varthabharthi


ರಾಷ್ಟ್ರೀಯ

ರಾಜ್ಯಪಾಲರೊಬ್ಬರು ತಮ್ಮ ಅಧಿಕಾರವನ್ನು ಎಚ್ಚರಿಕೆಯಿಂದ ಚಲಾಯಿಸಬೇಕು ಎಂದ ನ್ಯಾಯಾಲಯ

ಶಿವಸೇನೆ ವಿವಾದ: ರಾಜ್ಯಪಾಲರ ಪಾತ್ರದ ಕುರಿತು ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌

ವಾರ್ತಾ ಭಾರತಿ : 15 Mar, 2023

ಮಹಾರಾಷ್ಟ್ರ ಮಾಜಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ (PTI)

ಹೊಸದಿಲ್ಲಿ: "ರಾಜ್ಯಪಾಲರೊಬ್ಬರು ತಮ್ಮ ಅಧಿಕಾರವನ್ನು ಎಚ್ಚರಿಕೆಯಿಂದ ಚಲಾಯಿಸಬೇಕು ಮತ್ತು ವಿಶ್ವಾಸ ಮತ ಯಾಚನೆಗೆ ಕರೆ ನೀಡುವುದು ಒಂದು ಸರ್ಕಾರವನ್ನು ಉರುಳಿಸಬಹುದೆಂಬ ವಿಚಾರ ತಿಳಿದಿರಬೇಕು," ಎಂದು ಶಿವಸೇನೆಯಲ್ಲಿ ಉಂಟಾದ ಬಂಡಾಯ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ (Supreme Court) ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಮೈತ್ರಿಕೂಟದ ಸರ್ಕಾರದ ಪತನದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ (Bhagat Singh Koshyari) ಅವರ ಪಾತ್ರದ ಕುರಿತು ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ಒಂದು ಸರ್ಕಾರದ ಪತನಕ್ಕೆ ಕಾರಣವಾಗಬಹುದಾದ ಯಾವುದೇ ವಿಚಾರದಲ್ಲಿ ರಾಜ್ಯಪಾಲರು ಪ್ರವೇಶಿಸಬಾರದು, ರಾಜ್ಯಪಾಲರು ತಮ್ಮ ಅಧಿಕಾರವನ್ನು  ತುಂಬಾ ಎಚ್ಚರಿಕೆಯಿಂದ ಚಲಾಯಿಸಬೇಕು," ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಕ್ರಿಯಿಸಿ ಬಂಡಾಯ ಶಾಸಕರು ಉದ್ಧವ್‌ ಠಾಕ್ರೆ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, "ಒಂದು ಪಕ್ಷದಲ್ಲಿ ಅಸಮಾಧಾನವಿದೆಯೆಂದ ಮಾತ್ರಕ್ಕೆ ರಾಜ್ಯಪಾಲರು ವಿಶ್ವಾಸ ಮತಯಾಚನೆಗೆ ಸೂಚಿಸುವುದನ್ನು ಸಮರ್ಥಿಸಲಾಗದು," ಎಂದರು.

ಮೂರು ಪಕ್ಷಗಳಿರುವ ಮೈತ್ರಿ ಸರ್ಕಾರದಲ್ಲಿ ಒಂದು ಪಕ್ಷದಲ್ಲಿ ಮಾತ್ರ ಭಿನ್ನಾಭಿಪ್ರಾಯ ಮೂಡಿತ್ತು ಎಂಬುದನ್ನೂ ರಾಜ್ಯಪಾಲರು ಮರೆಯಬಾರದಾಗಿತ್ತು ಎಂದು ಸಿಜೆಐ ಹೇಳಿದರು.

ಇದನ್ನೂ ಓದಿ: ಇಮ್ರಾನ್ ಖಾನ್  ಬಂಧಿಸುವ ಯತ್ನ ಕೈಬಿಡಿ: ಪಾಕಿಸ್ತಾನ ಪೊಲೀಸರಿಗೆ ಲಾಹೋರ್ ನ್ಯಾಯಾಲಯ ಆದೇಶ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)