varthabharthi


ರಾಷ್ಟ್ರೀಯ

ಒಡಿಶಾ ಆರೋಗ್ಯ ಮಂತ್ರಿ ನಬಾ ದಾಸ್ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಗುಂಡೇಟು; ಗಂಭೀರ ಗಾಯ

ವಾರ್ತಾ ಭಾರತಿ : 29 Jan, 2023

Naba Das, Photo:twitter

ಭುವನೇಶ್ವರ:  ಒಡಿಶಾದ ಆರೋಗ್ಯ   ಹಾಗೂ ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಅವರ ಮೇಲೆ ರವಿವಾರ  ಜಾರ್ಸುಗುಡಾ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚೌಕ್ ಬಳಿ ಸಹಾಯಕ ಪೊಲೀಸ್ ಉಪನಿರೀಕ್ಷಕರೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ದಾಸ್ ಮೇಲೆ ಗುಂಡು ಹಾರಿಸಲಾಗಿದ್ದು ಗುಂಡು  ಅವರ ಎದೆಗೆ  ತಗುಲಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಂಧಿ ಚೌಕದಲ್ಲಿ ಸಚಿವರು ತಮ್ಮ ಕಾರಿನಿಂದ ಹೊರಬರುತ್ತಿದ್ದಂತೆಯೇ ಪೊಲೀಸ್ ಅಧಿಕಾರಿ  ಕನಿಷ್ಠ ನಾಲ್ಕರಿಂದ ಐದು ಗುಂಡುಗಳನ್ನು ಹಾರಿಸಿದರು  ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದಾಳಿಯ ಹಿಂದಿನ ಉದ್ದೇಶಗಳು ಇನ್ನೂ ಸ್ಪಷ್ಟವಾಗಿಲ್ಲ.

ರಕ್ತಸಿಕ್ತ ದಾಸ್ ಅವರನ್ನು ಕಾರಿನಲ್ಲಿ  ಕೊಂಡೊಯ್ಯುತ್ತಿರುವ ದೃಶ್ಯಗಳು ಕಂಡುಬಂದಿವೆ.

ದಾಸ್ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಪೊಲೀಸ್ ಸಮವಸ್ತ್ರದಲ್ಲಿದ್ದು, ಆತನನ್ನು ಎಎಸ್‌ಐ ಗೋಪಾಲ್ ದಾಸ್ ಎಂದು ಗುರುತಿಸಲಾಗಿದೆ.

ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಗೋಪಾಲ್ ದಾಸ್ ಸಚಿವರ ಮೇಲೆ ಗುಂಡು ಹಾರಿಸಿದ್ದಾರೆ. ಸಚಿವರು ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಬ್ರಜರಾಜನಗರ ಎಸ್‌ಡಿಪಿಒ ಗುಪ್ತೇಶ್ವರ ಭೋಯ್ ಪಿಟಿಐಗೆ ತಿಳಿಸಿದ್ದಾರೆ.

ಭೋಯ್ ಪ್ರಕಾರ, ಸಚಿವರ ಮೇಲೆ ಎಎಸ್‌ಐ ಗುಂಡು ಹಾರಿಸಲು ನಿಖರವಾದ ಕಾರಣ ಸ್ಪಷ್ಟವಾಗಿಲ್ಲ. ಎಎಸ್‌ಐ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)