varthabharthi


ರಾಷ್ಟ್ರೀಯ

ಇನ್ನು ಮುಂದೆ ಗೋವಾದಲ್ಲಿ ಅನುಮತಿ ಇಲ್ಲದೇ ಪ್ರವಾಸಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತಿಲ್ಲ !

ವಾರ್ತಾ ಭಾರತಿ : 28 Jan, 2023

ಸಾಂದರ್ಭಿಕ ಚಿತ್ರ 

ಪಣಜಿ: ಮುಂದಿನ ಬಾರಿ ನೀವೇನಾದರೂ ಗೋವಾದಲ್ಲಿದ್ದು, (Goa) ಇತರೆ ಪ್ರವಾಸಿಗರೊಂದಿಗೆ ಸೆಲ್ಫಿ (Selfie) ತೆಗೆದುಕೊಳ್ಳಲು ಅಥವಾ ಅವರ ಫೋಟೊ ಸೆರೆ ಹಿಡಿಯಬೇಕಿದ್ದರೆ, ಅವರ ಖಾಸಗಿತನ ಗೌರವಿಸುವ ಭಾಗವಾಗಿ ಅವರ ಅನುಮತಿ ಪಡೆಯಿರಿ! ಹೌದು, ಈ ನಿರ್ದೇಶನವನ್ನು ಗೋವಾ ಪ್ರವಾಸಿಗರಿಗೆ ಗೋವಾ ಪ್ರವಾಸೋದ್ಯಮ ಇಲಾಖೆಯು ನೀಡಿದೆ. ಈ ನಿರ್ದೇಶನವು ಪ್ರವಾಸಿಗರ ಖಾಸಗಿತನವನ್ನು ರಕ್ಷಿಸುವ, ಅವರ ಸುರಕ್ಷತೆಯನ್ನು ಖಾತ್ರಿಗೊಳಿಸುವ ಮತ್ತು ದುಷ್ಕರ್ಮಿಗಳಿಂದ ವಂಚನೆಗೊಳಗಾಗುವುದನ್ನು ತಪ್ಪಿಸುವುದನ್ನೂ ಸೇರಿದಂತೆ ಹಲವಾರು ಉದ್ದೇಶಗಳನ್ನು ಹೊಂದಿದೆ.

ಗುರುವಾರ ಈ ಕುರಿತು ಮಾರ್ಗಸೂಚಿ ಪ್ರಕಟಿಸಿರುವ ಗೋವಾ ಸರ್ಕಾರ, "ಇತರ ಪ್ರವಾಸಿಗರು/ ಅಪರಿಚಿತರೊಂದಿಗೆ, ವಿಶೇಷವಾಗಿ ಸೂರ್ಯಸ್ನಾನ ಅಥವಾ ಸಮುದ್ರದಲ್ಲಿ ಈಜಾಡುತ್ತಿರುವವರೊಂದಿಗೆ ಅವರ ಖಾಸಗಿತನವನ್ನು ಗೌರವಿಸಲು ಅವರ ಅನುಮತಿ ಇಲ್ಲದೆ ಸೆಲ್ಪಿ ಅಥವಾ ಭಾವಚಿತ್ರಗಳನ್ನು ತೆಗೆಯಬೇಡಿ" ಎಂದು ಸೂಚನೆ ನೀಡಿದೆ.

ಇದಲ್ಲದೆ, ಅಪಘಾತಗಳನ್ನು ತಪ್ಪಿಸಲು ಅಪಾಯಕಾರಿ ಸಮುದ್ರ ತೀರದಲ್ಲಿರುವ ಕಡಿದಾದ ಬಂಡೆ ಮತ್ತು ಸಮುದ್ರದ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದನ್ನೂ ಈ ಮಾರ್ಗಸೂಚಿ ನಿರ್ಬಂಧಿಸಿದೆ. ಇದರೊಂದಿಗೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ವಿಷಯಗಳಿಗೂ ಈ ಮಾರ್ಗಸೂಚಿಯಲ್ಲಿ ಒತ್ತು ನೀಡಲಾಗಿದೆ.

ಕರಾವಳಿ ರಾಜ್ಯವಾದ ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಪಾರಂಪರಿಕ ತಾಣಗಳಿಗೆ ಧಕ್ಕೆಯಾಗುವಂತೆ ಚಿತ್ರಗಳನ್ನು ರಚಿಸುವುದು ಮತ್ತು ವಾಸ್ತುಶಿಲ್ಪಗಳನ್ನು ಇನ್ನಿತರ ಕೃತ್ಯಗಳ ಮೂಲಕ ಹಾಳುಗೆಡವುವುದರಿಂದ ದೂರ ಉಳಿಯಬೇಕು ಎಂದೂ ಪ್ರವಾಸೋದ್ಯಮ ಇಲಾಖೆ ಸಲಹೆ ನೀಡಿದೆ.

ಹಾಗೆಯೇ ಕಾನೂನುಬಾಹಿರ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಾರದು. ದುಬಾರಿ ದರ ತೆರುವುದರಿಂದ ತಪ್ಪಿಸಿಕೊಳ್ಳಲು ಮೀಟರ್ ಹಾಕುವಂತೆ ಕಾರು ಚಾಲಕರಿಗೆ ಒತ್ತಾಯಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಪ್ರವಾಸಿಗರಿಗೆ ಸೂಚಿಸಿರುವ ಇಲಾಖೆಯು, ಈ ಎಲ್ಲ ನಿಯಮಗಳನ್ನೂ ಚಾಚೂತಪ್ಪದೆ ಪಾಲಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ: NDTV ತೊರೆದ ಹಿರಿಯ ಪತ್ರಕರ್ತ ಶ್ರೀನಿವಾಸನ್‌ ಜೈನ್‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)