ರಾಷ್ಟ್ರೀಯ
ಸಿಟ್ಟಿಗೆದ್ದ ರಣಬೀರ್ ಕಪೂರ್ ಅಭಿಮಾನಿಯ ಮೊಬೈಲ್ ಫೋನ್ ಎಸೆದರೇ?: ವಾಸ್ತವಾಂಶ ಇಲ್ಲಿದೆ

Screengrab (Photo: Twitter)
ಮುಂಬೈ: ಅಭಿಮಾನಿಯೊಬ್ಬ ನಟ ರಣಬೀರ್ ಕಪೂರ್ (Ranbir Kapoor) ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ಯತ್ನಿಸುವಾಗ ಆತನ ಫೋನ್ ಅನ್ನು ರಣಬೀರ್ ಕಪೂರ್ ಕಿತ್ತೆಸೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿನಿ ತಾರೆ ರಣಬೀರ್ ಕಪೂರ್ ನಡವಳಿಕೆಯಿಂದ ಹಲವಾರು ಮಂದಿ ಆಘಾತಗೊಂಡು ಅದನ್ನು ಟೀಕಿಸಿದ್ದರೆ, ಮತ್ತೆ ಕೆಲವರು ಅದನ್ನು ಪ್ರಚಾರಕ್ಕಾಗಿ ನಡೆಸಿರುವ ತಂತ್ರ ಎಂದು ಪ್ರತಿಪಾದಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಮೊಬೈಲ್ ತಯಾರಿಕಾ ಕಂಪನಿ ಒಪ್ಪೊ (Oppo) ಕೊನೆಗೂ ಸತ್ಯವನ್ನು ಹೊರಗೆಡವಿದ್ದು, ಅದು ತನ್ನ ಮಾರುಕಟ್ಟೆಯ ಕಾರ್ಯತಂತ್ರವಾಗಿತ್ತು ಎಂದು ಟ್ವೀಟ್ ಮಾಡಿದೆ. ಟ್ವಿಟರ್ ಮೂಲಕ ಆ ಘಟನೆಯ ವಿಡಿಯೊವನ್ನು ಒಪ್ಪೊ ಇಂಡಿಯಾ ಹಂಚಿಕೊಂಡಿದ್ದು, ಅದೇ ವಿಡಿಯೊವನ್ನು ಬಳಕೆದಾರರು ಮರು ಟ್ವೀಟ್ ಮಾಡಿದಾಗ ಮಾತ್ರ ಆ ವಿಡಿಯೊವನ್ನು ನೋಡಬಹುದಾಗಿದೆ.
ಆ ವಿಡಿಯೊದಲ್ಲಿ ರಣಬೀರ್ ಕಪೂರ್ ಆ ಯುವಕನಿಗೆ ನೂತನ ಬಿಳಿ ಬಣ್ಣದ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದು ಕಂಡು ಬರುತ್ತದೆ. ಇದಾದ ನಂತರ, ಆ ಯುವಕನು ನಗುತ್ತಿರುವುದು ಮತ್ತು ಫೋಟೊಗೆ ಭಂಗಿ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಕೊನೆಗೆ, ರಣಬೀರ್ ಕಪೂರ್ ಕೂಡಾ ಆ ಯುವಕನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದು ಕಂಡು ಬರುತ್ತದೆ. ಈ ಎಲ್ಲ ಪ್ರಕ್ರಿಯೆಯೂ ಒಪ್ಪೊ ಕಂಪನಿ ನೂತನವಾಗಿ ಬಿಡುಗಡೆ ಮಾಡಿರುವ Oppo Reno8 T5G ಸ್ಮಾರ್ಟ್‌ಫೋನ್‌ನ ಪ್ರಚಾರ ಅಭಿಯಾನದ ಭಾಗವೇ ಆಗಿದೆ.
ಆದರೆ, ಈ ಪ್ರಚಾರ ಅಭಿಯಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಲವಾರು ಮಂದಿ, ಉತ್ಪನ್ನವನ್ನು ಮಾರುಕಟ್ಟೆ ಮಾಡುವ ತಂತ್ರ ಇದಲ್ಲ ಎಂದು ಆಕ್ಷೇಪಿಸಿದ್ದಾರೆ. ಅಲ್ಲದೆ, ಈ ಪ್ರಚಾರ ಕಾರ್ಯತಂತ್ರವನ್ನು ಈವರೆಗಿನ 'ಕಳಪೆ' ಪ್ರಚಾರ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಒಡಕು ಮೂಡಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ
Why did Ranbir throw a fan's phone?
— OPPO India (@OPPOIndia) January 28, 2023
Tweet #AStepAbove to reveal an exclusive footage.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ