ಬೆಳ್ತಂಗಡಿ | ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವೀಡಿಯೊ ವೈರಲ್ ಮಾಡುವ ಬೆದರಿಕೆ: ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ
ಬೆಳ್ತಂಗಡಿ, ಜ.29: ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈಯುಕ್ತಿಕ ವೀಡಿಯೋವನ್ನು ವೈರಲ್ ಮಾಡುವುದಾಗಿ ವ್ಯಕ್ತಿಯೋರ್ವನ ಬೆದರಿಸಿದ್ದರಿಂದ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿಯ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಹರ್ಷಿತ್ ರಿಗೆ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಇವರು ಚಾಟ್ ಮಾಡುತ್ತಿದ್ದಲ್ಲದೆ ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರೆನ್ನಲಾಗಿದೆ. ಈ ನಡುವೆ ಅಪರಿಚಿತ ತನ್ನ ಬಳಿ ನಿನ್ನ ವೈಯುಕ್ತಿಕ ವೀಡಿಯೋ ಇದೆ, ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಭಯಗೊಂಡು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯವರು ಇದನ್ನು ಗಮನಿಸಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.