varthabharthi


ಪ್ರಚಲಿತ

ಬರೀ ಬೆರಳಲ್ಲ, ಕೊರಳು ಕೇಳುವ ಆಧುನಿಕ ದ್ರೋಣಾಚಾರ್ಯರು

ವಾರ್ತಾ ಭಾರತಿ : 27 Feb, 2023
ಸನತ್ ಕುಮಾರ ಬೆಳಗಲಿ

ಅವಮಾನಿತ ಕತ್ತಲ ಕೂಪದಿಂದ ಬೆಳಕಿನತ್ತ ಬರಬೇಕೆಂದರೆ ವಿದ್ಯೆ ಮತ್ತು ಹೋರಾಟ ಮಾತ್ರ ಉಳಿದ ದಾರಿಯಾಗಿದೆ. ಬಾಬಾಸಾಹೇಬರು ಇದರ ಜೊತೆಗೆ ರಾಜಕೀಯ ಅಧಿಕಾರವನ್ನು ಶೋಷಿತ ವರ್ಗಗಳು ಸ್ವಾಧೀನ ಪಡಿಸಿಕೊಳ್ಳುವ ಅಗತ್ಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ಆದರೆ ಭಾರತದ ದುರಂತವೆಂದರೆ ರಾಜ್ಯಾಧಿಕಾರ ಯಾರ ಕೈಗೆ ಹೋಗಬಾರದಿತ್ತೋ ಅವರ ಕೈಗೆ ಹೋಗಿದೆ. ಅದರ ಬಲದಿಂದ ಬುದ್ಧ ಭಾರತದತ್ತ ಸಾಗಬೇಕಾದ ರಥದ ಚಕ್ರಗಳನ್ನು ಮನು ಭಾರತದತ್ತ ವಾಪಸ್ ಕೊಂಡೊಯ್ಯುವ ಹುನ್ನಾರ ನಡೆದಿದೆ.

ಸ್ವಾತಂತ್ರ್ಯದ 75 ವರ್ಷಗಳ ನಂತರ ಭಾರತ ಆತಂಕಕಾರಿ ಅಡ್ಡದಾರಿ ಯತ್ತ ಹೊರಳಿ ನಿಂತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿ ಸುತ್ತ ಕ್ರಮೇಣ ಅದನ್ನೂ ಮುಗಿಸುವ ಈ ದಿನಗಳಲ್ಲಿ ನಮ್ಮ ಹೆಸರಾಂತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಜಾತಿ ವ್ಯಾಧಿಯಿಂದ ನರಳುತ್ತಿವೆ. ಏಕಲವ್ಯನ ಬೆರಳು ಕೇಳಿದ ದ್ರೋಣಾಚಾರ್ಯರ ಕರಿ ನೆರಳು ಶೈಕ್ಷಣಿಕ ಸಂಸ್ಥೆಗಳ ಮೇಲೆ ಆವರಿಸುತ್ತಿದೆ. ವಿದ್ಯೆ ಕಲಿಯುವುದನ್ನು ಒಂದು ಸಮುದಾಯಕ್ಕೆ ನಿಷೇಧಿಸಿದ ವಿಕೃತ ವಿಚಾರ ವಿಜೃಂಭಿಸುತ್ತಿದೆ.ತಳ ಸಮುದಾಯಗಳಿಗೆ ಬಾಗಿಲು ತೆಗೆದ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲ ಯವನ್ನು ಸರ್ವನಾಶ ಮಾಡುವ ಮಸಲತ್ತು ಮತ್ತಷ್ಟು ವೇಗ ಪಡೆದಿದೆ. ನಮ್ಮ ಶಿಕ್ಷಣ ಸಂಸ್ಥೆಗಳನ್ನು ದ್ರೋಣಾಚಾರ್ಯರ ಭೂತ ಇಂದಿಗೂ ಕಾಡುತ್ತಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಉನ್ನತ ಶಿಕ್ಷಣ ಎಂಬುದು ಮೇಲ್ವರ್ಗಗಳ, ಸಂಪತ್ತುಳ್ಳ ಸಮುದಾಯಗಳ ಸೊತ್ತಾಗಿದೆ. ದಲಿತ, ಆದಿವಾಸಿ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಅರ್ಹತೆಯಿಂದ ವಿಶ್ವವಿದ್ಯಾನಿಲಯಗಳನ್ನು ಪ್ರವೇಶಿಸಿದರೂ ಅವರನ್ನು ಅಲ್ಲಿ ಸಮಾನವಾಗಿ ಮಾತ್ರವಲ್ಲ ಮಾನವೀಯತೆಯಿಂದಲೂ ನೋಡಿಕೊಳ್ಳುವುದಿಲ್ಲ. ತಮ್ಮ ಊರು, ಕೇರಿಗಳಲ್ಲಿ ಅನುಭವಿಸುವ ಅಸ್ಪಶ್ಯತೆಯ ಅವಮಾನವನ್ನು ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲೂ ಅವರು ಅನುಭವಿಸಬೇಕಾಗುತ್ತದೆ. ಆಡಳಿತ ವರ್ಗ ಮತ್ತು ಪಾಠ ಮಾಡುವ ಶಿಕ್ಷಕ ಸಮುದಾಯದಲ್ಲೂ ಕೂಡ ಸಾಮಾಜಿಕ ಅಸಮಾನತೆಯ ಅಂಶಗಳು ಬೇರು ಬಿಟ್ಟಿರುವುದರಿಂದ ಉನ್ನತ ವ್ಯಾಸಂಗದ ಕನಸು ಕಂಡು ವಿಶ್ವವಿದ್ಯಾನಿಲಯ ಪ್ರವೇಶಿಸುವ ನಿರ್ಲಕ್ಷಿತ ಸಮುದಾಯಗಳ ವಿದ್ಯಾರ್ಥಿಗಳು ನಿತ್ಯ ತಾರತಮ್ಯ ವನ್ನು ಮತ್ತು ಹಿಂಸೆ ಅನುಭವಿಸಬೇಕಾಗುತ್ತದೆ.

ಹಿಂದೆ ದ್ರೋಣಾಚಾರ್ಯರು ಏಕಲವ್ಯನಿಗೆ ಆತ ಬೇಡರ ಸಮುದಾಯಕ್ಕೆ ಸೇರಿದವನೆಂದು ಬಿಲ್ಲು ವಿದ್ಯೆಯನ್ನು ಹೇಳಿ ಕೊಡಲಿಲ್ಲ. ಏಕಲವ್ಯ ದ್ರೋಣಾ ಚಾರ್ಯರ ಮೂರ್ತಿಯನ್ನು ಎದುರಿಗಿಟ್ಟುಕೊಂಡು ತಾನೇ ಸ್ವತಃ ಬಿಲ್ಲು ವಿದ್ಯೆಯನ್ನು ಕಲಿತರೂ ದ್ರೋಣಾಚಾರ್ಯರಿಗೆ ಇಷ್ಟವಾಗಲಿಲ್ಲ. ತಳ ಸಮುದಾಯದ ಹುಡುಗರು ಬಿಲ್ಲು, ಬಾಣ ಬಿಡುವುದನ್ನು ಕಲಿತರೆ ತನಗೆ ಆಶ್ರಯ ನೀಡಿದ ರಾಜರು ಕೋಪಗೊಂಡಾರೆಂದು ಗಾಬರಿಯಾದ ದ್ರೋಣಾಚಾರ್ಯ ರು ಬಿಲ್ಲುವಿದ್ಯೆ ಹೇಳಿಕೊಡದಿದ್ದರೂ ಗುರುವಿನಂತೆ ಬಿಂಬಿಸಿಕೊಂಡು ಗುರುದಕ್ಷಿಣೆಯ ರೂಪದಲ್ಲಿ ಆತನ ಹೆಬ್ಬೆರಳನ್ನು ಕೇಳಿ ಪಡೆದರು. ಇದು ಏಕಲವ್ಯನ ಕತೆಯಾದರೆ ಕರ್ಣ ಪರಶುರಾಮನ ಬಳಿ ಬಂದು ತಾನು ಬ್ರಾಹ್ಮಣನೆಂದು ಹೇಳಿಕೊಂಡು ಬಿಲ್ಲುವಿದ್ಯೆ ಕಲಿತ. ಮುಂದೆ ಆತ ಬ್ರಾಹ್ಮಣನಲ್ಲ ಎಂದು ಗೊತ್ತಾದಾಗ ಪರಶುರಾಮ ಶಾಪ ಹಾಕಿದನೆಂದು ಪುರಾಣದ ಕತೆ ಜನ ಜನಿತವಾಗಿದೆ.

 ಇತ್ತೀಚೆಗೆ ಮುಂಬೈ ಐಐಟಿಯಲ್ಲಿ ದರ್ಶನ್ ಸೋಲಂಕಿ ಎಂಬ ಗುಜರಾತಿನ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ. ಕಾರಣ ವಿವರಿಸಬೇಕಾಗಿಲ್ಲ. ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಬಂದ ಸೋಲಂಕಿಯ ಕನಸು ಒಂದೇ ವರ್ಷದಲ್ಲಿ ಭಗ್ನವಾಯಿತು. ಹದಿನೆಂಟು ವರ್ಷದ ಈ ಯುವಕನ ರಕ್ತಸಿಕ್ತ ಶವ ಐಐಟಿ ಕ್ಯಾಂಪಸ್ ಆವರಣದಲ್ಲಿ ಫೆಬ್ರವರಿ 12 ರಂದು ಬಿದ್ದಿತ್ತು.ಜಾತಿ ತಾರತಮ್ಯದ ಹಿಂಸೆಯನ್ನು ತಾಳದೇ ಈ ದರ್ಶನ್ ಸೋಲಂಕಿ ಬಹು ಅಂತಸ್ತಿನ. ಹಾಸ್ಟೆಲ್ ಕಟ್ಟಡದ ಏಳನೇ ಅಂತಸ್ತಿನಿಂದ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದ. ಪೊಲೀಸರು ಬಂದು accidental death ಎಂದು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದರು.ಆದರೆ ದರ್ಶನ್ ತಂದೆ ಮತ್ತು ತಾಯಿ ಹಾಗೂ ಐಐಟಿಯ ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್ ಪ್ರಕಾರ, ದರ್ಶನ್ ಸೋಲಂಕಿ ಜಾತಿ ತಾರತಮ್ಯದ ಚಿತ್ರಹಿಂಸೆ ಹಾಗೂ ಮಾನಸಿಕ ಹಿಂಸೆಯನ್ನು ತಾಳದೆ ಏಳನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮ ಹತ್ಯೆ ಮಾಡಿಕೊಂಡ.

ಬಡ ದಲಿತ ಕುಟುಂಬದಿಂದ ಬಂದ ದರ್ಶನ್ ಸೋಲಂಕಿಯ ತಂದೆ ಪ್ಲಂಬರ್ ಕೆಲಸ ಮಾಡುತ್ತಾರೆ. ತಾಯಿ ಮನೆ ಕೆಲಸ ಮಾಡಿ ಜೀವನ ನಡೆಸುತ್ತಾರೆ.
ದರ್ಶನ್ ಕಳೆದ ಸಲ ಮನೆಗೆ ಬಂದಾಗ ಮುಂಬೈ ಐಐಟಿಯಲ್ಲಿ ನಾನು ಎಸ್‌ಸಿ ಎಂದು ತಿಳಿದಾಗ ನನ್ನ ಬಹುತೇಕ ಮಿತ್ರರು ದೂರವಾಗತೊಡಗಿದರು. ಅನೇಕರು ಮಾತನಾಡುವುದನ್ನೇ ನಿಲ್ಲಿಸಿದರು ಎಂದು ನೋವಿನಿಂದ ಹೇಳಿದ ಎಂದು ಆತನ ಸೋದರಿ ಜಾಹ್ನವಿ ಸೋಲಂಕಿ ಸುದ್ದಿ ಮಾಧ್ಯಮದ ಪ್ರತಿನಿಧಿಯೊಬ್ಬ ರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಮುಂಬೈ ಐಐಟಿಯಲ್ಲಿ ಅನಿಕೇತ ಅಂಬೋರೆ ಎಂಬ ದಲಿತ ವಿದ್ಯಾರ್ಥಿ ಆರನೇ ಅಂತಸ್ತಿನಿಂದ ಕೆಳಗೆ ಜಿಗಿದು ಆತ್ಮ ಹತ್ಯೆ ಮಾಡಿಕೊಂಡ. ಈ ಸಾವಿನ ಕುರಿತು ರಚಿಸಲಾಗಿದ್ದ ಮೂವರು ಸದಸ್ಯರ ತನಿಖಾ ಸಮಿತಿ ಕೆಲವು ಶಿಫಾರಸು ಮಾಡಿತ್ತು. ಆ ಶಿಫಾರಸುಗಳು ಕಸದ ಬುಟ್ಟಿಯನ್ನು ಸೇರಿವೆ. ನಮ್ಮ ದೇಶದ ಐದು ಪ್ರತೀ ಐಐಟಿಗಳಲ್ಲಿ ಶೇ.98 ರಷ್ಟು ಬೋಧಕ ಸಿಬ್ಬಂದಿ ಮೇಲ್ಜಾತಿ ಮತ್ತು ಮೇಲ್ವರ್ಗಗಳಿಗೆ ಸೇರಿದವರು ಎಂಬುದು ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ. ಈ ಬೊಧಕ ಸಿಬ್ಬಂದಿಗೂ ಮನುವಾದಿ ಕಾಯಿಲೆ ಅಂಟಿಕೊಂಡಿದೆ.

ನಮ್ಮ ಬಹುತೇಕ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳು ಮನುವ್ಯಾಧಿ ಯಿಂದ ಬಳಲುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ವಿದ್ಯಾರ್ಥಿಗಳು ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ನಿತ್ಯ ಅವಮಾನವನ್ನು ಸಹಿಸಿಕೊಂಡು ವ್ಯಾಸಂಗ ಮಾಡಬೇಕಾಗುತ್ತದೆ. ಇಂಥ. ಭಯಾನಕ ವಾತಾವರಣದಲ್ಲಿ ದರ್ಶನ್ ಸೊಲಂಕಿಯಂಥ ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿಗಳು ಅವಮಾನ ಸಹಿಸಲಾಗದೆ ಸಾವಿನ ಮೊರೆ ಹೋಗುತ್ತಾರೆ. ಅಂತಲೇ ದರ್ಶನ್ ಸಾವನ್ನು ಅಟ್ರಾಸಿಟಿ ಕಾಯ್ದೆಯಡಿ ದಾಖಲಿಸಿಕೊಳ್ಳುವಂತೆ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.

ಇವು ಬೆಳಕಿಗೆ ಬಂದ ಸಾವುಗಳ ಹೆಸರಿನ ಕಗ್ಗೊಲೆಗಳು. ಪರಮಾತ್ಮ ಹತ್ತು ಅವತಾರಗಳನ್ನು ತಾಳಿದ ಭಾರತದಲ್ಲಿ ಎಲ್ಲೂ ಸುದ್ದಿಯಾಗದ, ಯಾರಿಗೂ ಗೊತ್ತಾಗದ, ಇಂಥ ಅನೇಕ ಸಾವುಗಳು ಸತ್ತ ವ್ಯಕ್ತಿಯ ಶವದೊಂದಿಗೆ ಗೋರಿ ಯನ್ನು ಸೇರುತ್ತವೆ. ಕಿರುಕುಳ ನೀಡಿದ ಮಾತ್ರಕ್ಕೆ ಸಾಯಬೇಕೇ ಎಂದು ಮೇಲ್ಮಧ್ಯಮ ವರ್ಗದ ಮರ್ಯಾದಸ್ಥರು ಲೊಚಗುಡಬಹುದು.ಆದರೆ ಅಸ್ಪಶ್ಯತೆ ಮತ್ತು ಜಾತಿ ತಾರತಮ್ಯದ ಅವಮಾನ ಮತ್ತು ಹಿಂಸೆಯನ್ನು ಅನುಭವಿಸಿದವರಿಗೆ ಮಾತ್ರ ಅದರ ಪರಿಣಾಮದ ಭೀಕರತೆ ಮಾನಸಿಕವಾಗಿ ಕೊಂದು ಸಾಯಿಸುತ್ತದೆ.ಇಂಥ ಅವಮಾನ ಗಳನ್ನು ಎದುರಿಸಿ ಗೆದ್ದು ಬಂದ ಬಾಬಾಸಾಹೇಬರನ್ನು ನೆನಪು ಮಾಡಿಕೊಂಡು ನಮ್ಮ ನೋವುಣ್ಣುವ ಸೋದರರು ಬದುಕುವ ಛಲ ತೊಡಬೇಕಾಗಿದೆ. ಇದು ಮುಂಬೈ ಐಐಟಿಯ ದುರಂತ ಕತೆ ಮಾತ್ರವಲ್ಲ ಭಾರತದ ಬಹುತೇಕ ವಿಶ್ವವಿದ್ಯಾನಿಲಯಗಳು,ಉನ್ನತ ಶಿಕ್ಷಣ ಸಂಸ್ಥೆಗಳು ಜಾತಿ ತಾರತಮ್ಯದ ನರಕಘಿ ಯಾತನೆಯ ತಾಣಗಳಾಗಿವೆ.

2016ರಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ. ಮಾಡು ತ್ತಿದ್ದ ರೋಹಿತ್ ವೇಮುಲ ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. 2008 ರಲ್ಲಿ ಇದೇ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ತಮಿಳುನಾಡಿನ ದಲಿತ ವಿದ್ಯಾರ್ಥಿ ಸೆಂಥಿಲ್ ಕುಮಾರ್ ಜಾತಿ ತಾರತಮ್ಯದ ಕಿರುಕುಳ ತಾಳದೆ ಸಾವಿನ ಮೊರೆ ಹೋದರು. ೨೦೧೯ರಲ್ಲಿ ಪಾಯಲ್ ಸಲೀಮ್ ತಡ್ವಿ ಎಂಬ ಮುಸ್ಲಿಮ್ ಬುಡಕಟ್ಟು ಸಮುದಾಯಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ ಮಹಾರಾಷ್ಟ್ರದ ಟೋಪಿವಾಲಾ ಮೆಡಿಕಲ್ ಕಾಲೇಜಿನಲ್ಲಿ ತನಗಿಂತ ಹಿರಿಯ ವಿದ್ಯಾರ್ಥಿಗಳ ಹಿಂಸೆ ಮತ್ತು ಕಿರುಕುಳ ತಾಳಲಾಗದೇ ಆತ್ಮಹತ್ಯೆಯ ಮೊರೆ ಹೋದಳು.

 ಉಳಿದ ವಿಶ್ವವಿದ್ಯಾನಿಲಯಗಳೇನೇ ಇರಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ದ್ವಾರ ದಲಿತ, ಆದಿವಾಸಿಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ (ಜೆಎನ್‌ಯು) ಮುಕ್ತವಾಗಿತ್ತು. ಈ ವಿಶ್ವವಿದ್ಯಾನಿಲಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈಗ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿ, ‘ಹಿಂದೂ’ ಪತ್ರಿಕೆಯ ಎನ್.ರಾಮ್, ಸಮಾಜವಾದಿ ಯೋಗೇಂದ್ರ ಯಾದವ್ ಮುಂತಾದವರು ಇದೇ ಜೆಎನ್‌ಯುನಲ್ಲಿ ವ್ಯಾಸಂಗ ಮಾಡಿದವರು. ನಮ್ಮ ಐಎಎಸ್‌ಎಫ್, ಎಸ್‌ಎಫ್‌ಐಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಜೆಎನ್‌ಯುನಿಂದ ಬಂದವರು. ಇಂಥ ಪ್ರತಿಷ್ಠಿತ ವಿಶ್ವವಿದ್ಯಾನಿಲಯವನ್ನು ಹಾಳು ಮಾಡುವಲ್ಲಿ ಆಧುನಿಕ ದ್ರೋಣಾಚಾರ್ಯರ ಮಾತ್ರವಲ್ಲ ಭಾಗವತರ ಶಿಷ್ಯರು ಯಶಸ್ವಿಯಾಗುತ್ತಿದ್ದಾರೆ.

ದರ್ಶನ ಸೊಲಂಕಿಯಂಥವರ ಸಾವಿನ ಬಗ್ಗೆ ಅನುಕಂಪ, ಸಹಾನುಭೂತಿ ಮತ್ತು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿಯುವುದೂ ಈ ದೇಶದಲ್ಲಿ ಅಪರಾಧವಾಗಿ ಪರಿಗಣಿಸಲ್ಪಡುತ್ತಿದೆ. ಅಂತಲೇ ದರ್ಶನ್ ಸಾವಿನ ಘಟನೆಯ ತನಿಖೆ ಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸರಲ್ಲ, ಎಬಿವಿಪಿ ಎಂಬ ಕುಖ್ಯಾತ ಸಂಘಟನೆಗೆ ಸೇರಿದವರು ಹಲ್ಲೆ ಮಾಡಿದರೆಂದು ವರದಿಯಾಗಿದೆ.

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮನುಷ್ಯರ ನಡುವೆ ತಾರತಮ್ಯದ ಗೋಡೆಯನ್ನು ನಿರ್ಮಿಸಿದೆ. ವಿಶ್ವವಿದ್ಯಾನಿಲಯಗಳಲ್ಲಿ ಓದುವ ದಲಿತ, ಆದಿವಾಸಿ ವಿದ್ಯಾರ್ಥಿಗಳ ಯಾತನೆ ಒಂದು ರೀತಿಯದಾದರೆ ಒಟ್ಟು ನಮ್ಮ ಸಾಮಾಜಿಕ ಜೀವನದಲ್ಲಿ ಜಾತಿ ಆಳವಾಗಿ ಬೇರು ಬಿಟ್ಟಿದೆ. ಶೂದ್ರ ಸಮುದಾಯಕ್ಕೆ ಸೇರಿದ ಜಾತಿಗಳಿಗೆ ಸೇರಿದವರು ಮತ್ತು ಬ್ರಾಹ್ಮಣ್ಯವನ್ನು ವಿರೋಧಿಸುವ ಸಮುದಾಯಗಳಿಗೆ ಸೇರಿದವರು ಕೂಡ ನಮ್ಮ ನಗರಗಳಲ್ಲಿ, ಸಣ್ಣಪುಟ್ಟ ಊರುಗಳಲ್ಲಿ ಜಾತಿಗಳನ್ನು ಕೇಳಿ ಮನೆಯನ್ನು ಬಾಡಿಗೆಗೆ ಕೊಡುತ್ತಾರೆ. ನೇರವಾಗಿ ಜಾತಿಯ ಹೆಸರು ಹೇಳದೆ ಮಾಂಸಾಹಾರಿಗಳಿಗೆ ಮನೆ ಬಾಡಿಗೆ ಕೊಡುವುದಿಲ್ಲ ಎಂದು ಬಹಿರಂಗವಾಗಿ ಬೋರ್ಡು ಹಾಕುತ್ತಾರೆ.ಈಗಂತೂ ಮುಸ್ಲಿಮ್ ದ್ವೇಷ ಬಹುಸಂಖ್ಯಾತ ಸಮುದಾಯದಲ್ಲಿ ಅತ್ಯಂತ ಅಪಾಯಕಾರಿ ಯಾಗಿ ಬೆಳೆಯುತ್ತಿದೆ.ರಾಜ್ಯಾಧಿಕಾರದ ಮೌನ ಸಮ್ಮತಿಯಿಂದ ಭಾರತ ಒಡೆದ ಮನೆಯಾಗುತ್ತಿದೆ.

ಈ ಅವಮಾನಿತ ಕತ್ತಲ ಕೂಪದಿಂದ ಬೆಳಕಿನತ್ತ ಬರಬೇಕೆಂದರೆ ವಿದ್ಯೆ ಮತ್ತು ಹೋರಾಟ ಮಾತ್ರ ಉಳಿದ ದಾರಿಯಾಗಿದೆ. ಬಾಬಾಸಾಹೇಬರು ಇದರ ಜೊತೆಗೆ ರಾಜಕೀಯ ಅಧಿಕಾರವನ್ನು ಶೋಷಿತ ವರ್ಗಗಳು ಸ್ವಾಧೀನ ಪಡಿಸಿಕೊಳ್ಳುವ ಅಗತ್ಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ಆದರೆ ಭಾರತದ ದುರಂತವೆಂದರೆ ರಾಜ್ಯಾಧಿಕಾರ ಯಾರ ಕೈಗೆ ಹೋಗಬಾರದಿತ್ತೋ ಅವರ ಕೈಗೆ ಹೋಗಿದೆ. ಅದರ ಬಲದಿಂದ ಬುದ್ಧ ಭಾರತದತ್ತ ಸಾಗಬೇಕಾದ ರಥದ ಚಕ್ರಗಳನ್ನು ಮನು ಭಾರತದತ್ತ ವಾಪಸ್ ಕೊಂಡೊಯ್ಯುವ ಹುನ್ನಾರ ನಡೆದಿದೆ. ಬಹುತ್ವ ಭಾರತದ ಬೆಳಕಾಗಬೇಕಾಗಿದ್ದ ರೋಹಿತ್ ವೇಮುಲ, ದರ್ಶನ್ ಸೊಲಂಕಿಯಂಥ ತರುಣರು ಬೀದಿ ಶವವಾಗಿ ಕತ್ತಲ ಲೋಕವನ್ನು ಸೇರುತ್ತಿದ್ದಾರೆ.

ಇಂಥ ಸಾವುಗಳ ಬಗ್ಗೆ ಪ್ರತಿಭಟನೆಯ ಧ್ವನಿ ಎತ್ತುವುದು ಘನ ಘೋರ ಅಪರಾಧವಾಗಿರುವ ಇಂದಿನ ದಿನಗಳಲ್ಲಿ ಈವರೆಗೆ ಮತ್ತು ಈಗಲೂ ವಂಚಿತ ಸಮುದಾಯಗಳ ರಕ್ಷಾ ಕವಚವಾದ ಬಾಬಾಸಾಹೇಬರ ಸಂವಿಧಾನ ಅಪಾಯದಲ್ಲಿದೆ. ಈ ಅಪಾಯದಿಂದ ಸಂವಿಧಾನವನ್ನು ಕಾಪಾಡಬೇಕೆಂದರೆ ಮನುವಾದಿ, ಕೋಮುವಾದಿ ಮತ್ತು ಕಾರ್ಪೊರೇಟ್ ಮೈತ್ರಿ ಕೂಟದ ಕೈಯಲ್ಲಿಇರುವ ಅಧಿಕಾರವನ್ನು ಕಿತ್ತುಕೊಳ್ಳಬೇಕು. ಬರೀ ಹೋರಾಟದಿಂದ ಇದು ಸಾಧ್ಯವಿಲ್ಲ. ಚುನಾವಣೆಗಳ ಮೂಲಕ ಈ ಗುರಿ ಸಾಧಿಸಬೇಕು. ಇದು ವಾಸ್ತವ ಮಾರ್ಗ. ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಭಾರತಿಯರೆಲ್ಲ ಒಂದಾಗಿ ಹೋರಾಡಿದಂತೆ ಈ ಫ್ಯಾಶಿಸ್ಟ್ ಕೂಟದ ವಿರುದ್ಧ ಎಲ್ಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ಗಳು ಒಂದಾಗಿ ಚುನಾವಣೆಗಿಳಿಯಬೇಕು.ಇದು ಸಾಧ್ಯವಾಗದಿದ್ದರೆ ಮುಂದಾಗಬಹುದಾದ್ದನ್ನು ಅನುಭವಿಸಬೇಕು.ಇದೊಂದೇ ಉಳಿದ ದಾರಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)