ಅಂತಾರಾಷ್ಟ್ರೀಯ
ಇರಾನ್ ನಲ್ಲಿ ಭೂಕಂಪಕ್ಕೆ 3 ಮಂದಿ ಬಲಿ; 800 ಮಂದಿಗೆ ಗಾಯ

ಟೆಹ್ರಾನ್, ಜ.29: ವಾಯವ್ಯ ಇರಾನ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿದ್ದು 800ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಇರ್ನಾ ಸುದ್ಧಿಸಂಸ್ಥೆ ವರದಿ ಮಾಡಿದೆ.
ಟರ್ಕಿಯೊಂದಿಗಿನ ಗಡಿಪ್ರದೇಶ ಪಶ್ಚಿಮ ಅಝರ್ಬೈಜಾನ್ ಪ್ರಾಂತದ ಬಳಿಯ ಖೋಯ್ ನಗರದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು ಹಲವು ಕಟ್ಟಡಗಳು ಧರೆಗುರುಳಿವೆ. ರಸ್ತೆ ಬ ದಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದ ಅವಶೇಷ ಮತ್ತು ರಸ್ತೆ ಬದಿಯ ಮರಗಳು ಉರುಳಿಬಿದ್ದು ಜಖಂಗೊಂಡಿವೆ. ಇದ್ದಕ್ಕಿದ್ದಂತೆಯೇ ಭೂಮಿ ಕಂಪಿಸಿದಾಗ ಭಯಭೀತಗೊಂಡ ಜನ ಮನೆಯೊಳಗಿಂದ ಹೊರಗೆ ಧಾವಿಸಿದರು. ಭೂಕಂಪದ ಬೆನ್ನಿಗೇ 20ಕ್ಕೂ ಅಧಿಕ ಪಶ್ಚಾತ್ ಕಂಪನಗಳು ಸಂಭವಿಸಿದ್ದು ನೂರಾರು ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಇದುವರೆಗಿನ ಮಾಹಿತಿಯಂತೆ ಕನಿಷ್ಟ 3 ಮಂದಿ ಮೃತಪಟ್ಟಿದ್ದು 816 ಮಂದಿ ಗಾಯಗೊಂಡಿದ್ದಾರೆ. 70 ಗ್ರಾಮಗಳಲ್ಲಿನ ಕಟ್ಟಡಕ್ಕೆ ಹಾನಿಯಾಗಿದೆ. ಹಲವು ಮನೆಗಳು ಭಾಗಶಃ ಕುಸಿದಿವೆ ಎಂದು ಪಶ್ಚಿಮ ಅಝರ್ಬೈಜಾನ್ನ ಗವರ್ನರ್ ಮುಹಮ್ಮದ್ ಸದೇಗ್ ಹೇಳಿದ್ದಾರೆ.
ಭೂಕಂಪದಿಂದ ತೀವ್ರ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿರುವ ಇರಾನ್ನ ಆಂತರಿಕ ಸಚಿವ ಅಹ್ಮದ್ ವಹೀದಿ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನೀರು, ವಿದ್ಯುತ್ ಮತ್ತು ಅನಿಲ ಸಂಪರ್ಕಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ