varthabharthi


ರಾಷ್ಟ್ರೀಯ

ಡಾಲರ್ ದುರ್ಬಲ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಭೀತಿ: ಚಿನ್ನದ ದರ ಗಗನಮುಖಿ

ವಾರ್ತಾ ಭಾರತಿ : 25 Jan, 2023

ಮುಂಬೈ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಾಗೂ ಇತರ ಕರೆನ್ಸಿಗಳ ಎದುರು ಡಾಲರ್ ದುರ್ಬಲವಾಗುತ್ತಿರುವ ಬೆನ್ನಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಗನಮುಖಿಯಾಗಿದೆ. ಮಂಗಳವಾರ ಇದೇ ಮೊದಲ ಬಾರಿಗೆ ಚಿನ್ನದ ದರ 10 ಗ್ರಾಂಗೆ 57300 ರೂಪಾಯಿ ಮಟ್ಟವನ್ನು ತಲುಪಿದೆ. ಕಳೆದ ಮೂರು ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡ 20ರಷ್ಟು ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣ.

ಮಲ್ಟಿ ಕಮೋಡಿಟೀಸ್ ಎಕ್ಸ್‌ಚೇಂಜ್ (ಎಂಸಿಎಕ್ಸ್) ಹಾಗೂ ಭೌತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ದರ 10 ಗ್ರಾಂಗಳಿಗೆ 57000 ರೂಪಾಯಿಗಳ ಗಡಿಯನ್ನು ದಾಟಿದೆ. ಜಾಗತಿಕ ಹಾಗೂ ಸ್ಥಳೀಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಚಿನ್ನದ ದರ 10 ಗ್ರಾಂಗಳಿಗೆ 60 ಸಾವಿರ ರೂಪಾಯಿ ಮೈಲುಗಲ್ಲು ದಾಟುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಅಮೆರಿಕದ ಫೆಡರಲ್ ರಿಸರ್ವ್, ಬಡ್ಡಿದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಡಾಲರ್ ಇತರ ಪ್ರಮುಖ ಕರೆನ್ಸಿಗಳ ಎದುರು ಬಲಗೊಳ್ಳುತ್ತಾ ಬಂದಿತ್ತು. ಇದು ಚಿನ್ನದ ಬೆಲೆ ದುರ್ಬಲಗೊಳ್ಳಲು ಕಾರಣವಾಘಿತ್ತು. ಇದರ ಪರಿಣಾಮವಾಗಿ 2022ರಲ್ಲಿ ಒಂದು ಔನ್ಸ್ ಚಿನ್ನಕ್ಕೆ ಇದ್ದ ಬೆಲೆ 1950 ಡಾಲರ್‌ನಿಂದ 2022ರ ಅಕ್ಟೋಬರ್ ವೇಳೆಗೆ 1636 ಡಾಲರ್‌ಗೆ ಕುಸಿದಿತ್ತು. ಇದೀಗ ಆರ್ಥಿಕ ಬೆಳವಣಿಗೆ ಗತಿ ನಿಧಾನವಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಇದರ ಜತೆಗೆ ಡಾಲರ್ ಕೂಡಾ ದುರ್ಬಲಗೊಳ್ಳುತ್ತಿದೆ.

"ಹಳದಿ ಲೋಹದ ಬೆಲೆ ಏರಿಕೆಗೆ ಮುಖ್ಯ ಕಾರಣವೆಂದರೆ ಡಾಲರ್ ದುರ್ಬಲಗೊಳ್ಳುತ್ತಿರುವುದು" ಎಂದು ಕಾಮಾ ಜ್ಯುವೆಲ್ಲರಿಯ ಎಂಡಿ ಕೊಲಿನ್ ಶಾ ಹೇಳುತ್ತಾರೆ. ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಏರಿಕೆ ಪ್ರಮಾಣ ಹಿಂದಿನ ಬಾರಿಗೆ ಹೋಲಿಸಿದರೆ ಕಡಿಮೆಯಾಗುವ ಸೂಚನೆ ದೊರಕಿದ್ದು, ಆರ್ಥಿಕ ಹಿಂಜರಿತದ ಭೀತಿ ಕೂಡಾ ಚಿನ್ನದ ದರ ಬಲವರ್ಧನೆಗೆ ಕಾರಣ" ಎಂದು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)