varthabharthi


ಪ್ರಚಲಿತ

ಪರಸ್ಪರ ಪ್ರೀತಿಸುವ ಬೆಳಕು ಬಂದೇ ಬರುತ್ತದೆ

ವಾರ್ತಾ ಭಾರತಿ : 6 Feb, 2023
ಸನತ್ ಕುಮಾರ್ ಬೆಳಗಲಿ

ಯಾಕೋ ನಮ್ಮ ಜನರಿಗೆ ದೈನಂದಿನ ಬದುಕಿನ ಉನ್ನತಿಗಿಂತ ಧರ್ಮಾಂಧತೆ ಮುಖ್ಯವಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗಾವಕಾಶ ಸೃಷ್ಟಿ, ಮೂಲಭೂತ ಸೌಕರ್ಯಗಳ ಸುಧಾರಣೆ, ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿ, ಈ ನೆಲದ ನಿಜ ಬೆಳಕಿನ ಕಿರಣಗಳಾದ ಬುದ್ಧ, ಬಸವಣ್ಣ, ಮಹಾವೀರ, ಬಾಬಾಸಾಹೇಬರು, ಗಾಂಧೀಜಿ, ಸುಭಾಷ್, ಭಗತ್‌ಸಿಂಗ್, ವಿವೇಕಾನಂದರಿಗಿಂಥ ಧರ್ಮ ಮುಖ್ಯ ಎಂದು ನಿತ್ಯ ಮೆದುಳಿಗೆ ತುಂಬುತ್ತಿರುವ ಜನಾಂಗ ದ್ವೇಷದ ವಿಷವೇ ಇಷ್ಟವಾಗುತ್ತಿದೆ.ಮೊನ್ನೆ ಹೀಗೆ ಒಂದು ಕಡೆ ಕೂತಾಗ ಪಕ್ಕದಲ್ಲಿ ನಾಲ್ಕಾರು ಯುವ ಜನರು ಮೊಬೈಲ್‌ನಲ್ಲಿ ಇನ್ನೂ ಇಪ್ಪತ್ತೈದು ತುಂಬದ ಯುವತಿಯ ವೀಡಿಯೊ ಭಾಷಣವನ್ನು ಕೇಳಿ ಪರಸ್ಪರ ಖುಷಿ ಪಡುತ್ತಿದ್ದರು. ಅತ್ಯಂತ ಪ್ರಚೋದನಾಕಾರಿಯಾಗಿ ಕಿರುಚುತ್ತಿದ್ದ ಆ ಹುಡುಗಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಅತ್ಯಂತ ಪ್ರಚೋದನೆ ರೀತಿ ಮಾತನಾಡುತ್ತಿದ್ದಳು. ಆಕೆಯ ಭಾಷಣ ಕೇಳಿ ಬಾಬರಿ ಮಸೀದಿಯನ್ನು ನೆಲಸಮಗೊಳಿಸುವಾಗ ಮತ್ತು ಅದಕ್ಕಿಂತ ಮುನ್ನ ಉಮಾ ಭಾರತಿ, ಸಾಧ್ವಿ ರಿತಾಂಬರ ಕಿರುಚಾಡುತ್ತಿದ್ದ ಭಾಷಣಗಳು ನೆನಪಿಗೆ ಬಂದವು. ಆಗ ಒದರಾಡಿದವರೆಲ್ಲ ಈಗ ಮುದುಕಿಯರಾಗುತ್ತಿದ್ದಾರೆ.

ಆದರೆ, ಅವರನ್ನು ತರಬೇತಿ ನೀಡಿ ತಯಾರು ಮಾಡಿದ ಸಂಘಟನೆ ಅದೇ ಮಾದರಿಯ ಸಾವಿರಾರು ಯುವತಿಯರನ್ನು ತಯಾರು ಮಾಡಿ ಕೂಗಾಡಿಸುತ್ತಿದೆ. ಉದಾಹರಣೆಗೆ, ಚೈತ್ರಾ ಕುಂದಾಪುರ ಅವರಂಥ ಅನೇಕರಿದ್ದಾರೆ. ಭಾರತದ ಬೇರೆ ಕಡೆಗಳಂತೆ ಕರ್ನಾಟಕದ ಹಲವೆಡೆ ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ರಥೋತ್ಸವ ಮುಂತಾದ ಕಡೆ ಬಂದು ಪ್ರಚೋದಕ ಮಾತುಗಳನ್ನು ಆಡುವ ಇವರ ಭಾಷಣವನ್ನು ಇಂದಿನ ಯುವಜನರು ಎಂಜಾಯ್ ಮಾಡುತ್ತಾರೆ. ಈ ಭಾಷಣಗಳ ಆಧಾರದಲ್ಲಿ ತಮ್ಮ ರಾಜಕೀಯ ಅಭಿಪ್ರಾಯ ರೂಪಿಸಿಕೊಳ್ಳುತ್ತಿದ್ದಾರೆ.

ಇಂಥ ಅನೇಕ ಯುವಜನರಿಗೆ ಒಳ್ಳೆಯ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಅಭ್ಯಾಸವಿಲ್ಲ. ಅದಾನಿ ಎಂಬಾತ ಜೀವ ವಿಮಾ ಸಂಸ್ಥೆಗೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಪಂಗನಾಮ ಹಾಕಿದ ಬಗ್ಗೆ ಈ ಹುಡುಗರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿದ್ದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದ ಅವರು ಮುಸಲ್ಮಾನರನ್ನು ಬೈಯುವ ಭಾಷಣಗಳನ್ನು ಕೇಳಿ ಮಜಾ ಮಾಡುತ್ತಾರೆ. ನಾವು ಏನೋ ಫೇಸ್‌ಬುಕ್‌ನಲ್ಲಿ ಬರೆದು ಹಾಕಿದರೂ ಅದನ್ನು ಓದುವುದಿಲ್ಲ. ನಾವು ಬರೆದುದಕ್ಕಿಂತ ನೂರು ಪಟ್ಟು ಬಂದು ಬೀಳುವ ವ್ಯಾಟ್ಸ್‌ಆ್ಯಪ್ ಯುನಿವರ್ಸಿಟಿಯ ಸುಳ್ಳಿನ ಕತೆಗಳನ್ನು ಮಾತ್ರ ಓದುವಂತೆ ಇವರ ಮೆದುಳನ್ನು ತೊಳೆದು ಇಡಲಾಗಿದೆ. ಇವರಲ್ಲಿ ಬಹುತೇಕರು ಅರೆ ಬರೆ ಕಲಿತ ದ್ವಿಚಕ್ರ ವಾಹನಗಳಲ್ಲಿ ಅಲೆದಾಡುವ ಪಡ್ಡೆಗಳು. ತಮ್ಮ ವಾಹನದ ಇಂಧನದ ಟ್ಯಾಂಕ್ ತುಂಬಿಸಲು ಪೋಷಕರಿಂದ ಹಣ ಕೀಳುವ ಇವರೊಂದಿಗೆ ಸಂವಾದ, ಚರ್ಚೆ ಸಾಧ್ಯವಿಲ್ಲ. ಮಾತನಾಡಲು, ಮನವರಿಕೆಗೆ ಪ್ರಯತ್ನಿಸಿದರೆ, ನಾವೇ ಹುಚ್ಚರಾಗಿ ನೆಮ್ಮದಿ ಕಳೆದುಕೊಳ್ಳುತ್ತೇವೆ.

ಸಾಮಾನ್ಯವಾಗಿ ಕೋಮುವಾದಿ ಸಂಘಟನೆಗಳು ಅತ್ಯಂತ ಲೆಕ್ಕಾಚಾರದಿಂದ ಚುನಾವಣೆ ಬಂದಾಗ ಸಂಘಟಿಸುವ ಸಮಾಜೋತ್ಸವ, ವಿವೇಕಾನಂದ ಜಯಂತಿ, ಛತ್ರಪತಿ ಶಿವಾಜಿ ಪಟ್ಟಾಭಿಷೇಕ ಮಹೋತ್ಸವ, ರಾಣಾ ಪ್ರತಾಪ್ ಜಯಂತಿಗಳಲ್ಲಿ ಹಣೆಗೆ ಕುಂಕುಮ ಬಳಿದುಕೊಂಡು, ತಲೆಗೆ ಕೇಸರಿ ಬಟ್ಟೆ ಸುತ್ತಿಕೊಂಡ ಇವರಿಗೆ ವಿವೇಕಾನಂದ, ಶಿವಾಜಿ, ಭಗತ್‌ಸಿಂಗ್ ಅವರ ಇತಿಹಾಸ ಗೊತ್ತಿಲ್ಲ. ಅವರ ಪುಸ್ತಕಗಳನ್ನು ಓದಿಲ್ಲ. ಅವರ ಬಗ್ಗೆ ಚೈತ್ರಾ ಕುಂದಾಪುರರಂಥವರು, ಜಗದೀಶ್ ಕಾರಂತರಂಥವರು ಮಾತನಾಡುವ ಪ್ರಚೋದನಾಕಾರಿ ಮಾತುಗಳಿಂದ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ. ಹಾಗಲ್ಲ ಹೀಗೆ ಎಂದು ತಿಳಿದವರು ಹೇಳಲು ಹೊರಟರೆ, ಸಾಬರಿಗೆ ಹುಟ್ಟಿದವರು ಎಂದು ಬೈಯಿಸಿಕೊಳ್ಳಬೇಕಾಗುತ್ತದೆ. ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಉತ್ತರ ಕರ್ನಾಟಕದ ಕೆಲ ವೀರಶೈವ ಮಠಾಧೀಶರೂ ಭಾಷಣಕ್ಕೆ ಕರೆಸುತ್ತಾರೆ. ಅತ್ಯಂತ ಪ್ರಚೋದನಾಕಾರಿ ಮಾತುಗಳನ್ನು ಆಡುವ ಟಿವಿ ಆ್ಯಂಕರ್‌ಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬರುತ್ತಾರೆ.

ಭಾರತವೆಂದರೆ ಏನು? ದೇಶವೆಂದರೆ ಅದರ ಸ್ವರೂಪವೇನು? ಉಳಿದ ಯುರೋಪಿನ ರಾಷ್ಟ್ರಗಳಿಗೂ ಭಾರತಕ್ಕೂ ಇರುವ ವ್ಯತ್ಯಾಸ ವೇನು? ಇದಾವುದರ ಬಗ್ಗೆ ಅರಿವಿಲ್ಲದ, ಪ್ರಾಥಮಿಕ ತಿಳಿವಳಿಕೆ ಇಲ್ಲದ ಯುವಜನರಿಗೆ ಸರಿಯಾದ ಶಿಕ್ಷಣ ಸಿಗಲಿಲ್ಲ. ಅವರ ಮೆದುಳಿಗೆ ಯಾರು ಏನು ಹಾಕುತ್ತಾರೋ ಅದು ಉಳಿದುಬಿಡುತ್ತದೆ. ಓದು ಮತ್ತು ಸಂಪರ್ಕದಿಂದ ಆ ಅರೆ ತಿಳಿವಳಿಕೆ ಲೋಕದಿಂದ ಹೊರಗೆ ಬರಬೇಕು. ಆದರೆ, ಅದು ಆಗುತ್ತಿಲ್ಲ. ಪಶ್ಚಿಮದ ಅನೇಕ ಪುಟ್ಟ ದೇಶಗಳಲ್ಲಿ ಜನಸಂಖ್ಯೆ ಒಂದೆರಡು ಕೋಟಿಗಿಂತ ಜಾಸ್ತಿ ಇರುವುದಿಲ್ಲ. ಅಲ್ಲಿ ಒಂದೇ ಧರ್ಮ, ಮತ್ತು ಸಮುದಾಯಕ್ಕೆ ಸೇರಿದ ದೇಶಗಳು ಜಾಸ್ತಿ. ಭಾಷೆ ಕೂಡ ಒಂದೇ ಆಗಿರುತ್ತದೆ. ಅಂಥ ದೇಶಗಳನ್ನು ಮಾದರಿಯಾಗಿ ಇಟ್ಟುಕೊಂಡು ಬಹುತ್ವ ಭಾರತವನ್ನು ಒಂದೇ ಧರ್ಮ, ಸಮುದಾಯದ ದೇಶವನ್ನಾಗಿ ಮಾಡಲು ಹೊರಟವರು ಜರ್ಮನಿ, ಇಟಲಿಗಳಿಂದ ತಂದ ಸಿದ್ಧಾಂತಗಳಿಗೆ ಇಲ್ಲಿ ತಮ್ಮ ಬಣ್ಣ ಬಳಿದು ಹಿಂದುತ್ವ ಎಂದು ಕರೆದರು.

ಹೀಗೆ ಕರೆದವರೆ ಭಾರತದ ಇಂದಿನ ದುಸ್ಥಿತಿಗೆ ಕಾರಣ. ಇವರೊಂದಿಗೆ ಈ ನೆಲದ ಸಂಪತ್ತನ್ನು ದೋಚಲು ಬಂದಿರುವ ದೇಶ, ವಿದೇಶಗಳ ಕಾರ್ಪೊರೇಟ್ ಕಂಪೆನಿಗಳೂ ಸೇರಿವೆ.
ಇಂಥವರ ಕೈಯಲ್ಲಿ ಭಾರತ ಎಂಬ ಬಹುತ್ವದ ಭೂ ಪ್ರದೇಶ ಸಿಕ್ಕು ವಿಲಿ ವಿಲಿ ಒದ್ದಾಡುತ್ತಿದೆ. ಭಾರತದಂಥ ದೇಶ ಜಗತ್ತಿನಲ್ಲಿ ಇನ್ನೊಂದಿಲ್ಲ. ಇಷ್ಟೊಂದು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಆಚಾರ, ವಿಚಾರ, ಬುಡಕಟ್ಟುಗಳು ಇವೆಲ್ಲ ಸೇರಿ ಭಾರತವಾಗಿದೆ. ವೈವಿಧ್ಯಮಯವಾದ ಈ ಭಾರತವನ್ನು ಒಂದೇ ಮತದ, ಸಮು ದಾಯದ ಗುಲಾಮಗಿರಿಯ ಗೂಟಕ್ಕೆ ಕಟ್ಟಿ ಹಾಕಲು ಹೊರಟವರು ಯುವಜನರನ್ನು ದಾರಿ ತಪ್ಪಿಸಿ ಕಾರ್ಗತ್ತಲನ್ನು ನಂಬಿಸಲು ಹೊರಟಿದ್ದಾರೆ ಇದರ ಪರಿಣಾಮವಾಗಿ ವಿದ್ಯಾವಂತ ಯುವಜನರು ಕೂಡ ಆಲೋಚನಾ ಶಕ್ತಿ ಕಳೆದುಕೊಂಡಿದ್ದಾರೆ. ಅಂತಲೇ ಸಾರ್ವಜನಿಕ ಒಡೆತನದ ಜೀವ ವಿಮೆಯ ಸಾವಿರಾರು ಕೋಟಿ ರೂಪಾಯಿ ಅದಾನಿಯ ಮುಳುಗುವ ಹಡಗನ್ನು ಸೇರಿದರೂ ಅದರ ಬಗ್ಗೆ ಮಾತಾಡದ ಅನೇಕರು ಬಾಯಿ ಬಿಟ್ಟರೆ ಮೋದಿ ಸರಕಾರವನ್ನು ಟೀಕಿಸುವವರನ್ನೆಲ್ಲ ಪಾಕಿಸ್ತಾನಿ ಎಜೆಂಟರೆಂದು ಹಿಯಾಳಿಸುತ್ತಾರೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ.

ಉದ್ಯಮಪತಿಗಳೆಲ್ಲ ಕೆಟ್ಟವರು, ಲೂಟಿಕೋರರು ಎಂದಲ್ಲ. ಭಾರತ ಸ್ವಾತಂತ್ರ ಪಡೆದ ಹೊಸತರಲ್ಲಿ ಟಾಟಾ, ಬಿರ್ಲಾರಂಥ ಉದ್ಯಮಿಗಳು ಉಕ್ಕು ಕಾರ್ಖಾನೆ, ಜವಳಿ ಗಿರಣಿ, ಮುಂತಾದ ಉದ್ಯಮಗಳನ್ನು ಆರಂಭಿಸಿ ಲಕ್ಷಾಂತರ ಯುವ ಜನರಿಗೆ ಉದ್ಯೋಗಗಳನ್ನು ನೀಡಿದರು. ಅವರನ್ನೂ ನಾವು ಟೀಕಿಸುತ್ತಿದ್ದೆವು. ಖಾಸಗಿ ಆಸ್ತಿಯ ಒಡೆತನವಿಲ್ಲದ ಸಮಾಜವನ್ನು ನಿರ್ಮಿಸಲು ಹೊರಟ ಆ ದಿನಗಳಲ್ಲಿ ನಮ್ಮ ಟೀಕೆ ಸಹಜವಾಗಿತ್ತು. ಈಗಿನ ಪರಿಸ್ಥಿತಿ ಬೇರೆಯಾಗಿದೆ. ಈಗ ಜಗತ್ತಿನ ಬಹುದೊಡ್ಡ ಕುಬೇರರೆಂದು ಮೆರೆಯುತ್ತಿರುವವರು ಟಾಟಾಗಳಂತೆ ಎಂಬತ್ತು, ತೊಂಬತ್ತು ವರ್ಷಗಳಲ್ಲಿ ಬೆಳೆದು ಉದ್ಯಮ ಸಂಸ್ಥೆಗಳನ್ನು ಕಟ್ಟಿದವರಲ್ಲ. ಇವರು ಉದ್ಯಮಗಳನ್ನು ಸ್ಥಾಪಿಸಿದ್ದು ಟಾಟಾಗಳಂತೆ ವ್ಯವಹಾರ ಮಾಡಿ ಅದರ ಲಾಭಾಂಶ ವನ್ನು ಹೂಡಿಕೆದಾರರಿಗೆ, ಶೇರುದಾರರಿಗೆ ಹಂಚಲು ಅಲ್ಲ. ಇವರು ಎಲ್‌ಐಸಿ, ಎಸ್‌ಬಿಐನಂತಹ ಸಾರ್ವಜನಿಕ ಒಡೆತನದ ಸಂಸ್ಥೆಗಳನ್ನು ದೋಚಿ ಜಗತ್ತಿನ ಅತಿ ದೊಡ್ಡ ಸಿರಿವಂತರೆಂದು ಮೆರೆದು ಕಂಪೆನಿಯ ಬಂಡವಾಳವನ್ನೇ ಬೇರೆ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿ ನಂತರ ತಮ್ಮ ಉದ್ಯಮಗಳು ನಷ್ಟದಲ್ಲಿವೆ ಎಂದು ತೋರಿಸಿ ವಿದೇಶಕ್ಕೆ ಹಾರಿ ಹೋಗಲು ತುದಿಗಾಲಲ್ಲಿ ನಿಂತವರು.

ಇದನ್ನೇ ಕ್ರೊನಿ ಕ್ಯಾಪಿಟಲಿಸಂ ಎನ್ನುವುದು. ಈ ದಗಾಕೋರರು ಪ್ರಭುತ್ವದ ಸೂತ್ರ ಹಿಡಿದವರನ್ನು ಮೊದಲೇ ತಮ್ಮ ಬುಟ್ಟಿಗೆ ಹಾಕಿ ಕೊಂಡಿರುತ್ತಾರೆ. ಇವರ ಜೇಬು ಸೇರಿದ ಪ್ರಭುತ್ವದ ಸೂತ್ರದಾರರು ಈ ಬಾನಗಡಿಯಲ್ಲಿ ಬಯಲಿಗೆ ಬರಬಾರದೆಂದು, ಧರ್ಮ, ಜಾತಿ, ರಾಮ, ಪರಶುರಾಮ, ಟಿಪ್ಪು ಎಂದೆಲ್ಲ ಬುರುಡೆ ಬಿಟ್ಟು ತರುಣರನ್ನು ದಾರಿ ತಪ್ಪಿಸುತ್ತಿರುತ್ತಾರೆ.

ಇದಾವುದರ ಬಗ್ಗೆ ಜನಸಾಮಾನ್ಯರು ಚರ್ಚೆ ಮಾಡಬಾರದು. ಪಟ್ರೋಲ್, ಡೀಸೆಲ್ ತುಟ್ಟಿಯಾದರೂ ತುಟಿ ಪಿಟಿಕ್ ಎನ್ನಬಾರದು. 2014ರಲ್ಲಿ 399 ರೂ. ಇದ್ದ ಅಡಿಗೆ ಅನಿಲ ಸಿಲಿಂಡರ್ ಬೆಲೆ 1,070 ರೂ. ಆದರೂ ಸುಮ್ಮನಿರಬೇಕು. ಬಡವರ ಮಕ್ಕಳು ಓದುವ ಸರಕಾರಿ ಶಾಲೆಗಳನ್ನು ಮುಚ್ಚಿದರೂ ಪ್ರಶ್ನಿಸಬಾರದು. ಇಂಥ ಸಮಸ್ಯೆಗಳನ್ನು ಬಿಟ್ಟು ಜನರು ಬರೀ ಲವ್ ಜಿಹಾದ್, ಬುರ್ಖಾದಂತಹ ವಿಷಯಗಳ ಬಗ್ಗೆ ಮಾತಾಡಬೇಕೆಂದು ಡಬಲ್ ಎಂಜಿನ್ ಸರಕಾರಗಳನ್ನು ನಡೆಸುವ ಪಕ್ಷದ ರಾಜ್ಯಾಧ್ಯಕ್ಷರು ಅಪ್ಪಣೆ ಕೊಡಿಸುತ್ತಿದ್ದಾರೆ.

ಈ ಮಹಾ ದರೋಡೆ ಬಯಲಿಗೆ ಬರಬಾರದೆಂದು ಜನರಿಗೆ ಇನ್ನೊಂದು ಲೋಕದ ಭ್ರಮೆಯಲ್ಲಿ ಮುಳುಗಿಸಲು ಯೋಗ ಗುರುಗಳನ್ನು, ದಗಾಕೋರ ಸದ್ಗುರುಗಳನ್ನು, ಧರ್ಮದ ನಶೆಯೇರಿಸುವ ಸಾಧ್ವಿಗಳನ್ನು, ಬದುಕುವ ಕಲೆಯನ್ನು ಕಲಿಸುವ ನಕಲಿ ಗುರುಗಳನ್ನು ಕ್ರೊನಿ ಕ್ಯಾಪಿಟಲಿಸಂ ಕಾಲದ ಪ್ರಭುತ್ವ ಸಾಕುತ್ತಿದೆ. ಈಗಂತೂ ಈ ಗುರುಗಳೇ ಮಾರುಕಟ್ಟೆಗೆ ತಮ್ಮ ಸೋಪು, ಶಾಂಪು, ಔಷಧಿಗಳನ್ನು ಬಿಡುತ್ತಾ, ತಮ್ಮ ವಸ್ತುಗಳ ಜಾಹೀರಾತಿಗೆ ತಾವೇ ರೂಪದರ್ಶಿಗಳಾಗುತ್ತಿದ್ದಾರೆ.

ಮುಂಚೆ ಸರಕಾರದಿಂದ ಅಥವಾ ಯಾರಿಂದಲೂ ಏನೇ ತೊಂದರೆಯಾದರೂ ನ್ಯಾಯಾಲಯಗಳಿಗೆ ಹೋಗುತ್ತಿದ್ದೆವು. ಅದಕ್ಕಿಂತ ಮೊದಲು ಪತ್ರಿಕೆಗಳ ಮೊರೆ ಹೋಗುತ್ತಿದ್ದೆವು. ಟಿ.ವಿ. ಸುದ್ದಿ ವಾಹಿನಿಗಳು ಬಂದು ಮಾಧ್ಯಮದ ವ್ಯಾಪ್ತಿ ವಿಸ್ತಾರವಾದ ನಂತರ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಹೆಚ್ಚು ವಿವರಿಸಬೇಕಾಗಿಲ್ಲ. ಇನ್ನು ನಮಗೆ ನ್ಯಾಯ ನೀಡುತ್ತ ಬಂದ ನ್ಯಾಯಾಲಯಗಳೇ ಈಗ ಅಸಹಾಯಕ ಸನ್ನಿವೇಶದಲ್ಲಿ ಇವೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸುಗಳನ್ನು ಕೇಂದ್ರ ಸರಕಾರ ಪರಿಗಣಿಸುತ್ತಿಲ್ಲ. ನ್ಯಾಯಾಧೀಶರ ನೇಮಕದ ಅಧಿಕಾರವೂ ತಮಗಿರಬೇಕೆಂದು ಕೇಂದ್ರ ಕಾನೂನು ಮಂತ್ರಿ ರಿಜಿಜು ಮಾತಾಡಿದ್ದು ಕೇವಲ ಅವರ ಮಾತಲ್ಲ, ಅದು ಸರಕಾರದ ಮಾತು. ರಿಜಿಜು ಕಡೆಯಿಂದ ಹೇಳಿಸಲಾಗಿದೆ. ಇದರಿಂದ ಬೇಸರಗೊಂಡ ಸುಪ್ರೀಂ ಕೋರ್ಟ್ ಹೈಕೋರ್ಟಿನ ನ್ಯಾಯಮೂರ್ತಿಗಳ ವರ್ಗಾವಣೆ ಮತ್ತು ಹೈಕೋರ್ಟಿನ ಇಬ್ಬರು ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಕೊಲಿಜಿಯಂ ಮಾಡಿರುವ ಶಿಫಾರಸುಗಳನ್ನು ಅನುಮೋದನೆ ಮಾಡದಿದ್ದಲ್ಲಿ ಆಡಳಿತಾತ್ಮಕ ಇಲ್ಲವೇ ನ್ಯಾಯಾಂಗೀಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ, ಆದರೆ ಅದು ಅಷ್ಟೊಂದು ಹಿತಕರವಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾಗಿ ಬಂದಿದೆ. ಈ ಬಗ್ಗೆ ಯಾರೊಂದಿಗಾದರೂ ಮಾತಿಗಿಳಿದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನೇ ಪಾಕಿಸ್ತಾನದ ಏಜೆಂಟರು, ಕಾಂಗ್ರೆಸ್ ಚೇಲಾಗಳು ಎಂದು ಟೀಕಿಸುವ ಮಟ್ಟಿಗೆ ವ್ಯಕ್ತಿ ಆರಾಧನೆ ಅತಿರೇಕಕ್ಕೆ ಹೋಗಿದೆ. ಇದಕ್ಕಿಂತ ದುರಂತ ಇನ್ಯಾವುದಿದೆ.

ಸುಪ್ರೀಂ ಕೋರ್ಟ್ ಬಹಿರಂಗವಾಗಿ ಎಚ್ಚರಿಕೆ ನೀಡಿದ ನಂತರ ಕೊಲಿಜಿಯಂ ಶಿಫಾರಸಿನಂತೆ ಐವರು ನ್ಯಾಯಾಧೀಶರನ್ನು ಸರಕಾರ ನೇಮಕ ಮಾಡಿದೆ. ಆದರೂ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸುವ ಕುತಂತ್ರವನ್ನು ಕೈ ಬಿಟ್ಟಿಲ್ಲ. ಕಿರಣ್ ರಿಜಿಜು ಅಪಸ್ವರ ನಿಂತಿಲ್ಲ. ರಾಜಕೀಯವಾಗಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ.

ಯಾಕೋ ನಮ್ಮ ಜನರಿಗೆ ದೈನಂದಿನ ಬದುಕಿನ ಉನ್ನತಿಗಿಂತ ಧರ್ಮಾಂಧತೆ ಮುಖ್ಯವಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗಾವಕಾಶ ಸೃಷ್ಟಿ, ಮೂಲಭೂತ ಸೌಕರ್ಯಗಳ ಸುಧಾರಣೆ, ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿ, ಈ ನೆಲದ ನಿಜ ಬೆಳಕಿನ ಕಿರಣಗಳಾದ ಬುದ್ಧ, ಬಸವಣ್ಣ, ಮಹಾವೀರ, ಬಾಬಾಸಾಹೇಬರು, ಗಾಂಧೀಜಿ, ಸುಭಾಷ್, ಭಗತ್‌ಸಿಂಗ್, ವಿವೇಕಾನಂದರಿಗಿಂಥ ಧರ್ಮ ಮುಖ್ಯ ಎಂದು ನಿತ್ಯ ಮೆದುಳಿಗೆ ತುಂಬುತ್ತಿರುವ ಜನಾಂಗ ದ್ವೇಷದ ವಿಷವೇ ಇಷ್ಟವಾಗುತ್ತಿದೆ. ಜೀವನದ ಸುಡುತ್ತಿರುವ ಸಮಸ್ಯೆಗಳಿಗಿಂತ ಹೆಂಡದ್ದೋ, ಧರ್ಮದ ಹೆಸರಿನ ಜನಾಂಗ ದ್ವೇಷದ ನಶೆಯೇರಿಸಿಕೊಂಡು ಟೈಟಾಗಿರುವುದೇ ಅನೇಕರಿಗೆ ಬೇಕಾಗಿರುವಂತೆ ಕಾಣುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳೇ ಅಲುಗಾಡುತ್ತಿರುವ ಈ ದಿನಗಳಲ್ಲಿ ಸರ್ವರಿಗೂ ಸಮಾನಾವಕಾಶ ನೀಡುವ ಈ ವ್ಯವಸ್ಥೆಯನ್ನು ಉಳಿಸಿ ಕೊಳ್ಳುವ ಅನಿವಾರ್ಯತೆ ಇದೆ. ಜನಸಾಮಾನ್ಯರು ಅದರಲ್ಲೂ ಯುವಕರ ಮೆದುಳನ್ನು ಈಗ ಶತಮಾನಗಳ ಹಿಂದೆ ಕೊಂಡೊಯ್ದು ರಾಜ ಮಹಾರಾಜರ ಕಾಲದ ದಿನಗಳನ್ನು ವೈಭವೀಕರಿಸುವ ಈ ದಿನಗಳಲ್ಲಿ ಸಕಲ ಜೀವಾತ್ಮರ ಲೇಸನು ಬಯಸುವ ಸಮಾಜದ ನಿರ್ಮಾಣದ ಕನಸು ಕಮರಿ ಹೋಗುತ್ತಿದೆ. ಪ್ರಜಾಪ್ರಭುತ್ವ ಉಳಿದರೆ ಮಾತ್ರ ಸಮಾನತೆಯ ಸಮಾಜದ ಕನಸನ್ನಾದರೂ ಕಾಣಬಹುದು. ಹಿಟ್ಲರ್, ಮುಸ್ಸೋಲಿನಿ ಮಾದರಿಯ ನಾಝಿ, ಫ್ಯಾಶಿಸ್ಟ್ ವ್ಯವಸ್ಥೆಯಲ್ಲಿ ಕನಸು ಕಾಣುವುದೂ ಅಪರಾಧವಾಗುತ್ತದೆ. ಅಧಿಕಾರದಲ್ಲಿ ಇರುವವರ ಭದ್ರತೆಗೆ ಧಕ್ಕೆ ಬಂದರೆ ರಾಷ್ಟ್ರ ಅಪಾಯದಲ್ಲಿ ಇದೆ ಎಂಬ ಕೂಗು ಕೇಳಿಬರುತ್ತದೆ. ಇಂಥ ಸಂಕಷ್ಟದ ದಿನಗಳಲ್ಲಿ ನಮ್ಮ ಯುವಕರನ್ನು ಸರಿ ದಾರಿಗೆ ತರುವ ಪ್ರಕ್ರಿಯೆ ಆಂದೋಲನದ ರೂಪದಲ್ಲಿ ನಡೆಯಬೇಕಿದೆ.
ವೈಜ್ಞಾನಿಕವಾಗಿ ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಆಗಿರುವುದಿಲ್ಲ. 50 ವರ್ಷಗಳ ಹಿಂದಿನ ಜಗತ್ತು ಅಥವಾ ಭಾರತವಾಗಲಿ ಈಗಿಲ್ಲ.

ಇನ್ನು ಐವತ್ತು ವರ್ಷ ಕಳೆದರೆ ಮತ್ತೆ ಎಲ್ಲವೂ ಬದಲಾಗಿರುತ್ತದೆ. ಮನುಷ್ಯ ಮಾತ್ರವಲ್ಲ ಸಕಲ ಜೀವರಾಶಿಗಳು ಈ ಭೂಮಿಯಲ್ಲಿ ಜೊತೆಗೂಡಿ ಬಾಳಲೇಬೇಕು. ಪರಸ್ಪರ ಹೊಂದಾಣಿಕೆ ಅನಿವಾರ್ಯ. ಈ ಅರಿವು ತಡವಾಗಿಯಾದರೂ ಮೂಡುತ್ತದೆ. ಆಗ ಕತ್ತಲು ಕರಗಿ ಬೆಳಕು ಮೂಡುತ್ತದೆ. ಸ್ವಾಮಿ ವಿವೇಕಾನಂದರು ಶತಮಾನದ ಹಿಂದೆಯೇ ಕರೆ ನೀಡಿದಂತೆ ಎಲ್ಲ ಧರ್ಮಗ್ರಂಥಗಳಿಗೆ, ಧರ್ಮ ಗುರುಗಳಿಗೆ ವಿಶ್ರಾಂತಿ ನೀಡಿ ಪ್ರೀತಿಯ, ಅಂತಃಕರಣದ ಬೆಳಕನ್ನು ಎಲ್ಲೆಡೆ ಚೆಲ್ಲಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)