varthabharthi


ದಕ್ಷಿಣ ಕನ್ನಡ

ಸಾರಾ ಅಬೂಬಕರ್ ಸಾರ್ವಜನಿಕ ವಲಯದಲ್ಲೂ ಪ್ರತಿರೋಧದ ಧ್ವನಿಯಾಗಿದ್ದ ಮಹಿಳೆ: ಪ್ರೊ. ಶಿವರಾಮ ಶೆಟ್ಟಿ

ವಾರ್ತಾ ಭಾರತಿ : 28 Jan, 2023

ಮಂಗಳೂರು: ನಾಡೋಜ ಸಾರಾ ಅಬೂಬಕರ್ ಕೇವಲ ಧಾರ್ಮಿಕ ಪ್ರತಿರೋಧದ ಧ್ವನಿಯಾಗಿದ್ದು ಮಾತ್ರವಲ್ಲದೆ,  ಸಾರ್ವಜನಿಕ ವಲಯದಲ್ಲೂ ಪ್ರತಿರೋಧದ ಧ್ವನಿಯಾಗಿದ್ದರು ಎಂದು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ ಹೇಳಿದ್ದಾರೆ.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ  ಸಮಾರಂಭದಲ್ಲಿ ಶ್ರೀ ಮುದ್ರಾಡಿಯವರಿಗೆ ಸಾರಾ ದತ್ತಿ ಪ್ರಶಸ್ತಿ ಮತ್ತು  ಅಕ್ಷತಾರಾಜ್ ಪೆರ್ಲ ಇವರಿಗೆ ಚಂದ್ರಭಾಗಿ ರೈ ದತ್ತಿ ಪ್ರಶಸ್ತಿ  ಪ್ರದಾನ ಮಾಡಿ ಮಾತನಾಡಿದರು.

ಸಾರಾ ಅಬೂಬಕರ್ ವ್ಯಕ್ತಿ ಪ್ರಧಾನವಾಗಿರುವ ಸಮಾಜದಲ್ಲಿ ಗುರುತಿಸಿಕೊಂಡವರು.ಶಿವರಾಮ ಕಾರಂತರು ಸಾಹಿತಿಯಾಗಿದ್ದು , ಪರಿಸರ ಪರ ಹೋರಾಟದಲ್ಲಿ ಕಾಣಿಸಿಕೊಂಡಂತೆ ಸಾರಾ ಕೂಡಾ ಜನಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಚಂದ್ರಭಾಗಿ ರೈ ಅವರ ಪುತ್ರಿ ಕಾಂತಿ ರೈ ಮತ್ತು ಸಾರಾ ಅಬೂಬಕರ್ ಸೊಸೆ ಡಾ.ಸಕೀನಾ ನಾಸಿರ್ ಉಪಸ್ಥಿತರಿದ್ದರು.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು.

ಸಾರಾ ಅಬೂಬಕರ್ ಪ್ರಶಸ್ತಿ ಸ್ವೀಕರಿಸಿದ  ಶ್ರೀಮುದ್ರಾಡಿ ಮತ್ತು  ಚಂದ್ರಭಾಗಿ ರೈ ದತ್ತಿ ಪ್ರಶಸ್ತಿ ಪಡೆದ  ಅಕ್ಷತಾರಾಜ್  ಪೆರ್ಲ  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ತೀರ್ಪುಗಾರರ ಪರವಾಗಿ ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಮತ್ತು ಸಾಹಿತಿ ಬಿ.ಎಂ. ರೋಹಿಣಿ ಮಾತನಾಡಿದರು.

ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬಿ  ಶೆಟ್ಟಿ ಸ್ವಾಗತಿಸಿದರು. ಅಕೃತಿ ಭಟ್ ಆಶಯ ಗೀತೆ ಹಾಡಿದರು. ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ವಂದಿಸಿದರು. ಜ್ಯೋತಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)