varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 23 Jan, 2023
ಪಿ.ಎ. ರೈ

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೂರು ಬಾರಿ ಬಂದು ಹೋದರೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
  ಬಂದರೆ ಜೆಡಿಎಸ್ ಬೆಂಬಲಿತ ಬಿಜೆಪಿ ಸರಕಾರ ಮಾತ್ರ ಎಂಬ ನಿಮ್ಮ ಕನಸನ್ನು ಪೂರ್ಣವಾಗಿ ಹಂಚಿಕೊಳ್ಳಿ.

ಆಡಳಿತದಲ್ಲಿ ತಂತ್ರಜ್ಞಾನ ಇಂದಿನ ಅಗತ್ಯ ಮತ್ತು ಅನಿವಾರ್ಯ - ಕೋಟ ಶ್ರೀನಿವಾಸ ಪೂಜಾರಿ , ಸಚಿವ
ತಂತ್ರಜ್ಞಾನ ಎಂಬ ಪದವನ್ನು ಕುತಂತ್ರಕ್ಕೆ ಪರ್ಯಾಯವಾಗಿ ಬಳಸುತ್ತಿದ್ದೀರಾ?

ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಎರಡಲ್ಲ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧಿಸುವುದಿಲ್ಲ - ಕೆ.ಎಸ್.ಈಶ್ವರಪ್ಪ, ಶಾಸಕ
ನಿಮ್ಮ ಸದ್ಯದ ಹತಾಶೆಯಲ್ಲಿ ನೀವು ರಾಜಕೀಯ ಬಿಟ್ಟು ಜ್ಯೋತಿಷ್ಯ ಆರಂಭಿಸಿ ಬಿಟ್ರೇನು?

ಅರ್ಕಾವತಿ ಹಗರಣ ಬಯಲಿಗೆ ಬಂದರೆ ಮುಖ್ಯಮಂತ್ರಿ ಕನಸು ಕಾಣುವ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ -ನಳಿನ್ ಕುಮಾರ್ ಕಟೀಲು, ಸಂಸದ
ನಿಮ್ಮ ಹಗರಣಗಳ ಕಥೆಯೇನು? ಪೂರ್ವಭಾವಿ ವಿನಾಯಿತಿ ಘೋಷಿಸಲಾಗಿದೆಯೇ?

ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟು ಮಾತನಾಡುವುದನ್ನು ಮುಂದುವರಿಸಿದರೆ ನಾಲಿಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ - ಮುರುಗೇಶ್ ನಿರಾಣಿ , ಸಚಿವ
ಕಡಿಯುವುದು, ಕೊಲ್ಲುವುದು ಇವೆಲ್ಲಾ ನಿಮ್ಮ ಪಾಳಯದ ನಿತ್ಯ ಚಟುವಟಿಕಗಳಾದ್ದರಿಂದ ನೀವು ಕೇವಲ ಕತ್ತರಿಸುವ ಮಾತನಾಡಿದರೆ ಜನ ಆ ಕಡೆ ಗಮನ ಹರಿಸುವುದಿಲ್ಲ.

ಕಾಂಗ್ರೆಸ್‌ನಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಪೈಪೋಟಿ ಇಲ್ಲ. - ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ನಾನು ಮೂರನೇ ಅಭ್ಯರ್ಥಿ ಅಲ್ಲ ಅಂತ ಘೋಷಿಸಿ, ಜನರಿಗೆ ಒಂದಷ್ಟು ನೆಮ್ಮದಿಯಾಗುತ್ತದೆ.

ಬಿಜೆಪಿ ಸರಕಾರಗಳಲ್ಲಿ ಯಾವುದೇ ಮಾಧ್ಯಮಗಳ ಮೇಲೆ ನಿಷೇಧ ಹೇರಿಲ್ಲ - ರಾಜನಾಥ ಸಿಂಗ್ , ಕೇಂದ್ರ ಸಚಿವ
ಅನಧಿಕೃತವಾಗಿಯೇ ಎಲ್ಲ ಹಕ್ಕು ಮತ್ತು ಸ್ವಾತಂತ್ರಗಳನ್ನು ಸಂಪೂರ್ಣ ಮೆಟ್ಟಿ ನಿಲ್ಲಲು ಸಾಧ್ಯವಿರುವಾಗ ಅಧಿಕೃತ ನಿಷೇಧದ ಕಿರಿಕಿರಿ ಏತಕ್ಕೆ?

ಸ್ಯಾಂಟ್ರೊ ರವಿಯಂಥವರಿಂದ ಹಣ ಪಡೆದುಕೊಳ್ಳುವ ಸ್ಥಿತಿ ಬಂದರೆ ಆತ್ಮ ಹತ್ಯೆ ಮಾಡಿಕೊಳ್ಳುವೆ - ಆರಗ ಜ್ಞಾನೇಂದ್ರ , ಸಚಿವ
ಈ ವರೆಗೂ ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ಹಣ ಕೊಟ್ಟವರೇ ಹೊರತು ತಕ್ಕೊಂಡವರಲ್ಲ. ಆದ್ದರಿಂದ ನಿಮಗೇಕೆ ಚಿಂತೆ?

ಗಂಗಾ ಮತಸ್ಥರಿಗೆ ಶೀಘ್ರವೇ ಪರಿಶಿಷ್ಟ ವರ್ಗದ ಮೀಸಲಾತಿ ನೀಡಲಾಗುವುದು - ಬಸವರಾಜ ಬೊಮ್ಮಾಯಿ, ಸಿಎಂ
ನಿಮ್ಮ ಔದಾರ್ಯ ಮೆರೆಯುವುದಕ್ಕೆ ಯಾರು ಯಾರದೋ ಹಕ್ಕುಗಳ ದುರುಪಯೋಗ ಏಕೆ?

ಬಿಜೆಪಿ ಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ - ಎಚ್.ಎಂ . ರೇವಣ್ಣ, ಮಾಜಿ ಸಚಿವ
ಆ ಮೂರು ಬಾಗಿಲುಗಳು ಕಾಣಿಸಿದ್ದು ಒಳಪ್ರವೇಶಿಸುವ ತಯಾರಿಯ ವೇಳೆಯೇ ?

ಯಾರೋ ಒಬ್ಬಿಬ್ಬರು ಬಿಜೆಪಿ ಬಿಟ್ಟು ಹೋದ ಮಾತ್ರಕ್ಕೆ ಪಕ್ಷಕ್ಕೆ ಯಾವುದೇ ಹಾನಿ ಆಗುವುದಿಲ್ಲ - ಬಿ.ವೈ. ವಿಜಯೇಂದ್ರ , ಬಿಜೆಪಿ ಉಪಾಧ್ಯಕ್ಷ
ಯಡಿಯೂರಪ್ಪನವರು ಪಕ್ಷ ಬಿಡುತ್ತಾರೆಂಬ ವದಂತಿ ಹಬ್ಬಿದಾಗಲೆಲ್ಲ ಪಕ್ಷದ ಕಡೆಯಿಂದ ಇದೇ ರೆಡಿಮೇಡ್ ಹೇಳಿಕೆ ಬರುತ್ತಿತ್ತು.

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ವಿತ್ತ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ - ಸುನೀಲ್ ಕುಮಾರ್ , ಸಚಿವ
ಹೊಟ್ಟೆ ತುಂಬಾ ಗೊಬ್ಬರ ತಿಂದು ಗೋಮೂತ್ರ ಕುಡಿದು ಮಲಗಬೇಕೆಂಬ ನಿಯಮವನ್ನು ಅವರು ಹೇರಿರಲಿಲ್ಲವಲ್ಲಾ? ಥ್ಯಾಂಕ್ಸ್ ಅನ್ನೋಣ.

ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ ರೂಪಿಸಲಾಗುವುದು - ನಿರ್ಮಲಾ ಸೀತಾರಾಮನ್ , ಕೇಂದ್ರ ಸಚಿವೆ
ಅವರ ಹಿತಾಸಕ್ತಿಗಳೇನೆಂಬುದನ್ನು ಅದಾಣಿ ಅಂಬಾನಿಗಳು ನೀಡುವ ಸವಿಸ್ತಾರ ಮಾರ್ಗದಏಶನ ಆಧಾರದಲ್ಲಿ ತೀರ್ಮಾನಿಸಲಾಗುವುದು - ಅಲ್ಲವೇ?

9 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವುದರಿಂದ 2023 ನಮಗೆ ಬಹಳ ಮುಖ್ಯ - ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಚುನಾವಣೆ ಗೆಲ್ಲುವುದಕ್ಕೆ ಹಿಂಸೆ, ಗಲಭೆ ಇತ್ಯಾದಿಯನ್ನೆಲ್ಲಾ ಸಂಘಟಿಸಬೇಕು, ಇಷ್ಟಾಗಿಯೂ ಸೋತರೆ, ಕತ್ತೆಗಳನ್ನು ಖರೀದಿಸುವ ಹೊಲಸು ವ್ಯಾಪಾರಕ್ಕೆ ಇಳಿಯಬೇಕು - ಕೆಲಸ ನಿಜಕ್ಕೂ ತುಂಬಾ ಇದೆ.

ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಹಲಾಲ್ ಕಟ್ ಆಗೋದು ಖಚಿತ - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಅದಕ್ಕಾಗಿ ನೀವು ಝಟ್ಕಾದವರಜೊತೆ ಕೈಮಿಲಾಯಿಸಿಕೊಂಡಿ ದ್ದೀರಂತೆ?

ಭಾರತದೊಂದಿಗಿನ ಮೂರು ಯುದ್ಧಗಳಿಂದ ಪಾಕಿಸ್ತಾನ ಬಹಳಷ್ಟು ಪಾಠ ಕಲಿತಿದೆ- ಶಹಬಾಝ್ ಷರೀಫ್,ಪಾಕ್ ಪ್ರಾಧಾನಿ
ಕಲಿತ ಪಾಠದ ಆಧಾರದಲ್ಲಿ, ಮುಂದಿನ ಎಲ್ಲ ಯುದ್ಧಗಳನ್ನು ಪಾಕಿಸ್ತಾನದ ಗಡಿಗಳ ಒಳಗೆ, ಒಳಗಿನ ಪಕ್ಷಗಳ ಮಧ್ಯೆಯೇ ನಡೆಸುತ್ತೇವೆಂದು ತೀರ್ಮಾನಿಸಿರುವಿರಾ?

ಸಂತೋಷದ ವಿಷಯ. ದುಶ್ಚಟಗಳ ದಾಸರಾಗದಂತೆ ಮಾನವೀಯ ಸಜ್ಜನರನ್ನು ರೂಪಿಸುವ ರಾಷ್ಟ್ರೀಯ ಶಿಕ್ಷಣ ನೀತಿ ತರುವ ಕೆಲಸ ನಡೆಯುತ್ತಿದೆ- ಬಿ.ಸಿ.ನಾಗೇಶ್, ಸಚಿವ
ಎಲ್ಲ ಪದಗಳನ್ನು ವಿರೋದಾರ್ಥದಲ್ಲಿ ಬಳಸುವ ನಿಮ್ಮ ಪ್ರಾಚೀನ ಕಲೆಯ ಅರಿವುಳ್ಳವರು ಯಾರೂ ಈ ನಿಮ್ಮ ಮಾತುಗಳನ್ನು ನಂಬಿ ಬಂದು ನಿಮ್ಮ ಬಲೆಗೆ ಬೀಳುವುದಿಲ್ಲ.

‘ನಾ ನಾಯಕಿ’ ಯಂತಹ ಕಾಂಗ್ರೆಸ್ ಕಾರ್ಯಕ್ರಮಗಳ ಭರವಸೆಗಳಿಗೆ ಮರುಳಾಗುವಷ್ಟು ನಮ್ಮ ರಾಜ್ಯದ ಮಹಿಳಾ ಮತದಾರರು ದಡ್ಡರಲ್ಲ- ಶಶಿಕಲಾ ಜೊಲ್ಲೆ, ಸಚಿವೆ
ಹೌದು. ಆದರೂ ಅವರು 40ಶೇ ಗಿಂತ ಕಡಿಮೆ ಮಟ್ಟದ ಭ್ರಷ್ಟಾಚಾರದ ಪರ ಒಲವು ತೋರುತ್ತಿದ್ದಾರೆ.

ಮೋದಿ ಭಾರತದಲ್ಲಿ ಹವಾಯಿ ಚಪ್ಪಲಿ ಹಾಕುವವನು ಕೂಡಾ ವಿಮಾನದಲ್ಲಿ ಪ್ರಯಾಣಿಸ ಬಲ್ಲ - ಧರ್ಮೇದ್ರ ಪ್ರಧಾನ್ ಕೇಂದ್ರ ಸಚಿವ
ಕೆಂಪು ಬಸ್ಸಿನ ಟಿಕೆಟು ಖರೀದಿಸಲು ದುಡ್ಡಿಲ್ಲದೆ ರಾತ್ರಿಯೆಲ್ಲಾ ಬಸ್ ನಿಲ್ದಾಣದ ಹೊರಗೆ ಮಲಗಿರುವ ಹತಾಶ ಮಂದಿಗೆ ಈ ಕನಸನ್ನು ಮಾರುತ್ತಿದ್ದೀರಾ?

ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿರಲಿಲ್ಲ, ಅವರು ಕ್ಷಮೆಯನ್ನೂ ಯಾಚಿಸಿಲ್ಲ- ಅಣ್ಣಾ ಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ
ಸದಾ ಸರಕಾರಿ ಬಸ್ಸಿನಲ್ಲಿ ಮಾತ್ರ ಪ್ರಯಾಣಿಸುವ ಆ ಸರಳಜೀವಿ, ಜೀವನದಲ್ಲೆಂದೂ ವಿಮಾನದಲ್ಲಿ ಪ್ರಯಾಣಿಸಿಯೇ ಇಲ್ಲ ಎಂದು ಹೇಳಿ ಬಿಡಿ.

ನಿಮ್ಮ ಗೋದಿ ಮೀಡಿಯಾದವರು ಅದನ್ನೂ ಜಗತ್ತಿಗೆ ತಲುಪಿಸುತ್ತಾರೆ.
ಭಯೋತ್ಪಾದನೆ ಬಿಟ್ಟರೆ ಪಾಕ್ ಜೊತೆ ಸಂಬಂಧಕ್ಕೆ ಭಾರತ ಸಿದ್ಧ - ಅರಿಂದಮ್ ಬಾಗ್ವಿ ವಿದೇಶಾಂಗ ಸಚಿವಾಲಯದ ವಕ್ತಾರ

ಭಯೋತ್ಪಾದನೆ ವಿಷಯದಲ್ಲಿ ಭಾರತ ಸ್ವಾಲಂಬಿಯಾಗುವ ಹಂತದಲ್ಲಿದೆ ಎನ್ನುತ್ತಿರಬೇಕು.

ಹಲವು ರಾಜಕಾರಣಿಗಳ ಜುಟ್ಟು ಸ್ಯಾಂಟ್ರೊ ರವಿ ಕೈಯಲ್ಲಿದೆ- ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಗುಟ್ಟು ಎಂದರೆ ಸ್ಪಷ್ಟವಾಗಿ ಬಿಡುತ್ತದೆ

ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನ ನಮ್ಮ ಮುಖ್ಯೋಪಾಧ್ಯಾಯ ರಲ್ಲ. ಅವರು ಹೆಡ್‌ಮಾಸ್ಟರ್ ರೀತಿ ವರ್ತಿಸಬಾರದು - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಅವರಿಗೆ ನೀವು ಹಿಂದಿನ ಬೆಂಚಿನ ವಿದ್ಯಾರ್ಥಿ ತರಹ ಕಾಣುತ್ತಿರಬೇಕು.

ಗೃಹ ಸಚಿವ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ, ತಮ್ಮ ಆತ್ಮ ಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಅದಕ್ಕೆ ಒಳಗೆ ಆತ್ಮ ಎನ್ನುವುದು ಒಂದು ಇರಬೇಕಲ್ಲವೇ? ಅದುವೇ ಮಾರಾಟವಾಗಿದ್ದರೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು