾಗಿ ಶುಕ್ರವಾರ ಘೋಷಿಸಿದೆ. ಉದ್ಯಮ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರುವ ಆರ್ಥಿಕ ಸವಾಲಿನ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಅನಿವಾರ್ಯವಾಗಿದೆ ಎಂದು ವೋಕ್ಸ್ಮೀಡಿಯಾದ ಸಿಇಒ ಜಿಮ್ ಬ್ಯಾಂಕಾಫ್ ಘೋಷಿಸಿದ್ದಾರೆ.
ಅಮೆರಿಕದಲ್ಲಿ ಪತ್ರಕರ್ತರ ನೇಮಕಾತಿ ಪ್ರಕ್ರಿಯೆ ಕ್ರಮೇಣ ಇಳಿಮುಖವಾಗುತ್ತಿದ್ದು 2008ರಲ್ಲಿ 1,14,000 ಪತ್ರಕರ್ತರು ನೇಮಕಗೊಂಡಿದ್ದರೆ 2020ರ ವೇಳೆಗೆ ಇದು 85,000ಕ್ಕೆ ಕುಸಿದಿದೆ ಎಂದು ಪಿವ್ ಸಂಶೋಧನಾ ಕೇಂದ್ರದ ವರದಿ ಹೇಳಿದೆ. ಪತ್ರಿಕೋದ್ಯಮ ದೀರ್ಘಾವಧಿಯಿಂದ ಒತ್ತಡದಲ್ಲಿದೆ ಮತ್ತು ಹಲವು ಸಂಸ್ಥೆಗಳು ತಮ್ಮ ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ಇದು ಸೂಕ್ತಸಮಯ ಎಂದು ಭಾವಿಸಿರುವಂತೆ ತೋರುತ್ತದೆ. ಇದು ಪತ್ರಕರ್ತರು ಮತ್ತು ಪತ್ರಿಕೋದ್ಯಮ ಎರಡರ ಮೇಲೂ ಪರಿಣಾಮ ಬೀರುತ್ತದೆ ಎಂದು ರೈಟರ್ಸ್ ಗಿಲ್ಡ್ ಆಫ್ ಅಮೆರಿಕಾ ಹೇಳಿದೆ.