varthabharthi


ಬೆಂಗಳೂರು

35 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂಬ ಸಚಿವರ ಹೇಳಿಕಗೆ ತಿರುಗೇಟು

ಸಿದ್ದರಾಮಯ್ಯ ಮನೆ ಮೇಲೆ ಐಟಿ, ಈ.ಡಿ ದಾಳಿ ನಡೆಸಿದರೆ ನಿಮಗೆ 35 ಜತೆ ಪಂಚೆ, ಜುಬ್ಬಾ ಸಿಗುತ್ತೆ: ಎಂ.ಲಕ್ಷ್ಮಣ್

ವಾರ್ತಾ ಭಾರತಿ : 24 Jan, 2023

ಬೆಂಗಳೂರು, ಜ.24: ಸಚಿವ ಡಾ.ಕೆ.ಸುಧಾಕರ್, ಶಾಸಕ ಪಿ.ರಾಜೀವ್, ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಸೇರಿದಂತೆ ಬಿಜೆಪಿ ನಾಯಕರು 2013ರಿಂದ 2018ರ ವರೆಗೆ ಸಿಎಜಿ ವರದಿ ಉಲ್ಲೇಖಿಸಿ ಆ ವರದಿಯ ದಾಖಲೆ ನೀಡದೆ 35 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ಹಸಿ ಸುಳ್ಳು ಹೇಳಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಜಿ ವರದಿಯಲ್ಲಿ 35 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ಉಲ್ಲೇಖವಾಗಿದ್ದರೆ ಬಿಜೆಪಿಯವರು ಏನೇ ಶಿಕ್ಷೆ ನೀಡಿದರೂ ನಾವು ಸ್ವೀಕರಿಸಲು ಸಿದ್ಧ ಎಂದು ಸವಾಲು ಹಾಕಿದರು. 

ಸಿಎಜಿ ವರದಿ ಪ್ರಕಾರ ಮೂರುವರೆ ವರ್ಷಗಳ ಅವಧಿಯಲ್ಲಿ 60 ಸಾವಿರ ಕೋಟಿಯಷ್ಟು ಹಣ ಏರುಪೇರಾಗಿದೆ. ಅಂದರೆ ಬಿಜೆಪಿ ಸರಕಾರದಲ್ಲಿ 60 ಸಾವಿರ ಕೋಟಿಯಷ್ಟು ಹಗರಣವಾಗಿದೆ ಎಂದು ನೇರವಾಗಿ ಹೇಳಬಹುದೇ? ಎಂದು ಲಕ್ಷ್ಮಣ್ ಪ್ರಶ್ನಿಸಿದರು.

ಸುಧಾಕರ್ ಚರ್ಚೆಗೆ ಬರಲಿ: ಸುಧಾಕರ್ 2008ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಎಲ್ಲಿ ಕೆಲಸಮಾಡುತ್ತಿದ್ದಿರಿ? ಈಗ ಎಷ್ಟು ಕೋಟಿಗೆ ಬಾಳುತ್ತೀರಿ ಎಂದು ಬಹಿರಂಗ ಚರ್ಚೆಗೆ ಬನ್ನಿ ಅಥವಾ ತನಿಖೆ ನಡೆಯಲಿ. ಸಚಿವರಾದ ನಂತರ ಎಷ್ಟು ಹಣ ಲೂಟಿ ಮಾಡಿದ್ದೀರಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಧ್ಯಮಗೋಷ್ಠಿ ಮಾಡಿ ಮಾಹಿತಿ ದಾಖಲೆ ನೀಡಿದ್ದಾರೆ ಎಂದು ಅವರು ಹೇಳಿದರು.

ಕೆಂಪಣ್ಣ ಪ್ರಕಾರ 2 ಸಾವಿರ ಕೋಟಿಯಷ್ಟು ಕಾಮಗಾರಿ ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದ್ದು, ಅದನ್ನು ಇವರು ಟೆಂಡರ್ ಹಾಕುವ ಮುನ್ನವೇ ಶೇ.5ರಷ್ಟು ಕಮಿಷನ್ ನೀಡಬೇಕು. ಅರ್ಜಿ ಹಾಕಿದ ನಂತರ ಶೇ.5ರಷ್ಟು, ಟೆಂಡರ್ ಸಿಕ್ಕ ನಂತರ ಮೊದಲ ಹಂತದಲ್ಲಿ ಶೇ.10ರಷ್ಟು, ಕಾಮಗಾರಿ ಶೇ.75ರಷ್ಟು ಮುಗಿಯುವ ಒಳಗೆ ಉಳಿದ ಶೇ.20ರಷ್ಟು ಕಮಿಷನ್ ನೀಡಬೇಕಾಗಿದೆ. ಇದು ಕೆಂಪಣ್ಣನವರ ಆರೋಪ ಎಂದು ಲಕ್ಷ್ಮಣ್ ತಿಳಿಸಿದರು.

ಕೋವಿಡ್ ಸಮಯದಲ್ಲಿ 50 ರೂ.ಬೆಲೆಯ ಮಾಸ್ಕ್ ಅನ್ನು 350 ರೂ.ಗೆ ಖರೀದಿ ಮಾಡಿದ್ದಾರೆ. ಆಸ್ಪತ್ರೆ ಬೆಡ್ ದಂಧೆ ಮಾಡಿದ್ದಾರೆ. ಎಲ್ಲ ಉಪಕರಣಗಳಲ್ಲಿ ಸುಳ್ಳು ಲೆಕ್ಕ ಬರೆದು 100 ಕೋಟಿ ಖರ್ಚಾದರೆ 400 ಕೋಟಿ ಮಾಡಿ ಲೂಟಿ ಮಾಡಿದ್ದಾರೆ. ಇವರೊಬ್ಬರೇ ಸುಮಾರು 1200 ಕೋಟಿ ಲೂಟಿ ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು. 

ಈ.ಡಿ.ಗೆ ದೂರು ನೀಡಲು ಸಿದ್ಧತೆ: ಚಿಕ್ಕಬಳ್ಳಾಪುರದಲ್ಲಿನ ಶೇ.60ರಷ್ಟು ಸಿವಿಕ್ ಕಾಮಗಾರಿಗಳನ್ನು ಸುಧಾಕರ್ ಸಂಬಂಧಿಕರಿಗೆ ಗುತ್ತಿಗೆ ನೀಡಲಾಗಿದೆ. ತಮ್ಮ ಪತ್ನಿ ಹೆಸರಲ್ಲಿ ಸಾಕಷ್ಟು ಚೆಕ್ ಪಡೆದಿರುವ ಆರೋಪಗಳಿವೆ. ಕಾಂಗ್ರೆಸ್ ಹೈಕಮಾಂಡ್‍ಗೆ ಒಂದು ಸಾವಿರ ಕೋಟಿ ರೂ.ಕಪ್ಪ ಕಾಣಿಕೆ ನೀಡಲಾಗಿದೆ ಆರೋಪಿಸಿರುವ ಕುರಿತು ಸುಧಾಕರ್ ವಿರುದ್ಧ ಈ.ಡಿಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಲಕ್ಷ್ಮಣ್ ಹೇಳಿದರು.

ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆ, ಮೆಡಿಕಲ್ ಕಾಲೇಜು, ಮಾಲುಗಳನ್ನು ಹೊಂದಿರುವ ಉದ್ಯಮಿ. ತಮ್ಮ ವ್ಯಾಪಾರ ವ್ಯವಹಾರಗಳ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಸಿದ್ದರಾಮಯ್ಯ ಮೇಲೂ ನೀವು ನಿಮ್ಮ ಐಟಿ, ಈ.ಡಿ ದಾಳಿ ನಡೆಸಿ ನಿಮಗೆ 35 ಜತೆ ಪಂಚೆ, ಜುಬ್ಬಾ ಸಿಗುತ್ತೆ. ಅದನ್ನು ಬೇಕಾದರೆ ಹೊತ್ತುಕೊಂಡು ಹೋಗಿ ಎಂದು ಅವರು ತಿರುಗೇಟು ನೀಡಿದರು. 

ಸಿ.ಪಿ.ಯೋಗೇಶ್ವರ್, ಯತ್ನಾಳ್ ಅವರ ಹೇಳಿಕೆ ಬಗ್ಗೆ ತನಿಖೆ ಮಾಡಿಸಿ. ಇನ್ನು ಸಚಿವ ಅಶ್ವತ್ಥ ನಾರಾಯಣ ಹಾಗೂ ಅವರ ಸಹೋದರರು ಬೆಂಗಳೂರನ್ನು ಎಷ್ಟು ಲೂಟಿ ಹೊಡೆದಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಸೊರಬದಲ್ಲಿ ಮೂರುವರೆ ವರ್ಷಗಳಲ್ಲಿ 16 ತಹಶೀಲ್ದಾರರು ಬದಲಾಗಿದ್ದಾರೆ. ಇಷ್ಟು ದಿನ ವರ್ಷಕ್ಕೊಂದು ವರ್ಗಾವಣೆ ಮಾಡುತ್ತಿದ್ದವರು ಈಗ ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)