varthabharthi


ಅಂತಾರಾಷ್ಟ್ರೀಯ

ಸ್ಯಾನ್ಸ್‌ ಫ್ರಾನ್ಸಿಸ್ಕೊ: ಅವಳಿ ಶೂಟೌಟ್ ಗಳಲ್ಲಿ ಏಳು ಮಂದಿ ಸಾವು; ಹಂತಕನ ಬಂಧನ

ವಾರ್ತಾ ಭಾರತಿ : 24 Jan, 2023

ಹಾಫ್ಮೂನ್ ಬೇ (ಕ್ಯಾಲಿಫೋರ್ನಿಯಾ), ಜ.24: ಅಮೆರಿಕದ ಸ್ಯಾನ್ಸ್‌ ಫ್ರಾನ್ಸಿಸ್ಕೊ ನಗರ ಸಮೀಪದ ಎರಡು ಸಸ್ಯಾಗಾರ (ನರ್ಸರಿ)ಗಳಲ್ಲಿ ನಡೆದ ಪ್ರತ್ಯೇಕ ಶೂಟೌಟ್ ಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎಂಟು ದಿನಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದ ಸರಣಿ ಸಾಮೂಹಿಕ ಹತ್ಯೆಗಳ ಮೂರನೇ ಘಟನೆ ಇದಾಗಿದೆ.

ಸ್ಯಾನ್ಫ್ರಾನ್ಸಿಸ್ಕೊ ನಗರದಿಂದ 30 ಮೈಲು ದೂರದಲ್ಲಿರುವ ಹಾಫ್ಮೂನ್ ಬೇ ನಗರದ ಹೊರವಲಯದಲ್ಲಿ ಈ ಹತ್ಯೆಗಳು ಸಂಭವಿಸಿವೆ. ಶೂಟೌಟ್ ಘಟನೆಗೆ ಸಂಬಂಧಿಸಿ ಪೊಲೀಸರು 67 ವರ್ಷ ವಯಸ್ಸಿನ ಚುನ್ಲಿ ಝಾವೋ ಎಂಬಾತನನ್ನು ಬಂಧಿಸಿದ್ದಾರೆ. ನಗರ ಪೊಲೀಸ್ ಮುಖ್ಯಸ್ಥ (ಶೆರೀಫ್) ಉಪಠಾಣೆಯಲ್ಲಿ ಪಾರ್ಕಿಂಗ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ಆತ ಪತ್ತೆಯಾಗಿದ್ದ ಎಂದು ಸ್ಯಾನ್ ಮ್ಯಾಟೆವೊ ಕೌಂಟಿ ಶರೀಫ್ ಕ್ರಿಸ್ಟಿನಾ ಕಾರ್ಪಸ್ ತಿಳಿಸಿದ್ದಾರೆ.

 ಹತ್ಯಾಕಾಂಡದ ಆರೋಪಿ ಝಾವೊ ಗುಂಡಿನ ದಾಳಿ ನಡೆದ ನರ್ಸರಿಗಳ ಪೈಕಿ ಒಂದರಲ್ಲಿ ಉದ್ಯೋಗಿಯಾಗಿದ್ದಾನೆ ಹಾಗೂ ಆತನ ಗುಂಡಿನ ದಾಳಿಗೆ ಸಿಲುಕಿದವರು ಕೂಡಾ ನರ್ಸರಿಯ ಸಿಬ್ಬಂದಿಗಳೆಂದು ತಿಳಿದುಬಂದಿದೆ. ಗುಂಡಿನ ದಾಳಿಗೊಳಗಾದವರಲ್ಲಿ ಚೀನಿಯರು ಹಾಗೂ ಲ್ಯಾಟಿನ್ ಮೂಲದ ಕೃಷಿ ಕಾರ್ಮಿಕರು ಸೇರಿದ್ದಾರೆಂದು ಮೂಲಗಲು ತಿಳಿಸಿವೆ.

ಗುಂಡಿನ ದಾಳಿಗೆ ಕಾರಣವೇನೆಂದು ಈ ತನಕ ತಿಳಿದುಬಂದಿಲ್ಲವೆಂದು ಅಧಿಕಾರಿಗಲು ತಿಳಿಸಿದ್ದಾರೆ.

ಹೊಸ ವರ್ಷದಲ್ಲಿ ಅಮೆರಿಕದಲ್ಲಿ ದಿಗಿಲು ಮೂಡಿಸುವಂತಹ ರೀತಿಯಲ್ಲಿಸರಣಿ ಶೂಟೌಟ್ ಪ್ರಕರಣಗಳು ವರದಿಯಾಗಿವೆ. ಮೂರು ವಾರಗಳಿಗೂ ಕಡಿಮೆ ಅವಧಿಯಲ್ಲಿ ಆರು ಶೂಟ್ಟೌಟ್ ಪ್ರಕರಣಗಳು ನಡೆದಿದ್ದು, 39 ಮಂದಿ ಸಾವನ್ನಪ್ಪಿದ್ದಾರೆ. ಜನವರಿ 16ರಿಂದೀಚೆಗೆ ಕ್ಯಾಲಿಫೋರ್ನಿಯಾ ರಾಜ್ಯವೊಂದರಲ್ಲೇ ಮೂರು ಶೂಟೌಟ್ ಪ್ರಕರಣಗಳು ವರದಿಯಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)