varthabharthi


ಬೆಂಗಳೂರು

ಬೆಂಗಳೂರು | ಪ್ರಯಾಣದ ವೇಳೆ ಕೆಲಸ ಮಾಡದ ಎ.ಸಿ: 15 ಸಾವಿರ ರೂ. ಪರಿಹಾರ ನೀಡುವಂತೆ ಓಲಾಗೆ ಗ್ರಾಹಕ ವೇದಿಕೆ ನಿರ್ದೇಶನ

ವಾರ್ತಾ ಭಾರತಿ : 28 Jan, 2023

ಬೆಂಗಳೂರು, ಜ.28: ಪ್ರಯಾಣಿಕರೊಬ್ಬರ ಪ್ರಯಾಣದ ವೇಳೆ ಹವಾನಿಯಂತ್ರಣ(ಎಸಿ) ಕೆಲಸ ಮಾಡದ ಹಿನ್ನೆಲೆಯಲ್ಲಿ ಅವರಿಗೆ 15 ಸಾವಿರ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಇತ್ತೀಚೆಗೆ ಕ್ಯಾಬ್ ಅಗ್ರಿಗೇಟರ್ ಅಪ್ಲಿಕೇಶನ್ ಓಲಾಗೆ ನಿರ್ದೇಶನ ನೀಡಿದೆ. 

ಗ್ರಾಹಕರಿಗೆ ನೀಡಿದ ಭರವಸೆಯಂತೆ ಅವರಿಗೆ ಸೇವೆ ಒದಗಿಸುವುದು ಅಗ್ರಿಗೇಟರ್ (ಓಲಾ) ಸಂಸ್ಥೆಯ ಕರ್ತವ್ಯವಾಗಿದೆ. ಎಂಟು ಗಂಟೆಗಳ ಪ್ರಯಾಣದ ಅವಧಿಗೆ ಎಸಿ ಸೇವೆ ಒದಗಿಸದೆ ದೂರುದಾರರು ತಮ್ಮ ಪ್ರಯಾಣದಲ್ಲಿ ಅನಾನುಕೂಲ ಮತ್ತು ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಹೀಗಾಗಿ, ಓಲಾ ಸೇವಾಲೋಪ ಎಸಗಿದ್ದು ಅನ್ಯಾಯದ ವ್ಯಾಪಾರ ಕ್ರಿಯೆಯಲ್ಲಿ ತೊಡಗಿದೆ ಎಂದು ಆಯೋಗದ ಅಧ್ಯಕ್ಷೆ ಎಂ.ಶೋಭಾ ನೇತೃತ್ವದ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ದೂರುದಾರರು ಅ.2021ರಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಓಲಾ ಅಪ್ಲಿಕೇಶನ್ ಮೂಲಕ ಕ್ಯಾಬ್ ಬಾಡಿಗೆಗೆ ಪಡೆದು 80 ಕಿ ಮೀ ಅಥವಾ ಎಂಟು ಗಂಟೆಗಳ ಪ್ರಯಾಣದ ಆಯ್ಕೆ ಮಾಡಿಕೊಂಡಿದ್ದರು. ಆದರೆ 8 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಎಸಿ ಕಾರ್ಯನಿರ್ವಹಿಸಲಿಲ್ಲ ಎಂದು ಅವರು ದೂರಿದ್ದರು.

ಈ ದೂರನ್ನು ಹಿರಿಯ ವ್ಯವಸ್ಥಾಪಕರ ಬಳಿ ಒಯ್ದಾಗ ಯಾವುದೇ ಚರ್ಚೆ ನಡೆಸದೇ 100 ರೂ. ಮರುಪಾವತಿ ಮಾಡಲಾಯಿತು. ಇದರಿಂದ ಅಸಮಾಧಾನಗೊಂಡ ದೂರುದಾರರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ತನಗೆ 50 ಸಾವಿರ ರೂ. ಪರಿಹಾರ ಹಾಗೂ 1,837 ಬುಕಿಂಗ್ ಮೊತ್ತ ಒದಗಿಸಿಕೊಡಬೇಕೆಂದು ಕೋರಿದ್ದರು.

ಭರವಸೆ ನೀಡಿದಂತೆ ಸೇವೆ ಒದಗಿಸುವುದು ಓಲಾ ಕರ್ತವ್ಯವಾಗಿದ್ದು, ತಮ್ಮ 8 ಗಂಟೆಗಳ ಪ್ರಯಾಣಕ್ಕೆ ಹವಾನಿಯಂತ್ರಣವನ್ನು ಒದಗಿಸದೆ ದೂರುದಾರರಿಗೆ ಅದು ನೋವುಂಟು ಮಾಡಿದೆ ಎಂದು ಆಯೋಗ ಹೇಳಿದೆ. ಜತೆಗೆ ಗ್ರಾಹಕರಿಗೆ 15 ಸಾವಿರ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಇದನ್ನೂ ಓದಿಬೆಂಗಳೂರು: ವಿಮಾನ ಪ್ರಯಾಣಿಕರ ಚೀಲದಲ್ಲಿ ಹೆಬ್ಬಾವು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)