varthabharthi


ರಾಷ್ಟ್ರೀಯ

'ಭಾರತ್ ಜೋಡೊ ಯಾತ್ರೆ'ಯಲ್ಲಿ ಭದ್ರತಾ ಲೋಪ: ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಮನವಿ

ವಾರ್ತಾ ಭಾರತಿ : 28 Jan, 2023

ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ (Bharat Jodo Yatra) ಸಮಾರೋಪಗೊಳ್ಳುವವರೆಗೂ ಸೂಕ್ತ ಭದ್ರತೆ ಒದಗಿಸುವಂತೆ ಕಾಂಗ್ರೆಸ್ (Congress) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, "ನೀವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಯಾತ್ರೆ ಸಮಾರೋಪಗೊಳ್ಳುವವರೆಗೂ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿದರೆ ನಾನು ಕೃತಜ್ಞನಾಗಿರುತ್ತೇನೆ" ಎಂದು ಹೇಳಿದ್ದಾರೆ.

"ನಾವು ಮುಂದಿನ ಎರಡು ದಿನ ಹಾಗೂ ಜನವರಿ 30ರಂದು ಶ್ರೀನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರುವ ನಿರೀಕ್ಷೆ ಹೊಂದಿದ್ದೇವೆ" ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಭದ್ರತಾ ಲೋಪದ ಕಾರಣಕ್ಕೆ ಶುಕ್ರವಾರದ ಮಧ್ಯಾಹ್ನ ಅವಧಿಯ ಭಾರತ್ ಜೋಡೋ ಯಾತ್ರೆಯನ್ನು ಅಮಾನತುಗೊಳಿಸಿದ್ದ ಕಾಂಗ್ರೆಸ್ ನಾಯಕರು, ಖಾಸಿಗುಂಡ್ ಬಳಿ ಪಾದ ಯಾತ್ರೆ ಪ್ರವೇಶಿಸಿದ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ನಿಯಂತ್ರಿಸದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭದ್ರತೆಯನ್ನು ಹಿಂಪಡೆದಿದ್ದರು ಎಂದು ಆರೋಪಿಸಿದ ಬೆನ್ನಿಗೇ ಖರ್ಗೆಯವರು ಈ ಪತ್ರ ಬರೆದಿದ್ದಾರೆ.

ಆದರೆ, ರಾಹುಲ್ ಗಾಂಧಿ ಅವರು ಭದ್ರತಾ ಪಡೆಗಳ ವಿರುದ್ಧ ದಾರಿ ತಪ್ಪಿಸುವ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಟೀಕಿಸಿದ್ದಾರೆ.

ಇದನ್ನೂ ಓದಿ: NDTV ತೊರೆದ ಹಿರಿಯ ಪತ್ರಕರ್ತ ಶ್ರೀನಿವಾಸನ್‌ ಜೈನ್‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)