varthabharthi


ರಾಷ್ಟ್ರೀಯ

ನನ್ನ ವರ್ಚಸ್ಸು ನಾಶ ಮಾಡಲು ಬಿಜೆಪಿಯಿದ ಸಾವಿರಾರು ಕೋಟಿ ರೂ. ವ್ಯಯ: ‘‘ಪಪ್ಪು’’ ಅಪಹಾಸ್ಯದ ಕುರಿತು ರಾಹುಲ್

ವಾರ್ತಾ ಭಾರತಿ : 24 Jan, 2023

ಜಮ್ಮು, ಜ. 24: ತನ್ನ ವರ್ಚಸ್ಸನ್ನು ವ್ಯವಸ್ಥಿತವಾಗಿ ನಾಶ ಮಾಡಲು ಬಿಜೆಪಿ ಹಾಗೂ ಆರೆಸ್ಸೆಸ್ ಸಾವಿರಾರು ಕೋ. ರೂ.ಗಳನ್ನು ವ್ಯಯಿಸಿದೆ. ಆದರೆ,  ಸತ್ಯ ಯಾವತ್ತಾದರೂ ಹೊರಬರುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ‘ಪಪ್ಪು’ ಎಂದು ಅಪಹಾಸ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. 
ಈ ದೇಶದಲ್ಲಿ ಸತ್ಯ ಗೆಲ್ಲುತ್ತದೆ.  ಹಣ, ಅಧಿಕಾರ, ಅಹಂಕಾರ ಅಲ್ಲವೆಂಬುದನ್ನು ಕಾಂಗ್ರೆಸ್ ಬಿಜೆಪಿಗೆ ಕಲಿಸಲಿದೆ ಎಂದು ರಾಹುಲ್ ಗಾಂಧಿ ಅವರು ಅಂತಿಮ ಹಂತದಲ್ಲಿರುವ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಹೇಳಿದರು. 

ಕಣಿವೆಯತ್ತ ಪಾದಯಾತ್ರೆ ಆರಂಭಿಸುವ ಮುನ್ನ ಅವರು ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 
‘‘ನನ್ನ ವರ್ಚಸ್ಸನ್ನು ನಾಶಗೊಳಿಸಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದನ್ನು ಬಿಜೆಪಿ ಹಾಗೂ ಅದರ ನಾಯಕರು ವ್ಯವಸ್ಥಿತವಾಗಿ ಮಾಡಿದ್ದಾರೆ. ಸಾವಿರಾರೂ ಕೋಟಿ ರೂಪಾಯಿ ಸತ್ಯವನ್ನು ಮರೆ ಮಾಚಲಾರದು. ಇದಕ್ಕೆ ನೀವೇ ಸಾಕ್ಷಿ. ಸತ್ಯ ಯಾವತ್ತಾದರೂ ಹೊರ ಬರುತ್ತದೆ’’ ಎಂದು ಅವರು ಹೇಳಿದರು. ‘‘ಪಪ್ಪು’’ ಎಂದು ಅಪಹಾಸ್ಯ ಮಾಡುವುದನ್ನು ವಿರೋಧಿಸಲು ಕಾಂಗ್ರೆಸ್ ಸಾವಿರಾರು ಕೋ. ರೂ. ವ್ಯಯಿಸುತ್ತಿದ್ದೆಯೇ ? ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು. 

ಹಣ ಹಾಗೂ ಅಧಿಕಾರದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಆರೆಸ್ಸೆಸ್ ಹಾಗೂ ಬಿಜೆಪಿ ಭಾವಿಸಿದೆ ಎಂದು ಅವರು ಆರೋಪಿಸಿದರು. 
ನೀವು ಯಾರನ್ನಾದರೂ ಕೀಳಾಗಿ ನೋಡಬಹುದು, ಯಾರ ವರ್ಚಸ್ಸನ್ನು ಬೇಕಾದರೂ ಕೆಡಿಸಬಹುದು, ಯಾವುದೇ ಸರಕಾರವನ್ನು ಖರೀದಿಸಬಹುದು, ಹಣದಿಂದ ಏನು ಬೇಕಾದರೂ ಮಾಡಬಹುದು. ಆದರೆ, ಅದು ಸತ್ಯವಾಗುವುದಿಲ್ಲ. ಸತ್ಯ ಯಾವಾಗಲೂ ಹಣ ಹಾಗೂ ಅಧಿಕಾರ ವನ್ನು ಬದಿಗೆ ತಳ್ಳುತ್ತದೆ. ಈ ಕಟು ಸತ್ಯ ಬಿಜೆಪಿಯವರಿಗೆ ನಿಧಾನವಾಗಿ ಅರ್ಥವಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)