varthabharthi


ರಾಷ್ಟ್ರೀಯ

ಕ್ಯಾಂಪಸ್ ನಲ್ಲಿ ಬಿಬಿಸಿ ಸಾಕ್ಷಚಿತ್ರ ಪ್ರದರ್ಶಿಸಿದ್ದೇವೆ: ಎಫ್ಟಿಐಐ ವಿದ್ಯಾರ್ಥಿ ಸಂಘ

ವಾರ್ತಾ ಭಾರತಿ : 28 Jan, 2023

ಪುಣೆ,ಜ.28: ಇಲ್ಲಿಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII)ಯ ಕ್ಯಾಂಪಸ್ ನಲ್ಲಿ 2002ರ ಗುಜರಾತ್ ಗಲಭೆಗಳ ಕುರಿತ ವಿವಾದಾತ್ಮಕ ಬಿಬಿಸಿ(BBC) ಸಾಕ್ಷಚಿತ್ರವನ್ನು ಜ.26ರಂದು ತಾನು ಪ್ರದರ್ಶಿಸಿದ್ದಾಗಿ ವಿದ್ಯಾರ್ಥಿಗಳ ಸಂಘವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

‘ಇಂಡಿಯಾ:ದಿ ಮೋದಿ ಕ್ವೆಶ್ಚನ್ ’(India: The Modi Question)ಸಾಕ್ಷಚಿತ್ರದ ಲಿಂಕ್ ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರಕಾರವು ಕಳೆದ ವಾರ ಟ್ವಿಟರ್ ಮತ್ತು ಯೂಟ್ಯೂಬ್ ಗೆ  ನಿರ್ದೇಶಿಸಿತ್ತು.

ಇತಿಹಾಸದುದ್ದಕ್ಕೂ ಸಾಹಿತ್ಯ,ಸಂಗೀತ ಮತ್ತು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ನಿಷೇಧವು ಕುಸಿಯುತ್ತಿರುವ ಸಮಾಜದ ಸಂಕೇತವಾಗಿದೆ ಎಂದು ತಿಳಿಸಿರುವ ಹೇಳಿಕೆಯು,‘ಪರಿಶೀಲನೆಯ ಕಾರ್ಯವನ್ನು ನಮ್ಮ ಚುನಾಯಿತ ಪ್ರತಿನಿಧಿಗಳು ಸ್ವಾಗತಿಸಬೇಕು. ಬದಲಿಗೆ ಅವರು ಅದನ್ನು ಸುಳ್ಳು ಪ್ರಚಾರ ಎಂದು ತ್ವರಿತವಾಗಿ ಹಣೆಪಟ್ಟಿ ಅಂಟಿಸುತ್ತಾರೆ ಮತ್ತು ಅದನ್ನು ಅಡಗಿಸಿಡಲು ಪ್ರಯತ್ನಿಸುತ್ತಾರೆ. ಏನನ್ನಾದರೂ ವೀಕ್ಷಿಸಲು ಖಚಿತ ಮಾರ್ಗವೆಂದರೆ ಅದನ್ನು ನಿಷೇಧಿಸುವುದು ಎನ್ನುವುದು ಅವರಿಗೆ ತಿಳಿದಿರಬೇಕು ’ಎಂದಿದೆ.

‘ಆದರೂ ಬಿಬಿಸಿ ಸಾಕ್ಷಚಿತ್ರವು ಸಮರ್ಪಿತ,ಏಕೈಕ ಮತ್ತು ಕೆಟ್ಟ ಉದ್ದೇಶಕ್ಕಾಗಿ ದೇಶಾದ್ಯಂತ ಶಾಶ್ವತವಾಗಿರುವ ಹಿಂಸಾಚಾರದ ಸ್ವರೂಪವನ್ನು ಅಷ್ಟಾಗಿ ಬಿಂಬಿಸಿಲ್ಲ. ಈ ಸಾಕ್ಷಚಿತ್ರದಲ್ಲಿಯ ಘಟನೆಗಳನ್ನು ಕಂಡು ಯಾರಾದರೂ ಆಶ್ಚರ್ಯಗೊಂಡರೆ ಅದು ನಮಗೆ ಅಚ್ಚರಿಯನ್ನುಂಟು ಮಾಡುತ್ತದೆ’ ಎಂದು ವಿದ್ಯಾರ್ಥಿ ಸಂಘವು ಹೇಳಿದೆ.

ವಿದ್ಯಾರ್ಥಿಗಳ ಗುಂಪೊಂದು ಸಾಕ್ಷಚಿತ್ರವನ್ನು ಪ್ರದರ್ಶಿಸಿರುವುದು ವರದಿಯಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಫ್ಟಿಐಐ ರಿಜಿಸ್ಟ್ರಾರ್ ಸೈಯದ್ ರಬೀಹಾಶಿಮಿ(Sayyid Rabeehashmi) ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)