varthabharthi


ವಿಶೇಷ-ವರದಿಗಳು

ಗುಜರಾತ್ ಹತ್ಯಾಕಾಂಡದ ನೆರಳು: ಬಿಜೆಪಿಗೆ ಅಪಥ್ಯವಾಗಿರುವುದೇಕೆ, ಬಿಬಿಸಿ ತನಿಖಾ ಸಾಕ್ಷ್ಯಚಿತ್ರ?

ವಾರ್ತಾ ಭಾರತಿ : 27 Jan, 2023
ವಿನಯ್ ಕೆ.

2002ರ ಗುಜರಾತ್ ಹತ್ಯಾಕಾಂಡದ ಕುರಿತು ಬಿಬಿಸಿ ನಿರ್ಮಿಸಿರುವ India: The Modi Question ಎಂಬ ತನಿಖಾ ಸಾಕ್ಷಚಿತ್ರ ವಿವಾದವೆಬ್ಬಿಸಿದ್ದು, ಕೇಂದ್ರ ಸರಕಾರ ಅದರ ಬಗ್ಗೆ ವಸಾಹತುಶಾಹಿ ಮನಃಸ್ಥಿತಿಯ ಅಪಪ್ರಚಾರದ ವಸ್ತು ಎಂದು ಜರೆದಿದೆ. ಆದರೆ ಬಿಬಿಸಿ ಅದು ತನ್ನ ಉನ್ನತ ಸಂಪಾದಕೀಯ ಮಾನದಂಡಗಳ ಪ್ರಕಾರ ಆಳವಾಗಿ ಅಧ್ಯಯನ ನಡೆಸಿ ತಯಾರಿಸಿದ ಸಾಕ್ಷಚಿತ್ರ ಎಂದು ಬಲವಾಗಿ ಸಮರ್ಥಿಸಿಕೊಂಡಿದೆ. ಜನವರಿ 17ರಂದು ಬಿಬಿಸಿಯಲ್ಲಿ ಪ್ರಸಾರವಾದ ಎರಡು ಭಾಗಗಳ ಈ ಬಿಬಿಸಿ ಡಾಕ್ಯುಮೆಂಟರಿಯ ಮೊದಲ ಭಾಗ ಭಾರತದಲ್ಲಿನ್ನೂ ವೀಕ್ಷಣೆಗೆ ಲಭ್ಯವಿಲ್ಲ.

ವರದಿಗಳ ಪ್ರಕಾರ, ಗುಜರಾತ್‌ನ ಮೋದಿ ಆಡಳಿತದಲ್ಲಿ ಮುಸ್ಲಿಮರ ಅನುಭವವನ್ನು ಈ ಸಾಕ್ಷಚಿತ್ರ ವಿವರವಾಗಿ ದಾಖಲಿಸಿದೆ. ಎರಡು ಸಾವಿರ ಜನರ ಸಾವಿಗೆ ಕಾರಣವಾದ 2002ರ ಫೆಬ್ರವರಿ- ಮಾರ್ಚ್ ಅವಧಿಯ ದೊಡ್ಡ ಮಟ್ಟದ ಗುಜರಾತ್ ಹಿಂಸಾಚಾರದಲ್ಲಿನ ಮೋದಿ ಪಾತ್ರದಬಗ್ಗೆ ಕಳವಳ ವ್ಯಕ್ತಪಡಿಸಿರುವ ತನಿಖಾ ವರದಿಯ ಕುರಿತು ಸಾಕ್ಷ್ಯಚಿತ್ರ ಹೇಳುತ್ತದೆ.

2002ರ ಫೆಬ್ರವರಿ ಮತ್ತು ಮಾರ್ಚ್ ಸಮಯದಲ್ಲಿನ ಗುಜರಾತ್ ಹತ್ಯಾಕಾಂಡ ದಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಸಾವನ್ನಪ್ಪಿದ್ದರಲ್ಲದೆ, ಇನ್ನೂ 223 ಮಂದಿ ನಾಪತ್ತೆ, 2,500 ಮಂದಿ ಗಾಯಗೊಂಡಿದ್ದರೆಂದು ಸರಕಾರಿ ದಾಖಲೆ ಗಳು ಹೇಳುತ್ತವೆ. ಆದರೆ ಬಿಬಿಸಿ ಸಾಕ್ಷ್ಯಚಿತ್ರ ಹೇಳುವುದೇ ಬೇರೆ.

ಬಿಬಿಸಿ ಸಾಕ್ಷ್ಯಚಿತ್ರದಲ್ಲಿ, ಹಿಂಸಾಚಾರದ ವಿಚಾರಣೆಗೆ ಬ್ರಿಟನ್ ಸರಕಾರ ಕಳುಹಿಸಿದ ಉನ್ನತ ರಾಜತಾಂತ್ರಿಕರೊಬ್ಬರ ನೇತೃತ್ವದ ತಂಡವೊಂದು ಸಲ್ಲಿಸಿದ್ದ ತನಿಖಾ ವರದಿಯಲ್ಲಿರುವ ಸ್ಫೋಟಕ ಅಂಶಗಳ ಬಗ್ಗೆ ಹೇಳಲಾಗಿದೆ. ಬ್ರಿಟಿಷ್ ಸರಕಾರಕ್ಕೆ ಸಲ್ಲಿಕೆಯಾದ ಬಳಿಕ ನಿರ್ಬಂಧಿತವಾಗಿರಿಸಿದ್ದ ಮತ್ತು ಈವರೆಗೆ ಎಲ್ಲಿಯೂ ಪ್ರಕಟವಾಗಿರದ ಆ ವರದಿಯನ್ನು ವಿವರವಾಗಿ ತೋರಿಸಲಾಗಿದೆ. ತನಿಖೆಯ ನೇತೃತ್ವ ವಹಿಸಿದ್ದ ಆ ಮಾಜಿ ಹಿರಿಯ ಬ್ರಿಟಿಷ್ ರಾಜತಾಂತ್ರಿಕ ಡಾಕ್ಯು ಮೆಂಟರಿಯಲ್ಲಿ ಮಾತನಾಡಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ವರದಿಯ ಒಂದು ಹೇಳಿಕೆಯಲ್ಲಿ ನರೇಂದ್ರ ಮೋದಿಯೇ ನೇರ ಹೊಣೆ ಎಂದಿರು ವುದನ್ನು ಬಹಿರಂಗಪಡಿಸಲಾಗಿದೆ ಎಂಬುದು ಈಗ ವಿವಾದದ ಕೇಂದ್ರಬಿಂದು.

ಆ ವರದಿಯಲ್ಲಿ ಅತ್ಯಂತ ಪ್ರಮುಖವಾಗಿ ಹೇಳಿದ್ದಿಷ್ಟು:

  • ಗುಜರಾತ್ ಹತ್ಯಾಕಾಂಡ ಅಧಿಕೃತವಾಗಿ ವರದಿಯಾದುದಕ್ಕಿಂತ ಬಹಳ ಹೆಚ್ಚಿನ ಪ್ರಮಾಣದಲ್ಲಿ ನಡೆದಿತ್ತು.
  • ಹಿಂಸಾಚಾರದ ವೇಳೆ ಏನಿಲ್ಲವೆಂದರೂ 2 ಸಾವಿರ ಜನರ ಕಗ್ಗೊಲೆಯಾಯಿತು. ಅದರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದರು.
  • ಮುಸ್ಲಿಮ್ ಮಹಿಳೆಯರ ಮೇಲೆ ವ್ಯಾಪಕ ಮತ್ತು ವ್ಯವಸ್ಥಿತ ಸಾಮೂಹಿಕ ಅತ್ಯಾಚಾರ ನಡೆದಿತ್ತು.
  • ಈ ಹಿಂಸಾಚಾರವನ್ನು ಹತ್ಯಾಕಾಂಡ ಎಂದೇ ನಾವು ಗುರುತಿಸಿದ್ದೇವೆ.
  • ಆ ಹಿಂಸಾಚಾರ ಉದ್ದೇಶಪೂರ್ವಕ ಹಾಗೂ ರಾಜಕೀಯ ಪ್ರೇರಿತವಾಗಿತ್ತು. ಹಿಂದೂಗಳು ಹೆಚ್ಚಿರುವ ಪ್ರದೇಶದಿಂದ ಮುಸ್ಲಿಮರನ್ನು ಶಾಶ್ವತವಾಗಿ ಹೊರಹಾಕುವ ಉದ್ದೇಶ ಹಿಂಸಾಚಾರದ ಹಿಂದಿತ್ತು.
  • ಮುಸ್ಲಿಮರ ವ್ಯಾಪಾರದ ಸ್ಥಳಗಳನ್ನು ನಿರ್ದಿಷ್ಟವಾಗಿ ಗುರಿ ಮಾಡಲಾಗಿತ್ತು. ಅತ್ಯಂತ ವ್ಯವಸ್ಥಿತವಾಗಿ ಬಹುಶಃ ತಿಂಗಳುಗಳ ಹಿಂದೆಯೇ ತಯಾರಿ ನಡೆಸಿ ಎಸಗಲಾಗಿದ್ದ ಅಂದಿನ ಹಿಂಸಾಚಾರದಲ್ಲಿ ಜನಾಂಗೀಯ ನಿರ್ಮೂಲನೆಯ ಎಲ್ಲ ಲಕ್ಷಣಗಳಿದ್ದವು.
  • ಹಿಂಸಾಚಾರವನ್ನು ಆರೆಸ್ಸೆಸ್‌ನ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ತು ಯೋಜಿಸಿತ್ತು.
  • ವಿಎಚ್‌ಪಿ ಮತ್ತು ಅದರ ಮಿತ್ರಪಕ್ಷಗಳು ರಾಜ್ಯ ಸರಕಾರ ಸೃಷ್ಟಿಸಿದ್ದ ಪೂರಕ ವಾತಾವರಣವಿಲ್ಲದೆ ಇಷ್ಟು ಹಾನಿ ಮಾಡಲು ಸಾಧ್ಯವಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಹತ್ಯಾಕಾಂಡದ ಹಿಂದೆ ನಿಸ್ಸಂದೇಹವಾಗಿಯೂ ಮೋದಿ ಇದ್ದರು ಎಂದು ಬ್ರಿಟಿಷ್ ವಿದೇಶಾಂಗ ಸಚಿವಾಲಯ ಹೇಳಿದ್ದನ್ನು ಡಾಕ್ಯು ಮೆಂಟರಿಯು ಉಲ್ಲೇಖಿಸಿದೆ. ಈಗ ಅದೇ ವಿಷಯ ವಿವಾದಕ್ಕೆ ಕಾರಣವಾಗಿದೆ.

ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗಲಭೆಯಲ್ಲಿ ಮಧ್ಯಪ್ರವೇಶಿಸದಂತೆ ಆದೇಶಿಸುವ ಮೂಲಕ ಮುಖ್ಯ ಪಾತ್ರ ವಹಿಸಿದ್ದರು. ಅವರು ವೌನವಾಗಿಯೇ ಹಿಂದುತ್ವ ತೀವ್ರ ವಾದಿಗಳನ್ನು ಉತ್ತೇಜಿಸಿದ್ದರು ಎಂಬುದು ಬಲು ಗಂಭೀರ ಆರೋಪಗಳಾಗಿದ್ದವು ಎಂದು ಅಂದಿನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜಾಕ್ ಸ್ಟ್ರಾ ಅವರೇ ಸ್ವತಃ ಸಾಕ್ಷಚಿತ್ರದಲ್ಲಿ ಹೇಳಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಮೋದಿ ವಿರುದ್ಧದ ಈ ಆರೋಪಗಳು ಆಘಾತಕಾರಿಯಾಗಿದ್ದವು. ಎಲ್ಲ ಜನರನ್ನು ರಕ್ಷಿಸುವ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಪೊಲೀಸರನ್ನು ಬಿಡದೆ ತಡೆದದ್ದು ರಾಜಕೀಯ ಪಾತ್ರವಿದ್ದುದಕ್ಕೆ ಸ್ಪಷ್ಟ ಉದಾಹರಣೆ. ನಾವು ಎಂದಿಗೂ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮುರಿಯಲು ಹೋಗುವುದಿಲ್ಲ, ಆದರೆ ಇದು ಅವರಿಗೆ ಕಳಂಕ ತಂದಿದೆ ಎಂದು ಕೂಡ ಸ್ಟ್ರಾ ಆ ತನಿಖಾ ವರದಿಯ ಹಿನ್ನೆಲೆಯಲ್ಲಿ ಹೇಳಿರುವುದು ಪ್ರಸಾರವಾಗಿದೆ.

ಬ್ರಿಟಿಷ್ ಸರಕಾರ ಈ ತನಿಖೆ ನಡೆಸಿದ ಬಹುತೇಕ ಅದೇ ಸಮಯಕ್ಕೆ ಯುರೋಪಿಯನ್ ಯೂನಿಯನ್ ಕೂಡ ಒಂದು ತನಿಖೆಗೆ ಆದೇಶಿಸಿತ್ತು. ಅದರಲ್ಲಿ ಮೋದಿ ಸರಕಾರದ ಅಂದಿನ ಸಚಿವರು ಗುಜರಾತ್ ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಹಾಗೂ ಹಿಂಸಾಚಾರ ತಡೆಯದಂತೆ ಪೊಲೀಸ ರನ್ನು ತಡೆದಿದ್ದರು ಎಂದು ಹೇಳಿತ್ತು. ಅದನ್ನೂ ಬಿಬಿಸಿ ಸಾಕ್ಷಚಿತ್ರ ಉಲ್ಲೇಖಿಸಿದೆ.

ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಮೋದಿಯವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಹಲವು ವರ್ಷ ವಿಚಾರಣೆ ನಡೆಸಿದ್ದ ವಿಶೇಷ ತನಿಖಾ ತಂಡ ನೀಡಿದ ಅಂತಿಮ ವರದಿಯು ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಗಳಿಲ್ಲ ಎಂದಿತ್ತು.

ಮೋದಿ ಬೆಂಬಲಿಗರು ಅವರ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿ ದ್ದೂ ಸಾಕ್ಷಚಿತ್ರದಲ್ಲಿ ದಾಖಲಾಗಿದೆ. ಹತ್ಯಾಕಾಂಡದ ಸಂದರ್ಭದಲ್ಲಿ ಮೋದಿ ಸರಕಾರದ ಸಚಿವರಾಗಿದ್ದು ಬಳಿಕ ಮೋದಿ ವಿರುದ್ಧ ಸಾಕ್ಷ ಹೇಳಿದ್ದ ಹರೇನ್ ಪಾಂಡ್ಯ ಅವರ ಕೊಲೆ ದುರಂತ ಹಾಗೂ ನಿಗೂಢ ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಹೇಳಿರುವುದೂ ಅದರಲ್ಲಿದೆ. ಭಾರತದಲ್ಲಿ ಮೂವತ್ತಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣಕ್ಕೆ ಅಪಾಯವಾಗಬಹುದು ಎಂಬ ಕಾರಣಕ್ಕೆ ಡಾಕ್ಯುಮೆಂಟರಿಯಲ್ಲಿ ಮಾತಾಡಲು ಹಿಂಜರಿದಿದ್ದಾರೆ ಎಂದು ಅದು ಹೇಳಿದೆ. ಆರೋಪಗಳ ಬಗ್ಗೆ ಅಭಿಪ್ರಾಯ ಹೇಳಲು ಭಾರತ ಸರಕಾರ ನಿರಾಕರಿಸಿತು ಎಂಬುದೂ ಅದರಲ್ಲಿದೆ.

ಆದರೆ, ಇದೀಗ ಉನ್ನತ ಬ್ರಿಟಿಷ್ ರಾಜತಾಂತ್ರಿಕರ ತಂಡ ಅಂದು ನಡೆಸಿದ್ದ ತನಿಖೆಯ ವರದಿ ಬಿಬಿಸಿ ಸಾಕ್ಷಚಿತ್ರದ ಮೂಲಕ ಬಹಿರಂಗವಾಗಿರುವುದು ಕೇಂದ್ರ ಸರಕಾರ ಹಾಗೂ ಬಿಜೆಪಿಗೆ ಅಪಥ್ಯವಾಗಿದೆ. ಈಗಾಗಲೇ ಕೇಂದ್ರ ಅದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇಂಗ್ಲೆಂಡಿನಲ್ಲಿಯೂ ಅದರ ಬಗ್ಗೆ ಹಲವು ರಾಜಕಾರಣಿಗಳು ಆಕ್ಷೇಪ ತೆಗೆದಿ ದ್ದಾರೆಂಬ ವರದಿಗಳಿವೆ. ಭಾರತದಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಬ್ರಿಟನ್ ನಲ್ಲಿ ಭಾರತದ ಅಳಿಯ ರಿಷಿ ಸುನಕ್ ಪ್ರಧಾನಿ. ಎರಡೂ ದೇಶಗಳ ನಡುವೆ ಒಳ್ಳೆಯ ಬಾಂಧವ್ಯವಿದೆ. ಜೊತೆಗೆ ಪ್ರಮುಖ ವಾಣಿಜ್ಯ ಒಪ್ಪಂದಗಳ ಮಾತುಕತೆ ನಡೆಯುತ್ತಿದೆ. ಹೀಗಿರುವಾಗ ಇಂತಹದ್ದೊಂದು ಸಾಕ್ಷಚಿತ್ರ ಬೇಕಿತ್ತೇ ಎಂಬುದು ಆಕ್ಷೇಪಿಸುವವರ ಪ್ರಶ್ನೆ.

ಆದರೆ ಬಿಬಿಸಿ ತನ್ನೆಲ್ಲ ಇತಿಮಿತಿಗಳ ಹೊರತಾಗಿಯೂ ಭಾರತದ ಟಿವಿ ಸುದ್ದಿ ವಾಹಿನಿಗಳಂತಹ ವಾಹಿನಿಯಲ್ಲ. ಅದು ಅಲ್ಲಿನ ಪ್ರತಿಯೊಬ್ಬಟಿವಿ ಇರುವ ವ್ಯಕ್ತಿಯ ಚಂದಾ ಪಡೆದು ನಡೆಯುವ ಸಾರ್ವಜನಿಕ ಸಂಸ್ಥೆ. ಭಾರತದಲ್ಲಿ ಖಾಸಗಿ ವಾಹಿನಿಗಳೇ ಸರಕಾರಿ ಮುಖವಾಣಿಗಳಾಗಿರುವಾಗ ಬ್ರಿಟನ್‌ನಲ್ಲಿ ಸರಕಾರೀ ವಾಹಿನಿಯೊಂದು ಸ್ವತಂತ್ರ, ದಿಟ್ಟ ಸಂಪಾದಕೀಯ ನಿಲುವು ತೆಗೆದುಕೊಂಡಿತು. ತನ್ನ ಸರಕಾರ ಭಾರತ ಸರಕಾರದೊಂದಿಗೆ ಎಷ್ಟು ಆತ್ಮೀಯವಾಗಿದೆ ಎಂಬುದಕ್ಕೂ ತನ್ನ ಸುದ್ದಿ ಪ್ರಸಾರಕ್ಕೂ ಸಂಬಂಧವಿಲ್ಲ ಎಂದು ಅದು ಸಾಬೀತುಪಡಿಸಿದೆ.

2002ರಲ್ಲಿ ಹತ್ಯಾಕಾಂಡದ ಬಳಿಕ ರಾಜ್ಯದಲ್ಲಿ ಮೋದಿ ಚುನಾವಣೆ ಘೋಷಿಸಿದಾಗ ಬಿಬಿಸಿಗೆ ನೀಡಿದ್ದ ಸಂದರ್ಶನವೊಂದನ್ನು ಸಾಕ್ಷಚಿತ್ರದಲ್ಲಿ ತೋರಿಸ ಲಾಗಿದೆ. ಅದರಲ್ಲಿ ಸಂದರ್ಶಕಿ ಕೇಳಿದ ಪ್ರಶ್ನೆಗಳಿಗೆ ಮೋದಿ ಅತ್ಯಂತ ಒರಟಾಗಿ ಉತ್ತರಿಸಿದ್ದರು. ಆಕೆ ನೀವು ಏನನ್ನಾದರೂ ಸ್ವಲ್ಪ ವಿಭಿನ್ನವಾಗಿ ಮಾಡಬಹುದಿತ್ತಾ? ಎಂದು ಕೇಳಿದ್ದಕ್ಕೆ, ಮೋದಿ ಹೌದು, ಮೀಡಿಯಾಗಳನ್ನು ಮ್ಯಾನೇಜ್ ಮಾಡುವ ಒಂದು ಕ್ಷೇತ್ರದಲ್ಲಿ ನಾನು ಬಹಳ ದುರ್ಬಲನಾಗಿದ್ದೆ ಎಂದು ಹೇಳುತ್ತಾರೆ.

ಆ ಬಳಿಕ ಆ ಕ್ಷೇತ್ರದಲ್ಲಿ ಮೋದಿ ಅದೆಷ್ಟು ಸುಧಾರಿಸಿಕೊಂಡಿದ್ದಾರೆ ಎಂದರೆ ಇಡೀ ಜಗತ್ತಿನ ನಾಯಕರಿಗೆ ಮಾಧ್ಯಮವನ್ನು ಹೇಗೆ ನಿಭಾಯಿಸಬೇಕೆಂಬುದು ಮಾತ್ರವಲ್ಲ ಹೇಗೆ ತಮ್ಮ ಗುಲಾಮರಾಗಿಸಬೇಕು ಎಂದು ಅವರು ಪಾಠ ಹೇಳಬಲ್ಲರು. ಹಾಗಾಗಿಯೇ ಈಗ ದಿಢೀರನೆ ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ ಚಿತ್ರ ಅವರಿಗೆ ಆಘಾತ ತಂದಂತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)