varthabharthi


ರಾಷ್ಟ್ರೀಯ

ವಿಚಾರಣೆ ವೇಳೆ ಜೀನ್ಸ್‌ ಧರಿಸಿದ್ದಕ್ಕಾಗಿ ಹೈಕೋರ್ಟ್‌ ಆವರಣದಿಂದ ವಕೀಲನ ತೆರವು

ವಾರ್ತಾ ಭಾರತಿ : 29 Jan, 2023

Photo: Gauhati High Court official website

ಗುವಾಹಟಿ: ವಿಚಾರಣೆ ವೇಳೆ ಜೀನ್ಸ್ ಧರಿಸಿದ್ದಕ್ಕಾಗಿ ವಕೀಲರನ್ನು ಗುವಾಹಟಿ ಹೈಕೋರ್ಟ್ ಆವರಣದಿಂದ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ. ಜೀನ್ಸ್ ಧರಿಸಿ ವಿಚಾರಣೆಗೆ ಹಾಜರಾಗಿದ್ದಕ್ಕಾಗಿ ನಿಯಮ ಪ್ರಕಾರ ವಕೀಲರನ್ನು ಶುಕ್ರವಾರ ಗುವಾಹಟಿ ಹೈಕೋರ್ಟ್ ಆವರಣದಿಂದ ತೆರವು ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ವಕೀಲರ ಕಾಯಿದೆ, 1961 ರ ಅಡಿಯಲ್ಲಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಾಗ ಅಥವಾ ಸಲ್ಲಿಕೆಗಳನ್ನು ಮಾಡುವಾಗ ಎಲ್ಲಾ ಅಭ್ಯಾಸಿ ವಕೀಲರು ಬಿಳಿ ಅಂಗಿಯ ಮೇಲೆ ಕಪ್ಪು ಕೋಟ್ ಅಥವಾ ನಿಲುವಂಗಿಯನ್ನು ಧರಿಸಬೇಕು ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಅವರು ವಿಚಾರಣೆಯನ್ನು ಮುಂದೂಡಿದರು ಮತ್ತು ಜೀನ್ಸ್ ಧರಿಸಿದ್ದಕ್ಕಾಗಿ ವಕೀಲ ಬಿಕೆ ಮಹಾಜನ್ ಅವರನ್ನು ನ್ಯಾಯಾಲಯದಿಂದ ತೆಗೆದುಹಾಕುವಂತೆ ಪೊಲೀಸರೊಂದಿಗೆ ಹೇಳಿದರು.

"ಅರ್ಜಿದಾರರ ಪರ ವಕೀಲರಾದ ಬಿ.ಕೆ. ಮಹಾಜನ್ ಅವರು ಜೀನ್ಸ್ ಪ್ಯಾಂಟ್‌ ಧರಿಸಿರುವ ಕಾರಣ ಪ್ರಕರಣವನ್ನು ಮುಂದೂಡಲಾಗಿದೆ" ಎಂದು ನ್ಯಾಯಾಲಯ ಆದೇಶಿಸಿದೆ. ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ಬಾರ್ ಕೌನ್ಸಿಲ್ ಜೊತೆಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ವಿಷಯವನ್ನು ಇರಿಸಬೇಕು ಎಂದು ಸುರಾನಾ ನಿರ್ದೇಶಿಸಿದ್ದಾರೆ.

ಕಳೆದ ವರ್ಷ, ಬೇಸಿಗೆ ಕಾಲದಲ್ಲಿ ವಕೀಲರಿಗೆ ಡ್ರೆಸ್ ಕೋಡ್ ಸಡಿಲಿಕೆ ಕೋರಿ ಸಲ್ಲಿಸಲಾದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು ಎಂದು ಲೈವ್ ಲಾ ವರದಿ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸಂಪರ್ಕಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)