ರಾಷ್ಟ್ರೀಯ
ಶೇರು ಮಾರಾಟ ದರ, ದಿನಾಂಕಗಳಲ್ಲಿ ಬದಲಾವಣೆ ಇಲ್ಲ
ಹಿಂಡೆನ್‌ಬರ್ಗ್ ವರದಿಯ ಹೊರತಾಗಿಯೂ ಎಫ್‌ಪಿಓ ಶೇರುಗಳ ಬಿಡುಗಡೆಗೆ ಅದಾನಿ ನಿರ್ಧಾರ

PHOTO ; PTI
ಹೊಸದಿಲ್ಲಿ,ಜ.29: ಲೆಕ್ಕಪತ್ರ ವಂಚನೆ ಹಾಗೂ ಶೇರು ಬೆಲೆಗ ಹೆಚ್ಚಳದಲ್ಲಿ ಅಕ್ರಮವೆಸಗಿರುವುದಾಗಿ ತನ್ನ ವಿರುದ್ಧ ಅಮೆರಿಕದ ವಿತ್ತೀಯ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್(Hindenburg) ಮಾಡಿರುವ ಆರೋಪಗಳ ಹೊರತಾಗಿಯೂ, ಆದಾನಿ ಉದ್ಯಮ ಸಮೂಹ ಎಫ್‌ಪಿಓ (Follow on Public Offer) ಶೇರುಗಳ ಮಾರಾಟದ ಮೂಲಕ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸುವ ತನ್ನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಅಲ್ಲದೆ ಕಂಪೆನಿಯ ಎಫ್‌ಪಿಓ(FPO) ಶೇರುಗಳ ನಿಗದಿತ ದರ ಹಾಗೂ ಬಿಡುಗಡೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲವೆಂಬುದಾಗಿಯೂ ಅದು ತಿಳಿಸಿದೆ.
‘‘ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಎಫ್‌ಪಿಓ ಶೇರುಗಳ ಬಿಡುಗಡೆ ನಿಗದಿಯಂತೆ ನಡೆಯಲಿದೆ ಹಾಗೂ ಅವುಗಳ ವೌಲ್ಯ ಕೂಡಾ ಈ ಹಿಂದೆ ಘೋಷಿಸಿದಷ್ಟೇ ಇರಲಿದೆ. ಶೇರುಗಳ ನಿಗದಿತ ದರ ಹಾಗೂ ಬಿಡುಗಡೆಯ ದಿನಾಂಕಲ್ಲಿ ಯಾವುದೇ ಬದಲಾವಣೆ ಇಲ್ಲ’’ ಎಂದು ಉದ್ಯಮ ಸಮೂಹದ ವಕ್ತಾರರು ತಿಳಿಸಿದ್ದಾರೆ.ಅದಾನಿ ಸಮೂಹದ ಎಫ್‌ಪಿಓ ಶೇರುಗಳ ಮಾರಾಟ ಶುಕ್ರವಾರ ಆರಂಭಗೊಂಡಿದ್ದು, ಈವರೆಗೆ ಬಿಡುಗಡೆಗೊಳಿಸಲಾದ 4.55 ಕೋಟಿ ಶೇರುಗಳ ಪೈಕಿ 4.7 ಲಕ್ಷ ಶೇರುಗಳ ಮಾತ್ರವೇ ಖರೀದಿಯಾಗಿದೆ ಎಂದು ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಲಭ್ಯವಾದ ಮಾಹಿತಿಗಳಿಂದ ತಿಳಿದುಬಂದಿದೆ.
ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ಬಳಿಕ, ಅದಾನಿ ಎಂಟರ್‌ಪ್ರೈಸಸ್‌ನ ಶೇರುಗಳ ವೌಲ್ಯವು ಕೊಡುಗೆ ದರ (Offer price)ಕ್ಕಿಂತ ಶೇ.20ರಷ್ಟು ಕುಸಿತವನ್ನು ಕಂಡಿವೆ. ಅದಾನಿ ಸಮೂಹವು ದಶಕಗಳಿಂದ ಶೇರು ವ್ಯವಹಾರಗಳಲ್ಲಿ ಅಕ್ರಮವನ್ನು ನಡೆಸಿದೆ ಹಾಗೂ ಲೆಕ್ಕಪತ್ರದಲ್ಲಿ ವಂಚನೆ ಎಸಗಿದೆಯೆಂದು ಹಿಂಡೆನ್‌ಬರ್ಗ್ ವಿತ್ತೀಯ ಸಂಶೋಧನಾ ಸಂಸ್ಥೆ ಆರೋಪಿಸಿದ ಬಳಿಕ ಆದಾನಿ ಉದ್ಯಮಸಮೂಹಕ್ಕೆ ಸೇರಿದ ಏಳು ಕಂಪೆನಿಗಳ ಶೇರುಗಳು ವೌಲ್ಯವು ಒಂದೇ ಸಮನೆ ಕುಸಿಯತೊಡಗಿವೆ.
ಈ ಮಧ್ಯೆ ಅದಾನಿ ಸಮೂಹವು ತನ್ನ ವಿರುದ್ಧ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದೆ. ಹಿಂಡೆನ್‌ಬರ್ಗ್ ಕಂಪೆನಿಯ ಆರೋಪಗಳು ದುಷ್ಟತನ ಹಾಗೂ ಕುಚೇಷ್ಠೆಯಿಂದ ಕೂಡಿದೆಯೆಂದು ಅದು ಆರೋಪಿಸಿದೆ. ಎಫ್‌ಪಿಓ ಮೂಲಕ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ತಾನು ಮುಂದಾಗಿರುವ ಸಂದರ್ಭದಲ್ಲಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳು ದುರುದ್ದೇಶಪೂರಿತವಾಗಿವೆೆ ಎಂದು ಅದಾನಿ ಎಂಟರ್‌ಪ್ರೈಸಸ್ ಹೇಳಿದೆ.ಅದಾನಿ ಎಂಟರ್‌ಪ್ರೈಸಸ್ ತನ್ನ ಶೇರುಗಳನ್ನು 3112ರಿಂದ 3276 ರೂ. ಬೆಲೆಗೆ ಮಾರಾಟ ಮಾಡುತ್ತಿದೆ. ಶುಕ್ರವಾರದಂದು ಮುಂಬೈ ಶೇರು ಮಾರುಕಟ್ಟೆಯಲ್ಲಿ ದಿನದ ವಹಿವಾಟಿನ ಅಂತ್ಯದ ವೇಳೆಗೆ ಸಂಸ್ತೆಯ ಶೇರು ದರಗಳು 2,762.15 ರೂ. ಆಗಿತ್ತು.
‘‘ನಮ್ಮ ಎಫ್‌ಪಿಓದಲ್ಲಿ ಬ್ಯಾಂಕರ್‌ಗಳು ಹಾಗೂ ಹೂಡಿಕೆದಾರರು ಸೇರಿದಂತೆ ನಮ್ಮ ಎಲ್ಲಾ ಭಾಗಿದಾರರಿಗೆ ಸಂಪೂರ್ಣ ನಂಬಿಕೆಯಿದೆ. ಎಫ್‌ಪಿಓನ ಯಶಸ್ಸಿನ ಬಗ್ಗೆ ನಮಗೆ ಅಪಾರ ನಂಬಿಕೆಯಿದೆಯೆಂದು’’ ಸಂಸ್ಥೆಯ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಓ ಶೇರುಗಳ ಕೊಡುಗೆ ಜನವರಿ 31ಕ್ಕೆ ಕೊನೆಗೊಳ್ಳಲಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ