ರಾಷ್ಟ್ರೀಯ
ಅದಾನಿ ಕಂಪೆನಿಗಳ ಷೇರು ಮೌಲ್ಯಗಳ ಕುಸಿತದಿಂದ ಎರಡೇ ದಿನದಲ್ಲಿ LICಗೆ 18,000 ಕೋಟಿ ರೂ. ನಷ್ಟ

ಹೊಸದಿಲ್ಲಿ: ಅಮೆರಿಕಾದ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹ ಸಂಸ್ಥೆಗಳ (Adani group) ವಿರುದ್ಧ ಹಲವು ಆರೋಪಗಳನ್ನು ಹೊರಿಸಿ ಹೊರ ತಂದ ಅಧ್ಯಯನ ವರದಿಯ ಬೆನ್ನಲ್ಲೇ ಅದಾನಿ ಸಂಸ್ಥೆಯ ಕಂಪೆನಿಗಳ ಷೇರು ಬೆಲೆಗಳು ಬುಧವಾರ ಹಾಗೂ ಶುಕ್ರವಾರದ ಟ್ರೇಡಿಂಗ್ ಅವಧಿಯಲ್ಲಿ ಭಾರೀ ಇಳಿಕೆ ಕಂಡ ಪರಿಣಾಮ ಅದಾನಿ ಸಂಸ್ಥೆಗಳಲ್ಲಿನ ಪ್ರಮುಖ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಗಳಲ್ಲೊಂದಾಗಿರುವ ದೇಶದ ಅತಿ ದೊಡ್ಡ ವಿಮಾ ಕಂಪೆನಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation of India (LIC)) ಬರೋಬ್ಬರಿ ರೂ. 18,647 ಕೋಟಿ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿಯ ಜಂಟಿ ಹೂಡಿಕೆ ಮೊತ್ತ ರೂ. 81,268 ಕೋಟಿ ಆಗಿದ್ದರೆ ಷೇರು ಬೆಲೆ ಕುಸಿತದಿಂದ 18,647 ಕೋಟಿ ರೂ. ನಷ್ಟವುಂಟಾಗಿ ಸದ್ಯ ಅದಾನಿ ಸಂಸ್ಥೆಗಳಲ್ಲಿನ ಎಲ್‌ಐಸಿ ಹೂಡಿಕೆ ಮೌಲ್ಯ ರೂ. 62,621 ಕೋಟಿಗೆ ಕುಸಿದಿದೆ.
ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಸಂಸ್ಥೆಗಳಲ್ಲಿ ಎಲ್‌ಐಸಿ ಪಾಲು ಬಂಡವಾಳ ಶೇ. 1 ಕ್ಕಿಂತ ಹೆಚ್ಚಿದೆ. ಆದರೆ ಬುಧವಾರ ಮತ್ತು ಶುಕ್ರವಾರದ ಟ್ರೇಡಿಂಗ್ ಅವಧಿಯಲ್ಲಿ ಈ ಕಂಪೆನಿಗಳ ಷೇರುಗಳ ಮೌಲ್ಯ ಶೇ 19 ರಿಂದ ಶೇ 27 ರಷ್ಟು ಕುಸಿತ ಕಂಡಿದೆ.
ಒಟ್ಟಾರೆಯಾಗಿ ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಎಲ್‌ಐಸಿ ಹೂಡಿಕೆ ಮೌಲ್ಯ ರೂ. 6,237 ಕೋಟಿಯಷ್ಟು ಇಳಿಕೆಯಾಗಿದ್ದರೆ, ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಐಸಿ ಹೂಡಿಕೆ ರೂ. 3,279 ರಷ್ಟು, ಅದಾನಿ ಪೋರ್ಟ್ಸ್‌ನಲ್ಲಿ ರೂ. 3,205 ಕೋಟಿಯಷ್ಟು, ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ರೂ. 3,036 ಕೋಟಿಯಷ್ಟು, ಅಂಬುಜಾ ಸಿಮೆಂಟ್ಸ್‌ನಲ್ಲಿ ರೂ 1,474 ಕೋಟಿ, ಅದಾನಿ ಗ್ರೀನ್ ಎನರ್ಜಿಯಲ್ಲಿ ರೂ. 871 ಕೋಟಿಯಷ್ಟು ಹಾಗೂ ಎಸಿಸಿ ಯಲ್ಲಿ ರೂ. 544 ಕೋಟಿಯಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ: ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿನಿ ದಿಢೀರ್ ಕುಸಿದು ಬಿದ್ದು ಮೃತ್ಯು
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ