ದಕ್ಷಿಣ ಕನ್ನಡ
ಗಾಂಜಾ ದಂಧೆಯಲ್ಲಿ ವೈದ್ಯ ವಿದ್ಯಾರ್ಥಿಗಳ ಬಂಧನ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೊರೆ: ವಕೀಲ ಮನೋರಾಜ್

ಸಾಂದರ್ಭಿಕ ಚಿತ್ರ
ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿರುವ ವಿವಿಧ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೆಲವು ವೈದ್ಯರ ಮತ್ತು ವೈದ್ಯ ವಿದ್ಯಾರ್ಥಿಗಳ ಗಾಂಜಾ ದಂಧೆ ಪ್ರಕರಣದ ಬಗ್ಗೆ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆಗೆ ಆಗ್ರಹಿಸಿ ಶೀಘ್ರದಲ್ಲೇ ರಾಜ್ಯ ಹೈಕೋರ್ಟ್ ಮೊರೆ ಹೋಗುವುದಾಗಿ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಸರಕಾರಿ ಪ್ಲೀಡರ್ ಮನೋರಾಜ್ ರಾಜೀವ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಿಂದ ಈ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ತನಿಖೆಯು ಕಳಪೆ, ಅವೈಜ್ಞಾನಿಕ ಮತ್ತು ಕಾನೂನುಬದ್ಧವಾಗಿ ಆಧಾರರಹಿತವಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಕರಣದ ತನಿಖೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಗಾಂಜಾ ಪ್ರಕರಣದಿಂದ ಶಿಕ್ಷಣ, ವೈದ್ಯಕೀಯ, ಧಾರ್ಮಿಕ ಕ್ಷೇತ್ರದಲ್ಲಿ ದೇಶದಲ್ಲೇ ಗಮನ ಸೆಳೆದಿರುವ ಬ್ರ್ಯಾಂಡ್ ಮಂಗಳೂರು ಇಮೇಜ್ಗೆ ಧಕ್ಕೆಯಾಗಿದೆ. ವೈದ್ಯರ, ವೈದ್ಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಶಿಕ್ಷಣ ಸಂಸ್ಥೆಗಳಿಗೂ ಹಾನಿಯಾಗಿದೆ. ಆದ್ದರಿಂದ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣ ಕೈಗೆತ್ತಿಕೊಳ್ಳಬೇಕು ಅಥವಾ ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳು ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಫೋರೆನ್ಸಿಕ್ ತಜ್ಞ ಡಾ.ಮಹಾಬಲೇಶ್ ಶೆಟ್ಟಿ ಮಾತನಾಡಿ, ಗಾಂಜಾ ಸೇವಿಸಿದವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಅವಕಾಶವಿದೆ. ಆದರೆ ಹಾಗೆ ಮಾಡದೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ದೂರಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ