varthabharthi


ರಾಷ್ಟ್ರೀಯ

ತ್ರಿಪುರಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ 48 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಾರ್ತಾ ಭಾರತಿ : 28 Jan, 2023

PHOTO : NDTV 

ಹೊಸದಿಲ್ಲಿ,ಜ.28: ಮುಂಬರುವ ತ್ರಿಪುರಾ(Tripura) ವಿಧಾನಸಭಾ ಚುನಾವಣೆಗಾಗಿ 60 ಕೇತ್ರಗಳ ಪೈಕಿ 48 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ(BJP) ಶನಿವಾರ ಬಿಡುಗಡೆಗೊಳಿಸಿದೆ. ಮುಖ್ಯಮಂತ್ರಿ ಮಾಣಿಕ್ ಸಹಾ(Manik Saha) ಟೌನ್ ಬೋರ್ಡೊವಾಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಉಳಿದ 12 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅದು ಶೀಘ್ರ ಪ್ರಕಟಿಸಲಿದೆ. ಇದೇ ವೇಳೆ ಕಾಂಗ್ರೆಸ್ (Congress)ತನ್ನ 17 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.

ತ್ರಿಪುರಾ ಸಂಸದೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಚಿವೆಯಾಗಿರುವ ಪ್ರತಿಮಾ ಭೌಮಿಕ್(Pratima Bhoumik) ಅವರು ಧನಪತ್(Dhanpat) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ಇಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಅನಿಲ್ ಬಲುನಿ(Anil Baluni) ಮತ್ತು ಸಂಬಿತ್ ಪಾತ್ರಾ(Sambit Patra)ಅವರು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.

2018ರಲ್ಲಿ 60 ಸದಸ್ಯಬಲದ ವಿಧಾನಸಭೆಯಲ್ಲಿ 36 ಸ್ಥಾನಗಳನ್ನು ಗೆಲ್ಲುವ ಮೂಲಕ 25 ವರ್ಷಗಳ ಸಿಪಿಎಂ(CPM) ಆಡಳಿತಕ್ಕೆ ಅಂತ್ಯ ಹಾಡಿದ್ದ ಬಿಜೆಪಿ ತ್ರಿಪುರಾದಲ್ಲಿ ಮೊದಲ ಬಾರಿಗೆ ಸರಕಾರವನ್ನು ರಚಿಸಿತ್ತು.ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಎಡರಂಗ-ಕಾಂಗ್ರೆಸ್ ಮೈತ್ರಿಕೂಟ ಮತ್ತು ಟಿಎಂಸಿ(TMC) ಜೊತೆಗೆ ತ್ರಿಕೋನ ಸ್ಪರ್ಧೆಯನ್ನು ಎದುರಿಸಲಿದೆ.

ತಿಪ್ರಾ ಮೋತಾ ರಾಜಕೀಯ ಪಕ್ಷದ ಸ್ಥಾಪಕ ಹಾಗೂ ಹಿಂದಿನ ತ್ರಿಪುರಾ ರಾಜಮನೆತನದ ಪ್ರದ್ಯೋತ ದೇವ್ ಬರ್ಮನ್ ಅವರು ಬಿಜೆಪಿಯೊಂದಿಗೆ ಮೈತ್ರಿಯ ಸಾಧ್ಯತೆಗಳನ್ನು ತಳ್ಳಿಹಾಕಿದ್ದಾರೆ.2018ರಲ್ಲಿ ಬಿಪ್ಲಬ್ ದೇಬ್ ಅವರು ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಆದರೆ ಅವರ ನಾಯಕತ್ವದ ಕುರಿತು ಪಕ್ಷದಲ್ಲಿ ಅಸಮಾಧಾನ ಹೆಚ್ಚಿದ ಬಳಿಕ ಸಹಾ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಲಾಗಿತ್ತು ಮತ್ತು ದೇಬ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು.

17 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಸಿಪಿಎಂ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ತನ್ನ 17 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದೆ. ಮಾಜಿ ಬಿಜೆಪಿ ಸಚಿವ ಹಾಗೂ ಅಗರ್ತಲಾ ಶಾಸಕ ಸುದೀಪ ರಾಯ್ ಬರ್ಮನ್ ಅವರು ಮುಂಬರುವ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಕಾಂಗ್ರೆಸ್ ತನ್ನ ತಾರಾ ಪ್ರಚಾರಕರ ಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದು,ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ,ಆಧಿರ್ ರಂಜನ್ ಚೌಧುರಿ,ಭೂಪೇಶ್ ಭಘೇಲ್,ಅಶೋಕ್ ಗೆಹ್ಲೋಟ್ ಮತ್ತಿತರರು ಪಟ್ಟಿಯಲ್ಲಿದ್ದಾರೆ.

ಈ ವಾರದ ಪೂರ್ವಾರ್ಧದಲ್ಲಿ ಸಿಪಿಎಂ ನೇತೃತ್ವದ ಎಡರಂಗವು ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿತ್ತು. ತ್ರಿಪುರಾ ವಿಧಾನಸಭೆಗೆ ಫೆ.16ರಂದು ಚುನಾವಣೆ ನಡೆಯಲಿದ್ದು, ಮಾ.2ರಂದು ಮತಎಣಿಕೆ ನಡೆಯಲಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)