varthabharthi


ಕ್ರೀಡೆ

ಕೆ.ಎಲ್.ರಾಹುಲ್ ಅರ್ಧಶತಕ; ಶಮಿ, ಸಿರಾಜ್‌ಗೆ ತಲಾ 3 ವಿಕೆಟ್

ಮೊದಲ ಏಕದಿನ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಜಯ

ವಾರ್ತಾ ಭಾರತಿ : 17 Mar, 2023

 Photo Credit: AP

ಮುಂಬೈ, ಮಾ.17: ಮಧ್ಯಮ ಕ್ರಮಾಂಕದ ಬ್ಯಾಟರ್ ಕೆ.ಎಲ್.ರಾಹುಲ್(ಔಟಾಗದೆ 75 ರನ್, 91 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಕೊಡುಗೆ, ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ವಾಂಖೆಡೆ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 189 ರನ್ ಗುರಿ ಪಡೆದ ಭಾರತ 39.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 191 ರನ್ ಗಳಿಸಿದೆ.

ಭಾರತವು 10.2 ಓವರ್‌ಗಳಲ್ಲಿ 39 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 5ನೇ ವಿಕೆಟಿಗೆ 44 ರನ್ ಸೇರಿಸಿದ ರಾಹುಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(25 ರನ್, 31 ಎಸೆತ)ತಂಡವನ್ನು ಆಧರಿಸಿದರು.

ಪಾಂಡ್ಯ ಔಟಾದ ನಂತರ ರಾಹುಲ್‌ಗೆ ರವೀಂದ್ರ ಜಡೇಜ(ಔಟಾಗದೆ 45, 69 ಎಸೆತ) ಸಾಥ್ ನೀಡಿದರು. ಈ ಜೋಡಿ 6ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 108 ರನ್ ಸೇರಿಸಿ ಇನ್ನೂ 61 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿತು.

ರಾಹುಲ್ 73 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 13ನೇ ಅರ್ಧಶತಕ ಪೂರೈಸಿದರು.

ಆಸ್ಟ್ರೇಲಿಯ 188 ರನ್‌ಗೆ ಆಲೌಟ್: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಕ್ರಿಕೆಟ್ ತಂಡ ಮುಹಮ್ಮದ್ ಶಮಿ(3-17) ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿ ಭಾರತ ವಿರುದ್ಧದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 35.4 ಓವರ್‌ಗಳಲ್ಲಿ ಕೇವಲ 188 ರನ್‌ಗೆ ಆಲೌಟಾಗಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)