varthabharthi


ರಾಷ್ಟ್ರೀಯ

ಮಹಿಳೆಯ ಹುಟ್ಟುಹಬ್ಬ: ಪ್ಲ್ಯಾಟ್ ಗೆ ನುಗ್ಗಿ ಬಜರಂಗದಳ ಗುಂಪಿನಿಂದ ಮುಸ್ಲಿಮ್ ಸ್ನೇಹಿತರ ಮೇಲೆ ಹಲ್ಲೆ

ವಾರ್ತಾ ಭಾರತಿ : 24 Jan, 2023

   Photo :Twitter @KashifKakvi (Screengrab)

ಇಂದೋರ್ (ಮಧ್ಯಪ್ರದೇಶ), ಜ. 24: ಮಧ್ಯಪ್ರದೇಶದ ಇಂದೋರ್ನಲ್ಲಿ ಬಜರಂಗ ದಳ ಕಾರ್ಯಕರ್ತರ ಗುಂಪೊಂದು ಮಹಿಳೆಯೊಬ್ಬರ ಫ್ಲಾಟ್ಗೆ ನುಗ್ಗಿ ಅವರ ಪುರುಷ ಮುಸ್ಲಿಮ್ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ‘ದ ಕ್ವಿಂಟ್’ ವರದಿ ಮಾಡಿದೆ. ಈ ಮುಸ್ಲಿಮ್ ವ್ಯಕ್ತಿಗಳು ‘ಲವ್ ಜಿಹಾದ್’ನಲ್ಲಿ ತೊಡಗಿದ್ದಾರೆ ಎಂಬುದಾಗಿ ಹಲ್ಲೆಕೋರರು ಆರೋಪಿಸಿದ್ದಾರೆ.

ಮಹಿಳೆಯು ಶನಿವಾರ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಸಮಾರಂಭಕ್ಕೆ ತನ್ನ ಐವರು ಮುಸ್ಲಿಮ್ ಸ್ನೇಹಿತರನ್ನು ಆಹ್ವಾನಿಸಿದ್ದರು. ಆಗ ಬಜರಂಗ ದಳ ಕಾರ್ಯಕರ್ತರು ಮಹಿಳೆಯ ಮನೆಗೆ ನುಗ್ಗಿ ಮುಸ್ಲಿಮ್ ಪುರುಷರ ಮೇಲೆ ಹಲ್ಲೆ ನಡೆಸಿತು ಎಂದು ‘ದ ಕ್ವಿಂಟ್’ ಹೇಳಿದೆ.

ಬಳಿಕ ಹಲ್ಲೆಕೋರರು ಮುಸ್ಲಿಮ್ ವ್ಯಕ್ತಿಗಳು ಮತ್ತು ಮಹಿಳೆಯನ್ನು ನಗರದ ಎಮ್ಐಜಿ ಕಾಲನಿ ಪೊಲೀಸ್ ಠಾಣೆಗೆ ಒಯ್ದು, ದೂರು ದಾಖಲಿಸುವಂತೆ ಮಹಿಳೆಯನ್ನು ಬಲವಂತಪಡಿಸಿದೆ ಎನ್ನಲಾಗಿದೆ. ಆದರೆ, ಯಾರ ವಿರುದ್ಧವೂ ದೂರು ದಾಖಲಿಸಲು ಮಹಿಳೆ ನಿರಾಕರಿಸಿದರು.

‘‘ಈ ಪ್ರಕರಣದಲ್ಲಿ ಧರ್ಮದ ವಿಷಯವಿದೆಯೇ ಎಂಬ ಬಗ್ಗೆ ನಾನು ಏನೂ ಹೇಳಲಾರೆ. ತನಿಖೆ ನಡೆಯುತ್ತಿದೆ’’ ಎಂದು ಸಬ್ ಇನ್ಸ್ಪೆಕ್ಟರ್ ಸೀಮಾ ಶರ್ಮ ಹೇಳಿರುವುದಾಗಿ ‘ಸಿಯಾಸಾತ್’ ವರದಿ ಮಾಡಿದೆ.

ಪೆಟ್ಟು ತಿಂದವರಿಗೆ ಜೈಲು; ಹಲ್ಲೆಕೋರರ ವಿರುದ್ಧ ‘‘ದೂರಿಲ್ಲ’’

ಪೊಲೀಸರು ಶನಿವಾರ ಐವರು ಮುಸ್ಲಿಮ್ ಪುರುಷರನ್ನು ಭಾರತೀಯ ದಂಡ ಸಂಹಿತೆಯ 151ನೇ ಪರಿಚ್ಛೇದ (ಸಾರ್ವಜನಿಕ ಶಾಂತಿ ಕದಡುವ ಉದ್ದೇಶದಿಂದ ಐವರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಒಟ್ಟು ಸೇರಿರುವುದು)ದಡಿ ಜೈಲಿಗೆ ಕಳುಹಿಸಿದ್ದಾರೆ.

‘‘ಎರಡು ತಂಡಗಳ ನಡುವಿನ ಘರ್ಷಣೆ ಮಹಿಳೆಯ ಫ್ಲಾಟ್ನಿಂದ ರಸ್ತೆಗೆ ವರ್ಗಾವಣೆಯಾಯಿತು. ಗುಂಪು ಪೊಲೀಸ್ ಠಾಣೆಗೆ ಬಂದಾಗ ಅವರು ನಮ್ಮ ಠಾಣೆಗೆ ಮುತ್ತಿಗೆ ಹಾಕಿದರು. ಆ ಹಂತದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಐವರು ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು’’ ಎಂದು ಎಮ್ಐಜಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಜಯ್ ವರ್ಮ ‘ಸ್ಕ್ರಾಲ್.ಇನ್’ಗೆ ಹೇಳಿದರು.

ಹಲ್ಲೆಕೋರರ ವಿರುದ್ಧ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂಬ ‘ಸ್ಕ್ರಾಲ್’ ಪ್ರಶ್ನೆಗೆ ಉತ್ತರಿಸಿದ ವರ್ಮ, ‘‘ಯಾರಾದರೂ ಮುಂದೆ ಬಂದು ದೂರು ದಾಖಲಿಸಬೇಕು. ದೂರು ದಾಖಲಾಗದಿದ್ದರೆ ನಾವು ಕ್ರಮ ತೆಗೆದುಕೊಳ್ಳುವಂತಿಲ್ಲ’’ ಎಂದರು.‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)