varthabharthi


ಓ ಮೆಣಸೇ

ಓ ಮೆಣಸೇ ...

ವಾರ್ತಾ ಭಾರತಿ : 13 Mar, 2023
ಪಿ.ಎ. ರೈ

ಬಿಜೆಪಿ ವಂಚಕರ ಪಕ್ಷ, ತಾರತಮ್ಯದ ಮೂಟೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಆದರೂ ಅದು ನಿಮ್ಮ ಭವಿಷ್ಯದ ಆಶ್ರಯ ಎಂಬ ವದಂತಿಗಳಿರುವುದೇಕೆ?

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ- ಬಸವರಾಜ ಬೊಮ್ಮಾಯಿ, ಸಿಎಂ
ಎಲ್ಲವೂ ಪುರಾವೆ ಸಹಿತ ಬಹಿರಂಗವಾಗಿ ಬಿಟ್ಟ ಮೇಲೆ ಮತ್ತೆ ಇನ್ನೇನು ಉಳಿದಿರುತ್ತದೆ, ಮುಚ್ಚಿಡುವುದಕ್ಕೆ?

ಗೋವುಗಳನ್ನು ಹತ್ಯೆ ಮಾಡುವವರು ನರಕದಲ್ಲಿ ಕೊಳೆಯುತ್ತಾರೆ- ಶಮೀಮ್ ಅಹ್ಮದ್, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ
ಭಾರತದಿಂದ ನಡೆದಿರುವ ವಿಪರೀತ ಪ್ರಮಾಣ ಬೀಫ್ ರಫ್ತಿನ ಕುರಿತು ಅವರು ಈ ರೀತಿ ಆಕ್ರೋಶ ಪ್ರಕಟಿಸಿದ್ದಾರೆ. ಸರಕಾರಕ್ಕೆ ಗೊತ್ತಾದರೆ ಭಡ್ತಿಗೆ ಕತ್ತರಿ ಖಚಿತ.

ಜೆಡಿಎಸ್ ತಮ್ಮ ಕುಟುಂಬದಲ್ಲಿ ಟಿಕೆಟ್ ಹಂಚಿಕೊಂಡು ಪರಿವಾರ ವಾದಕ್ಕೆ ಜೋತು ಬಿದ್ದಿರುವ ಪಕ್ಷ- ಅಮಿತ್ ಶಾ, ಕೇಂದ್ರ ಸಚಿವ
ಜಯ್ ಶಾ ಅವರಿಗೆ ಈ ಬಗ್ಗೆ ಭಿನ್ನಾಭಿಪ್ರಾಯ ಇದೆಯೇ?

ಸದ್ಯದಲ್ಲೇ ಗಾಣದಿಂದ ಎಣ್ಣೆ ತೆಗೆಯುವ ಸ್ಟಾರ್ಟ್ ಅಪ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಎಲ್ಲದರಿಂದ ದ್ವೇಷ ಉತ್ಪಾದಿಸುವ ಉದ್ದಿಮೆಯ ಅನಿಯಂತ್ರಿತ ವೃದ್ಧಿಯ ನಿಯಂತ್ರಣಕ್ಕೆ ಏನಾದರೂ ಸ್ಕೀಮ್ ಇದೆಯೇ?

ಮನಸ್ಸು ಮಾಡಿದ್ದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ನಮಗೆ ಮುಚ್ಚಿ ಹಾಕಬಹುದಾಗಿತ್ತು- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮುಚ್ಚಿಹಾಕುವ ಯೋಜನೆಯನ್ನು ವೈಯಕ್ತಿಕ ದ್ವೇಷದಿಂದ ಕ್ಯಾನ್ಸೆಲ್ ಮಾಡಿಬಿಟ್ರಾ?

ರಾಜ್ಯ ಸರಕಾರದ ಭ್ರಷ್ಟಾಚಾರದಿಂದ ಜನತೆ ಬೇಸತ್ತು ಸರಕಾರದ ಬದಲಾವಣೆಗಾಗಿ ಕಾಯುತ್ತಿದ್ದಾರೆ- ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಬೇರೊಂದು ಪಕ್ಷ ಬಂದು ಭ್ರಷ್ಟಾಚಾರ ನಡೆಸಲಿ ಎಂಬುದು ಜನರ ಇಂಗಿತವೇ?

ಕಾಂಗ್ರೆಸ್‌ನಲ್ಲಿ ಭಯೋತ್ಪಾದಕರು ಇರುವುದು ಸ್ಪಷ್ಟ- ನಳಿನ್ ಕುಮಾರ್ ಕಟೀಲು, ಸಂಸದ
ಆದರೆ ಅವರಿಗೆ ನಿಮ್ಮಂತಹ ನಾಯಕರು ಸಿಕ್ಕಿಲ್ಲ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಪ್ರತಿಪಕ್ಷದ ಸ್ಥಾನ ನಿರ್ವಹಿಸುವಂತೆ ಯಾರೂ ಒತ್ತಡ ಹೇರಬಾರದು - ಕಿರಣ್ ರಿಜಿಜು, ಕೇಂದ್ರ ಸಚಿವ
ಅಂದರೆ ಅದು ಆಡಳಿತ ಪಕ್ಷದ ಕೈಗೊಂಬೆಯಾಗುವುದನ್ನು ಯಾರೂ ಆಕ್ಷೇಪಿಸಬಾರದು?

ಬ್ರಿಟಿಷರಿಗೇ ಹೆದರದ ನಾವು ಪ್ರಧಾನಿ ಮೋದಿಗೆ ಹೆದರುತ್ತೇವಾ?- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಸದ್ಯ ನೀವು ಹೆದರಬೇಕಾಗಿರುವುದು ಯಾವುದೇ ಸೈದ್ಧಾಂತಿಕ ಪ್ರಜ್ಞೆಯಾಗಲಿ ಉತ್ಸಾಹವಾಗಲಿ ಇಲ್ಲದ ನಿಮ್ಮದೇ ಪಕ್ಷದ ಕಾರ್ಯಕರ್ತರ ಬಗ್ಗೆ.

ನನಗೆ ಟೋಪಿ ಹಾಕಿದವರೆಲ್ಲ ಶೀಘ್ರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
  ನಿಮ್ಮಿಂದ ಟೋಪಿ ಹಾಕಿಸಿಕೊಂಡವರು?

ಕಾಂಗ್ರೆಸ್‌ನವರು ಬುಟ್ಟಿಯಲ್ಲಿರುವ ಹಲ್ಲು ಕಿತ್ತ ಹಾವಿನಂಥವರು - ಡಾ.ಸುಧಾಕರ್, ಸಚಿವ
ವಿಷವೆಲ್ಲಾ ನಿಮ್ಮ ಬಳಿ ಇರುವಾಗ ಅವರಿಗೆ ಹಲ್ಲಿನ ಅಗತ್ಯವೇನಿದೆ?

ಜೆಡಿಎಸ್‌ಗೆ ಓಟು ಹಾಕುವುದೆಂದರೆ ಅದು ಬಿಜೆಪಿಗೆ ಹಾಕಿದಂತೆ- ಸಿದ್ದರಾಮಯ್ಯ, ಮಾಜಿ ಸಿಎಂ
ಆದ್ದರಿಂದ ಅವರ ಮೂಲಕ ಬಿಜೆಯಿಯನ್ನು ಬೆಂಬಲಿಸುವುದಕ್ಕಿಂತ ನೇರವಾಗಿ ಬಿಜೆಪಿಗೆ ಓಟು ಹಾಕಿದರೆ ಹೇಗೆ ಎಂದು ಹಲವರು ತರ್ಕಿಸುತ್ತಿದ್ದಾರೆ.

ನಾನು ಹುಟ್ಟಿದ್ದೇ ಚಡ್ಡಿಗಳು, ಕರಿಟೋಪಿ, ದೊಣ್ಣೆಯವರಿಗೆ ಉತ್ತರ ಕೊಡಲು- ಬಿ.ಕೆ.ಹರಿಪ್ರಸಾದ್, ವಿ.ಪ. ವಿ.ನಾಯಕ
ಅದರ ಜೊತೆಗೆ ಒಂದಷ್ಟು ಜನಸೇವೆಯ ಚಟುವಟಿಕೆಗಳ ಕಡೆಗೂ ಗಮನವಿರಲಿ.

ಜನಸಂಖ್ಯೆ ಹೆಚ್ಚಿಸದಿದ್ದರೆ ಮುಂದೊಂದು ದಿನ ಜಪಾನ್ ಎಂಬ ದೇಶವೇ ಮಾಯವಾಗಿ ಹೋಗಬಹುದು- ಮಸಾಕೊ ಮೊರಿ, ಜಪಾನ್ ಪ್ರಧಾನಿ ಸಲಹೆಗಾರ್ತಿ
ಬಹಳಷ್ಟನ್ನು ಎಕ್ಸ್ ಪೋರ್ಟ್ ಮಾಡುವ ನೀವು ನಮ್ಮ ಭೂಭಾಗದಿಂದ ಒಂದಷ್ಟು ಜನರನ್ನು ಇಂಪೋರ್ಟ್ ಮಾಡುವ ಬಗ್ಗೆ ಯಾಕೆ ಆಲೋಚಿಸುತ್ತಿಲ್ಲ?

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ- ಅಖಿಲೇಶ್ ಯಾದವ್, ಎಸ್‌ಪಿ ಅಧ್ಯಕ್ಷ
ಸೋತ ನಂತರ ಮೈತ್ರಿ ಮಾಡಿಕೊಳ್ಳಿ. ಅವರೂ ಅದೇ ಮೂಡ್ ನಲ್ಲಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಬಿಜೆಪಿಯವರ ಭ್ರಷ್ಟಾಚಾರವೇ ಕಾರಣ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆದರೆ ಅದಕ್ಕೆ ಇನ್ನೊಂದು ಪಕ್ಷದವರ ಭ್ರಷ್ಟಾಚಾರ ಪರಿಹಾರವಲ್ಲ.

ಬಿಜೆಪಿಯ ಸಿದ್ಧಾಂತದ ಹೃದಯ ಭಾಗದಲ್ಲಿ ಹೇಡಿತನ, ಅಂಜು ಬುರುಕುತನವಿದೆ- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ನಿಮ್ಮ ರಾಜಕೀಯ ನಡವಳಿಕೆಯಲ್ಲೂ ಎದ್ದು ಕಾಣುವುದು ಅವೇ ಗುಣಗಳು.

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು- ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ನೀವು ಹಾಗೆಲ್ಲಾ ಮಾತನಾಡಿದರೆ ನಿಮ್ಮನ್ನು ಹುಟ್ಟಿಸಿದ್ದೇ ತಾನೆಂದು ಅವರು ವಾದಿಸಬಹುದು

ಬಿಜೆಪಿಯಿಂದ ಇಬ್ಬರು ಹೊರಗೆ ಹೋದರೆ 20 ಜನ ಒಳಗೆ ಬರುತ್ತಾರೆ- ಬಿ.ಸಿ.ಪಾಟೀಲ, ಸಚಿವ
ಆದ್ದರಿಂದ ಇನ್ನೂರು ಮಂದಿಯನ್ನು ಹೊರಕಳಿಸಿ, ಎರಡು ಸಾವಿರ ಮಂದಿ ಒಳಬರಲಿ

ನಮ್ಮ ದೇಶದ ಆರ್ಥಿಕ ಶಿಸ್ತು ಅನ್ಯ ದೇಶಗಳಿಗೆ ದಾರಿ ದೀಪ- ಹಾಲಪ್ಪ ಆಚಾರ್, ಸಚಿವ
ನಿಮ್ಮ ದಾರಿದೀಪದ ಬೆಳಕಲ್ಲಿ ನಡೆದರೆ ಅವರ ವಿನಾಶವೂ ಖಚಿತ.

ರಾಜ್ಯ ಬಿಜೆಪಿಯಲ್ಲಿ ಗಂಡಸರು ಇಲ್ಲದೇ ಇರುವುದರಿಂದ ಪ್ರತೀ ಬಾರಿಯೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾರನ್ನು ಚುನಾವಣಾ ಪ್ರಚಾರಕ್ಕಾಗಿ ಕರೆಸಲಾಗುತ್ತದೆ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಜೆಡಿಎಸ್‌ನಲ್ಲಿ ಯಾರ ಬದಲಿಗೆ ನಿಮ್ಮನ್ನು ಕರೆಸಲಾಯಿತು?

ಅಮೆರಿಕ ಈವರೆಗೆ ಎದುರಿಸಿದ ಅತ್ಯಂತ ಬಲಿಷ್ಠ ಹಾಗೂ ಚತುರ ಶತ್ರುವೆಂದರೆ ಅದು ಚೀನಾ- ನಿಕ್ಕಿ ಹ್ಯಾಲೆ, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ
ದುರ್ಬಲ ದೇಶಗಳ ಮೇಲೆ ಅಕ್ರಮ ಎಸಗುವುದೇ ನಿಮ್ಮ ಬಲಿಷ್ಠ ಮತ್ತು ಚತುರತೆಯ ಮಾನದಂಡವಿರಬೇಕು.

ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳಿಗೆ ಬಿಜೆಪಿ ಹೆದರಿದೆ- ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರ. ಕಾರ್ಯದರ್ಶಿ
ಬಿಜೆಪಿಯ ಕಾಲ್ಪನಿಕ ನಂಜೇಗೌಡ, ಉರಿಗೌಡರಿಗೆ ಕಾಂಗ್ರೆಸ್ ಹೆದರಿದೆ ಎಂದು ಬಿಜೆಪಿ ನಾಯಕರು ಸಂಭ್ರಮದಲ್ಲಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು