varthabharthi


ಅಂತಾರಾಷ್ಟ್ರೀಯ

ಭ್ರಷ್ಟಾಚಾರ ಆರೋಪ: ಉಕ್ರೇನ್ ನ ಹಲವು ಸಚಿವರು, ಅಧಿಕಾರಿಗಳ ರಾಜೀನಾಮೆ

ವಾರ್ತಾ ಭಾರತಿ : 24 Jan, 2023

ಕೀವ್,ಜ.24: ರಶ್ಯ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಬಳಿಕ ಬಹಿರಂಗಗೊಂಡ ಬೃಹತ್ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಪ್ರಾದೇಶಿಕ ರಾಜ್ಯಪಾಲರು ಹಾಗೂ ಸಹಾಯಕ ಸಚಿವರು ಸೇರಿದಂತೆ ಹಲವಾರು ಅಧಿಕಾರಿಗಳು ರಾಜೀನಾಮೆ ನೀಡಿರುವುದಾಗಿ ಉಕ್ರೇನ್ ಸರಕಾರ ಮಂಗಳವಾರ ಘೋಷಿಸಿದೆ.

 ಉಕ್ರೇನ್ನ ಈ ಹಿಂದಿನಿಂದಲೂ ಭ್ರಷ್ಟಾಚಾರದ ಹಗರಣಗಳಿಂದ ಬಾಧಿತವಾಗಿದೆ. ಅಲ್ಲಿನ ಹಲವಾರು ಪ್ರಮುಖ ರಾಜಕಾರಣಿಗಳ ವಿರುದ್ಧವೂ ಭಾರೀ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಆದರೆ ದೇಶದಲ್ಲಿ ತಾಂಡವವಾಡುತ್ತಿರುವ ಲಂಚಗುಳಿತನವನ್ನು ನಿರ್ಮೂಲಗೊಳಿಸುವ ಉಕ್ರೇನ್ ಸರಕಾರದ ಪ್ರಯತ್ನಗಳು ಕಳೆದ ಫೆಬ್ರವರಿಯಲ್ಲಿ ರಶ್ಯವು ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿದ ಬಳಿಕ ತಟಸ್ಥಗೊಂಡಿದ್ದವು.

    ಉಕ್ರೇನ್ಗೆ ಬಿಲಿಯಾಂತರ ಡಾಲರ್ ಹಣಕಾಸು ಹಾಗೂ ಮಿಲಿಟರಿ ಬೆಂಬಲವನ್ನು ಒದಗಿಸುತ್ತಿರುವ ಪಾಶ್ಚಾತ್ಯ ಮಿತ್ರರಾಷ್ಟ್ರಗಳು, ಹಲವಾರು ವರ್ಷಗಳಿಂದ ಆ ದೇಶವು ಭ್ರಷ್ಟಾಚಾರ ವಿರೋಧಿ ಸುಧಾರಣೆಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಾ ಬಂದಿವೆ. ಆರ್ಥಿಕ ನೆರವು ನೀಡಬೇಕಾದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ಪೂರ್ವಭಾವಿ ಶರತ್ತನ್ನು ಕೂಡಾ ಅವು ಹಲವು ಸಂದರ್ಭಗಳಲ್ಲಿ ವಿಧಿಸಿದ್ದವು.

 ರಶ್ಯ ಹಾಗೂ ಉಕ್ರೇನ್ ಸೇನೆಯ ನಡುವೆ ಭೀಕರ ಕಾಳಗ ನಡೆಯುತ್ತಿರುವ ಪ್ರದೇಶಗಳಿಗೆ ಸೇರಿದ ಐದು ಪ್ರಾಂತೀಯ ರಾಜ್ಯಪಾಲರುಗಳು ರಾಜೀನಾಮೆ ನೀಡಿರುವುದನ್ನು ಕೂಡಾ ಉಕ್ರೇನ್ನ ಹಿರಿಯ ಸರಕಾರಿ ಅಧಿಕಾರಿ ಒಲೆಗ್ ನೆಮ್ಚಿನೊವ್ ದೃಢಪಡಿಸಿದ್ದಾರೆ. ಡಿನಿಪ್ರೊಪೆಟ್ರೊವ್ಸ್ಕ್, ಈಶಾನ್ಯ ಸುಮಿ ಪ್ರಾಂತ, ದಕ್ಷಿಣ ಝಫೋರ್ಝ್ಝಿಯಾ ಹಾಗೂ ಖೆರ್ಸನ್ ಪ್ರಾಂತಗಳ ರಾಜ್ಯಪಾಲರುಗಳು ರಾಜೀನಾಮೆ ನೀಡಿದವರಲ್ಲಿ ಸೇರಿದ್ದಾರೆಂದು ಅವರು ಹೇಳಿದ್ದಾರೆ.

  ಇದೇ ವೇಳೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಸಹಾಯಕ ರಕ್ಷಣಾ ಸಚಿವ, ವಸತಿ ಹಾಗೂ ಪ್ರಾಂತೀಯ ಅಭಿವೃದ್ಧಿ ಇಲಾಖೆಯ ಇಬ್ಬರು ಸಹಾಯಕ ಸಚಿವರು ಹಾಗೂ ಸಾಮಾಜಿಕ ನೀತಿ ಕುರಿತ ಸಹಾಯಕ ಸಚಿವರನ್ನು ವಜಾಗೊಳಿಸಲಾಗಿದೆಯೆಂದು ನೆಮಿಚಿನೊವ್ ಪ್ರಕಟಿಸಿದ್ದಾರೆ.

ಅಧ್ಯಕ್ಷೀಯ ಆಡಳಿತದ ಉಪವರಿಷ್ಠ ಕಿರಿಲೊ ಟಿಮೊಶೆಂಕೊ ಹಾಗೂ ಉಪ ಸರಕಾರಿ ಅಭಿಯೋಜಕ ಜನರಲ್ ಓಲೆಕ್ಸಿಯ್ ಸಿಮೊನೆಂಕೊ ಕೂಡಾ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

  ಈ ಮಧ್ಯೆ ಉಪ ರಕ್ಷಣಾ ಸಚಿವ ಹಾಗೂ ಸೇನೆಯ ಸರಕುಸಾಗಣೆ ವ್ಯವಸ್ಥೆಯ ಉಸ್ತುವಾರಿ ವಿಯಾಚೆಸ್ಲಾವ್ ಶಪವೊಲೊವ್ ರಾಜೀನಾಮೆ ನೀಡಿದ್ದಾರೆಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ಅಧಿಕ ದರಗಳಿಗೆ ಆಹಾರ ಪೂರೈಕೆಯ ಗುತ್ತಿಗೆಗೆಗಳಿಗೆ ಸಹಿಹಾಕಿದ್ದಾರೆಂಬ ಆರೋಪವನ್ನು ಅವರು ಎದುರಿಸುತ್ತಿದ್ದರು.

  ಮೂಲಭೂತ ಆಹಾರವಸ್ತುಗಳ ಪ್ರಚಲಿತ ಬೆಲೆಗಿಂತ ಎರಡು ಅಥವಾ ಮೂರು ಪಟ್ಟು ಅಧಿಕ ದರದಲ್ಲಿ ಪೂರೈಕೆ ಮಾಡುವ ಗುತ್ತಿಗೆಗಳಿಗೆ ರಕ್ಷಣಾ ಸಚಿವಾಲಯವು ಸಹಿಹಾಕಿದೆಯೆಂದು ಸ್ಥಳೀಯ ಮಾಧ್ಯಮಗಳು ಆಪಾದಿಸಿದ್ದವು.

2019ರಲ್ಲಿ ಉಕ್ರೇನ್ ಅಧ್ಯಕ್ಷರಾಗಿ ವೊಲೊಡಿಮಿರ್ ಝೆಲೆನ್‌ಸ್ಕಿ ಆಯ್ಕೆಯಾದ ಬಳಿಕ ಕಿರಿಲೊ ಟಿಮೆಶೆಂಕೊ ಅವರು ಪ್ರಾದೇಶಿಕ ನೀತಿಯ ಉಸ್ತುವಾರಿ ವಹಿಸಿದ್ದರು. ಯುದ್ಧಕಾಲದಲ್ಲಿ ಅವರು ಅತ್ಯಂತ ವೈಭೋವೋಪೇತ ಜೀವನವನ್ನು ನಡೆಸುತ್ತಿದ್ದಾರೆಂದು ತನಿಖಾ ವರದಿಗಾರರು ಆರೋಪಿಸಿದ್ದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)