varthabharthi


ದಕ್ಷಿಣ ಕನ್ನಡ

ತುಳುವನ್ನು ರಾಜ್ಯದ ದ್ವಿತೀಯ ಭಾಷೆಯಾಗಿ ಮಾಡಲು ಅಧ್ಯಯನ ಸಮಿತಿಯ ಅಗತ್ಯವೇನಿದೆ: ಯು.ಟಿ. ಖಾದರ್ ಪ್ರಶ್ನೆ

ವಾರ್ತಾ ಭಾರತಿ : 6 Feb, 2023

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ದ್ವಿತೀಯ ಭಾಷೆಯನ್ನಾಗಿ ಮಾಡಲು ಅಧ್ಯಯನ ಸಮಿತಿಯ ಅಗತ್ಯವೇನಿದೆ ಎಂದು ವಿಧಾನ ಸಭಾ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ಸರಕಾರವನ್ನು ಪ್ರಶ್ನಿಸಿದ್ದಾರೆ.

ತುಳು ಭಾಷೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದಲ್ಲಿ ಅಕಾಡೆಮಿ ಸ್ಥಾಪನೆಯಾಗಿದೆ. ಶಾಲೆಗಳಲ್ಲಿ ತುಳು ಭಾಷೆಯನ್ನು ಅಧ್ಯಯನ ಮಾಡಲು ಅವಕಾಶವಿದೆ. ತುಳು ಲಿಪಿ ಇದೆ. ತುಳು ಭಾಷೆಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ. ತುಳು ಭಾಷೆಯನ್ನು ರಾಜ್ಯ ಎರಡನೇ ಭಾಷೆಯಾಗಿ ಮಾಡಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷ ಆದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇದೀಗ ಚುನಾವಣೆ ಹತ್ತಿರ ಬರುತ್ತಿರುವಾಗ ಅಧ್ಯಯನ ಸಮಿತಿ ಮಾಡುವ ಮೂಲಕ ಸರಕಾರ ತುಳುನಾಡಿನ ಜನರಿಗೆ ಅವಮಾನ ಮಾಡಲು ಹೊರಟಿದೆ ಎಂದು ಯು.ಟಿ. ಖಾದರ್ ತಿಳಿಸಿದರು.

ಬಜೆಟ್ ನಲ್ಲಿ ಕರಾವಳಿ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಶಿರಾಡಿ ಸುರಂಗ ಮಾರ್ಗ ಮಾಡುವ ಬಗ್ಗೆ ಘೊಷಣೆ ಮಾತ್ರ ಮಾಡಲಾಗಿದೆ. ಆದರೆ ಅದಕ್ಕಾಗಿ ಅಂದಾಜು ಮಾಡಲಾದ 11 ಸಾವಿರ ಕೋಟಿ ರೂಪಾಯಿಗಳನ್ನು ನಿಗದಿಪಡಿಸುವ ಯಾವುದೇ ಪ್ರಸ್ತಾವನೆ ಈಬಾರಿಯ ಬಜೆಟ್‌ನಲ್ಲಿ ಇಲ್ಲ. ಅದೆ ರೀತಿ ಸಾಗರ್ ಮಾಲ ಯೋಜನೆ, ಎನ್ ಎಂ ಪಿಟಿ ಅಭಿವೃದ್ಧಿ, ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆಯ ಬಗ್ಗೆ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ ಎಂದು ಯು.ಟಿ. ಖಾದರ್ ಟೀಕಿಸಿದರು.

ಉಳ್ಳಾಲದಲ್ಲಿ ಅಬ್ಬಕ್ಕ ಥೀಮ್ ಪಾರ್ಕ್ ಮಾಡುವ ಯೋಜನೆಗೆ ನನ್ನ ವಿರೋಧವಿಲ್ಲ. ಆದರೆ ಅಬ್ಬಕ್ಕ ಭವನ ನಿರ್ಮಾಣ ಮಾಡಲು ನಿಗದಿಪಡಿಸಿದ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಬಿಜೆಪಿ ನೇತೃತ್ವದ ಸರಕಾರ ಏಕೆ ಮುತುವರ್ಜಿ ವಹಿಸುತ್ತಿಲ್ಲ. ಎರಡು ವರ್ಷಗಳ ಹಿಂದೆ 8 ಕೋಟಿ ರೂ. ಗಳನ್ನು ಈ ಯೋಜನೆಗಾಗಿ ನಿಗದಿಪಡಿಸಲಾಗಿತ್ತು. ಹಾಲಿ ಕನ್ನಡ ಸಂಸ್ಕೃತಿ ಸಚಿವರೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಆದರೂ ಯಾವುದೇ ಕ್ರಮ ಆಗಿಲ್ಲ ಎಂದು ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಉಮರ್ ಫಾರೂಕ್, ಮುಸ್ತಾಫ, ಬದ್ರುದ್ದೀನ್, ಅಬ್ದುಲ್ ಜಬ್ಬಾರ್, ಝಕರಿಯಾ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)