varthabharthi


ಬೆಂಗಳೂರು

ದೇಶದಲ್ಲಿ ಏಕ ಭಾಷೆ ಹೇರುವ ಹುನ್ನಾರ: ಶಿಕ್ಷಣ ತಜ್ಞ ಅಲ್ಲಮಪ್ರಭು ಬೆಟ್ಟದೂರು

ವಾರ್ತಾ ಭಾರತಿ : 28 Jan, 2023

ಬೆಂಗಳೂರು, ಜ.28: ಭಾರತದಲ್ಲಿ 22 ಅಧಿಕೃತ ಭಾಷೆಗಳು ಇದ್ದರೂ, ಏಕ ಭಾಷೆಯನ್ನು ಜನರ ಮೇಲೆ ಹೇರುವ ಹುನ್ನಾರ ನಡೆಯುತ್ತಿದೆ. ಇದು ಇತ್ತೀಚೆಗೆ ಇದು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎಂದು ಶಿಕ್ಷಣ ತಜ್ಞ ಅಲ್ಲಮಪ್ರಭು ಬೆಟ್ಟದೂರು ಎಚ್ಚರಿಕೆ ನೀಡಿದ್ದಾರೆ. 

ಶನಿವಾರ ನಗರದ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ಎಐಡಿಎಸ್‍ಓ ವತಿಯಿಂದ ಆಯೋಜಿಸಿದ್ದ ‘ನೇತಾಜಿ ಸುಭಾಷ್ ಚಂದ್ರ ಬೋಸ್‍ರ 125ನೆ ಜನ್ಮ ವರ್ಷಾಚರಣೆಯ ವಿವಿಧ ಚಟುವಟಿಕೆಗಳ ಸಮಾರೋಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬಹು ಸಂಸ್ಕೃತಿಯನ್ನು ಬದಿಗೆ ಇರಿಸಿ, ಏಕ ಸಂಸ್ಕøತಿಯನ್ನು ಜಾರಿ ಮಾಡಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಇದು ದೇಶದ ಯುವ ಜನತೆ ಚಿಂತಿಸಬೇಕಾದ ವಿಷಯವಾಗಿದೆ ಎಂದರು.

ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಬಹುದೊಡ್ಡ ನಾಯಕರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ವೈಚಾರಿಕ ಮುನ್ನೋಟವನ್ನು ಹೊಂದಿದ್ದರು. ಮಹಿಳಾ ಸೈನ್ಯವನ್ನು ಕಟ್ಟಿ ಚಳುವಳಿಯಲ್ಲಿ ಮಹಿಳೆಯರಿಗೂ ಪಾಲುದಾರಿಕೆಯನ್ನು ನೀಡಿದರು. ನಾವು ಇಂದು ನೇತಾಜಿಯವರ ನೈಜವಾದ ಆದರ್ಶಗಳನ್ನು ಅರಿತು, ಅವರ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಹಂಪಿ ವಿವಿ ಮಾಜಿ ಉಪ ಕುಲಪತಿ ಪ್ರೊ.ಮುರಿಗೆಪ್ಪ ಮಾತನಾಡಿ, ಸುಭಾಷ್ ಚಂದ್ರ ಬೋಸರ ಮುಖ್ಯ ಗುರಿ ಸ್ವಾತಂತ್ಯ ಪಡೆಯುವುದಾಗಿತ್ತು. ಬ್ರಿಟಿಷರ ದುರಾಡಳಿತವು ಸುಭಾಷರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿತು. ಜಾತಿ-ಧರ್ಮವನ್ನು ಮೀರಿ ರಾಷ್ಟ್ರೀಯತೆಯ ಭಾವನೆಗೆ ಗೌರವಿಸುವುದು ಅವರ ವೈಶಿಷ್ಟ್ಯವಾಗಿತ್ತು ಎಂದು ತಿಳಿಸಿದರು.

ಎಐಡಿಎಸ್‍ಓನ ಅಖಿಲ ಭಾರತ ಅಧ್ಯಕ್ಷ ವಿ.ಎನ್.ರಾಜಶೇಖರ್ ಮಾತನಾಡಿ, ಜಾತಿ-ಧರ್ಮಗಳನ್ನು ಮೀರಿ, ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಒಂದಾಗಬೇಕು ಎಂಬುದು ನೇತಾಜಿಯವರ ಕನಸಾಗಿತ್ತು. ವಿದ್ಯಾರ್ಥಿಗಳು ನೇತಾಜಿಯ ನೈಜ ಉತ್ತರಾಧಿಕಾರಿಗಳಾಗಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಹಾಗೂ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)