ಲೆಪರ್ಡ್ ಟ್ಯಾಂಕ್ ಗಳನ್ನೂ ಸುಟ್ಟು ಬಿಡುತ್ತೇವೆ: ರಶ್ಯ ಎಚ್ಚರಿಕೆ
ಮಾಸ್ಕೊ, ಜ.25: ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳು ಒದಗಿಸುವ ಯಾವುದೇ ಅತ್ಯಾಧುನಿಕ ಅಸ್ತ್ರಗಳನ್ನೂ ನಾಶಗೊಳಿಸಲು ರಶ್ಯ ಸಮರ್ಥವಾಗಿದೆ. ಲೆಪರ್ಡ್ ಟ್ಯಾಂಕ್ ಗಳನ್ನೂ ಸುಟ್ಟುಬಿಡುತ್ತೇವೆ. ಇದು ಉಕ್ರೇನ್ ಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಬಹುದು ಎಂದು ರಶ್ಯ ಬುಧವಾರ ಎಚ್ಚರಿಕೆ ನೀಡಿದೆ.
ತಾಂತ್ರಿಕವಾಗಿ ಇದು ವಿಫಲ ಯೋಜನೆಯಾಗಿದೆ. ಇದರಿಂದ ಉಕ್ರೇನ್ ಸೇನೆಯ ಸಾಮಥ್ರ್ಯ ವೃದ್ಧಿಯಾಗುತ್ತದೆ ಎಂದು ಅತಿಯಾಗಿ ಅಂದಾಜಿಸಲಾಗಿದೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಉಕ್ರೇನ್ ಗೆ ಲೆಪರ್ಡ್ ಟ್ಯಾಂಕ್ ಒದಗಿಸಿದರೆ ರಧಶ್ಯ-ಜರ್ಮನಿ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯಾಗಲಿದೆ ಎಂದವರು ಎಚ್ಚರಿಸಿದ್ದಾರೆ.
ಈ ಮಧ್ಯೆ, ಉಕ್ರೇನ್ ಗೆ ಅಬ್ರಾಮ್ಸ್ ಟ್ಯಾಂಕ್ ಒದಗಿಸಲು ಅಮೆರಿಕ ನಿರ್ಧರಿಸಿದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಅಮೆರಿಕಕ್ಕೆ ರಶ್ಯದ ರಾಯಭಾರಿ ಅನಾಟೊಲಿ ಅಂಟೋನೋವ್ `ಇಂತಹ ಉಪಕ್ರಮಗಳು ಪ್ರಸ್ತುತ ಸಂಷರ್ಘದಲ್ಲಿ ನಿಜವಾದ ಆಕ್ರಮಣಕಾರ ಯಾರು ಎಂಬುದನ್ನು ನಿಚ್ಚಳಗೊಳಿಸಲಿದೆ' ಎಂದು ಹೇಳಿದ್ದಾರೆ. ಅಮೆರಿಕ ಟ್ಯಾಂಕ್ಗಳನ್ನು ಒದಗಿಸಲು ನಿರ್ಧರಿಸಿದರೆ, ರಕ್ಷಣಾತ್ಮಕ ಶಸ್ತ್ರಾಸ್ತ್ರ ಎಂಬ ವಾದವನ್ನು ಬಳಸಿಕೊಂಡು ಅಂತಹ ಕ್ರಮಗಳನ್ನು ಸಮರ್ಥಿಸಲು ಸಾಧ್ಯವಾಗದು. ಇದು ರಶ್ಯದ ವಿರುದ್ಧದ ಮತ್ತೊಂದು ಸ್ಪಷ್ಟ ಪ್ರಚೋದನೆಯಾಗಿದೆ ಎಂದವರು ಹೇಳಿದ್ದಾರೆ.