ರಾಷ್ಟ್ರೀಯ
ಆಮೆಗತಿಯಲ್ಲಿ ಸಾಗುತ್ತಿರುವ ಜೋಶಿಮಠ ರಕ್ಷಣೆ ಪ್ರಯತ್ನ: ಸ್ಥಳೀಯರ ಪ್ರತಿಭಟನೆ

PHOTO : PTI
ಡೆಹ್ರಾಡೂನ್,ಜ.28: ಕುಸಿಯುತ್ತಿರುವ ಜೋಶಿಮಠ(Joshimath)ವನ್ನು ರಕ್ಷಿಸುವ ಪ್ರಯತ್ನಗಳು ಆಮೆಗತಿಯಲ್ಲಿ ಸಾಗುತ್ತಿವೆ ಎಂದು ಆರೋಪಿಸಿ ನೂರಾರು ಸ್ಥಳೀಯರು ಶುಕ್ರವಾರ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದರು.
ಭೂಕುಸಿತಗಳಿಂದ ಸಂತ್ರಸ್ತ ಜನರಿಗೆ ಕಾಯಂ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಬೇಡಿಕೆಗಳಿಗೆ ಒತ್ತು ನೀಡಲು ಜೋಶಿಮಠ ಬಚಾವೊ ಸಂಘರ್ಷ ಸಮಿತಿಯು ಪ್ರತಿಭಟನೆಗೆ ಕರೆ ನೀಡಿತ್ತು.ಜೋಶಿಮಠವನ್ನು ಉಳಿಸಬೇಕು ಎಂಬ ತುರ್ತು ಅಗತ್ಯ ಈಗಲೂ ಕಾಣಿಸುತ್ತಿಲ್ಲ. ಬದರಿನಾಥದ ಮಾದರಿಯಲ್ಲಿ ಕಾಯಂ ಪುನರ್ವಸತಿ ಮತ್ತು ಪರಿಹಾರ ಒದಗಿಸುವುದು ಹಾಗೂ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (NTPC)ದ ಯೋಜನೆಯನ್ನು ಕೈಬಿಡುವುದು ಸೇರಿದಂತೆ ಹಲವು ಸಮಸ್ಯೆಗಳು ಈಗಲೂ ಬಗೆಹರಿದಿಲ್ಲ ಎಂದು ಸಮಿತಿಯ ವಕ್ತಾರ ಕಮಲ್ ರಾತುರಿ ಹೇಳಿದರು.
ಎನ್ಟಿಪಿಸಿಯ 520 ಮೆ.ವ್ಯಾ.ಸಾಮರ್ಥ್ಯದ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಗಾಗಿ 12 ಕಿ.ಮೀ.ಉದ್ದದ ಸುರಂಗವನ್ನು ತೋಡುತ್ತಿರುವುದು ಜೋಶಿಮಠ ಕುಸಿಯುವಿಕೆಯನ್ನು ಹೆಚ್ಚಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುರಂಗಕ್ಕೂ ಭೂಕುಸಿತಗಳಿಗೂ ಸಂಬಂಧವನ್ನು ನಿರಾಕರಿಸಿರುವ ಎನ್ಟಿಪಿಸಿ,ಸುರಂಗವು ನೆಲದಡಿ ಒಂದು ಕಿ.ಮೀ.ಗೂ ಕೆಳಕ್ಕಿದೆ ಮತ್ತು ಜೋಶಿಮಠದ ಕೆಳಗಿಲ್ಲ ಎಂದು ಹೇಳಿದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪತ್ತು ನಿರ್ವಹಣೆ ಕಾರ್ಯದರ್ಶಿ ರಂಜಿತ್ ಕುಮಾರ ಸಿನ್ಹಾ(Ranjit Kumar Sinha) ಅವರು 863 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಮತ್ತು ಜೆಪಿ ಕಾಲನಿ ಪ್ರದೇಶದಲ್ಲಿ ನೀರಿನ ಜಿನುಗುವಿಕೆ ಪ್ರಮಾಣವನ್ನು ಪ್ರತಿ ನಿಮಿಷಕ್ಕೆ 171 ಲೀ.ಗೆ ತಗ್ಗಿಸಲಾಗಿದೆ ಎಂದು ತಿಳಿಸಿದರು.
ಸುಮಾರು 250 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ 3.36 ಕೋ.ರೂ.ಗಳನ್ನು ವಿತರಿಸಲಾಗಿದೆ ಎಂದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ