ಕರ್ನಾಟಕ
''ಮಹಾಭಾರತದಲ್ಲಿ ನಡೆದಿದ್ದೇ ಇಲ್ಲೂ ನಡೆಯುತ್ತಿದೆ''
ಹಾಸನ ಟಿಕೆಟ್ ವಿಚಾರ: ನಮ್ಮ ಮನೆ ಮಕ್ಕಳು ಶಕುನಿ ಮಾತು ಕೇಳಿ ಮಾತನಾಡಿದ್ದಾರೆ ಎಂದ ಕುಮಾರಸ್ವಾಮಿ

ರಾಯಚೂರು: ''ಹಾಸನ ಟಿಕೆಟ್ ವಿಚಾರದಲ್ಲಿ ಹೆಚ್.ಡಿ. ದೇವೇಗೌಡರ ಹೆಸರು ತರಬೇಡಿ. ನಮ್ಮ ಮನೆ ಮಕ್ಕಳು ಶಕುನಿ ಮಾತು ಕೇಳಿ ಮಾತನಾಡಿದ್ದಾರೆ. ನಮ್ಮ ಮನೆ ಮಕ್ಕಳು ನಮ್ಮನ್ನು ಪ್ರಶ್ನಿಸುವುದು ದೊಡ್ಡ ವಿಷಯವೇನಲ್ಲ. ಅವರೆಲ್ಲಾ ನಮ್ಮ ಹುಡುಗರೇ ಮಾತನಾಡಿದ್ದಾರೆ. ನಾವು ಮನೆಯಲ್ಲಿ ಕೂತುಕೊಂಡು ಮಾತನಾಡುತ್ತೇವೆ'' ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದ ಸಿರವಾರ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಹಾಸನ ಟಿಕೆಟ್ ವಿಚಾರವನ್ನು ಸರಿಪಡಿಸುವುದು ಹೇಗೆಂದು ಗೊತ್ತಿದೆ. ಆದರೆ ಯಾವುದೇ ಕಾರಣಕ್ಕೂ ದೇವೇಗೌಡರ ಹೆಸರು ತರಬೇಡಿ. ನಾನು ಜೆಡಿಎಸ್ ಪಕ್ಷಕ್ಕೆ 120 ಸೀಟ್ ತರಬೇಕೆಂದು ಓಡಾಡುತ್ತಿದ್ದೇನೆ. 120 ಸೀಟ್ ಗೆದ್ದು ದೇವೇಗೌಡರರಿಗೆ ಗಿಫ್ಟ್ ಕೊಡಬೇಕು ಅಂತಾ ಇದ್ದೇನೆ. ಗೊಂದಲಗಳನ್ನ ಸೃಷ್ಟಿ ಮಾಡಿ ಅವರಿಗೆ ತೊಂದರೆ ಕೊಡಲು ಇಷ್ಟವಿಲ್ಲ'' ಎಂದು ಹೇಳಿದರು.
''ಮಹಾಭಾರತದಲ್ಲಿ ನಡೆದಿದ್ದೇ ಇಲ್ಲೂ ನಡೆಯುತ್ತಿದೆ. ಇದು ಮಹಾಭಾರತವಾದರೆ ಇದರಲ್ಲಿ ನಾನು ಸಾಮಾನ್ಯ ಪ್ರಜೆ. ಸೂರಜ್, ಸಂಸದ ಪ್ರಜ್ವಲ್ ಹೇಳಿದ್ದರಲ್ಲಿ ತಪ್ಪೇನಿಲ್ಲ. ನಾನು ರಾಜ್ಯದ ಬಗ್ಗೆ ಗಮನಹರಿಸುತ್ತಿದ್ದೇನೆ. ರೇವಣ್ಣ ಹಾಸನ ನೋಡುತ್ತಿದ್ದಾರೆ. ಹಾಸನದಲ್ಲಿ ಪ್ರತಿ ಕೆಲಸ ನನ್ನಿಂದ, ದೇವೇಗೌಡರಿಂದ ಮಾಡಿಸಿಕೊಂಡಿದ್ದಾರೆ. ಯಾರು ನಿರ್ಧಾರ ಕೈಗೊಳ್ಳಬೇಕೆಂದು ಮನೆಯಲ್ಲಿ ತೀರ್ಮಾನಿಸುತ್ತೇವೆ. ಬೀದಿಯಲ್ಲಿ ಚರ್ಚೆ ಮಾಡಿ ಉತ್ತರ ಕೊಡಲ್ಲ. ನೀವೆಲ್ಲ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ'' ಎಂದು ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ