varthabharthi


ಸಂಪಾದಕೀಯ

ಬೆಳಗಾವಿಯನ್ನು ನಮ್ಮದಾಗಿಸಿಕೊಳ್ಳುವ ದಾರಿ

ವಾರ್ತಾ ಭಾರತಿ : 18 Mar, 2023

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಬೆಳಗಾವಿ ಗಡಿವಿವಾದ ಇದೀಗ ಇನ್ನೊಂದು ತಿರುವು ಪಡೆದುಕೊಂಡಿದೆ. ಈವರೆಗೆ ಹೇಳಿಕೆಗಳ ಮೂಲಕ, ಕನ್ನಡ ಭಾಷಿಗರ ವಿರುದ್ಧ ಅತಿರೇಕಗಳನ್ನು ಎಸಗುವ ಮೂಲಕ ಬೆಳಗಾವಿ ಭೂಭಾಗವನ್ನು ತನ್ನದೆಂದು ಪ್ರತಿಪಾದಿಸಲು ಯತ್ನಿಸುತ್ತಿದ್ದ ಮಹಾರಾಷ್ಟ್ರ ಸರಕಾರ, ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಕರ್ನಾಟಕ ರಾಜ್ಯಕ್ಕೆ ಸೇರಿದ ಗಡಿ ಭಾಗದ ಹಳ್ಳಿಗಳಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಗಡಿ ಭಾಗದಲ್ಲಿ ಮರಾಠಿ ಭಾಷಿಗರ ಕುರಿತಂತೆ ಪ್ರೀತಿಯೋ ಅಥವಾ ವಿವಾದವನ್ನು ಸೃಷ್ಟಿಸಿ ಕರ್ನಾಟಕಕ್ಕೆ ಮುಜುಗರ ಮಾಡಬೇಕು ಎನ್ನುವ ದುರುದ್ದೇಶವೋ ಒಟ್ಟಿನಲ್ಲಿ, ಗಡಿ ಭಾಗದ 865 ಗ್ರಾಮಗಳಲ್ಲಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ.

ಕರ್ನಾಟಕದ ಬಸ್‌ಗಳಿಗೆ ಕಲ್ಲು ತೂರಾಟ ಮಾಡಿ ಅಥವಾ ಕನ್ನಡ ಭಾಷಿಗರ ಮೇಲೆ ಹಲ್ಲೆ ನಡೆಸಿ ಬೆಳಗಾವಿಯ ಮೇಲೆ ಹಕ್ಕು ಸಾಧಿಸುವುವ ಮಹಾರಾಷ್ಟ್ರದ ೀ ಹಿಂದಿನ ಕೃತ್ಯಗಳಿಗೆ ಹೋಲಿಸಿದರೆ, ಈ ತಂತ್ರ ಒಂದಿಷ್ಟು ಧನಾತ್ಮಕವಾಗಿದೆ. ಬೆಳಗಾವಿ ತನ್ನದು ಎಂದು ಪ್ರತಿಪಾದಿಸುತ್ತಿರುವುದರಿಂದ , ಆ ಸರಕಾರದ ಯೋಜನೆಗಳು ಅಲ್ಲಿನ ಜನರಿಗೆ ಅನ್ವಯವಾಗಲೇ ಬೇಕು. ಈ ತರ್ಕದ ಆಧಾರದಲ್ಲಿ ಅದು ತನ್ನ ರಾಜ್ಯದ ಯೋಜನೆಗಳನ್ನು ಬೆಳಗಾವಿ ಗಡಿ ಭಾಗದ ಜನರಿಗೆ ವಿಸ್ತರಿಸಿ, ಬೆಳಗಾವಿಯ ಭೂಮಿಯನ್ನಷ್ಟೇ ಅಲ್ಲ, ಅಲ್ಲಿರುವ ಜನರನ್ನು ತನ್ನವರನ್ನಾಗಿಸಲು ಹೊರಟಿದೆ. ಇದನ್ನು ರಾಜ್ಯದ ಎಲ್ಲ ನಾಯಕರೂ ಖಂಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ನ ಕೆಲವು ಮುಖಂಡರು ಆಗ್ರಹಿಸಿದ್ದಾರೆ. ''ಮಹಾರಾಷ್ಟ್ರ ಸರಕಾರ ಬೆಳಗಾವಿಯ ಜನರಿಗೆ ಅನುದಾನ ಬಿಡುಗಡೆ ಮಾಡಿದರೆ ನಾನು ಯಾಕೆ ರಾಜೀನಾಮೆ ನೀಡಬೇಕು?'' ಎಂದು ಅವರು ಮರು ಪ್ರಶ್ನಿಸಿದ್ದಾರೆ. ಅವರ ಮರು ಪ್ರಶ್ನೆಯಲ್ಲೂ ಅರ್ಥವಿದೆ. ಮಹಾರಾಷ್ಟ್ರ ಯಾವುದೇ ತೀರ್ಮಾನ ತೆಗೆದುಕೊಂಡರೆ ಅದಕ್ಕೆ ರಾಜ್ಯ ಸರಕಾರ ಹೊಣೆಯಾಗಬೇಕಾಗಿಲ್ಲ. ಆ ತೀರ್ಮಾನವನ್ನು ಒಪ್ಪಿಕೊಂಡರೆ ಅಥವಾ ತೀರ್ಮಾನದ ಅನುಷ್ಠಾನಕ್ಕೆ ಅವಕಾಶ ನೀಡಿದರೆ ಮಾತ್ರ ಮುಖ್ಯಮಂತ್ರಿಯನ್ನು ಹೊಣೆ ಮಾಡಬೇಕಾಗುತ್ತದೆ. ತೀರ್ಮಾನವನ್ನು ಒಪ್ಪಿಕೊಳ್ಳದೇ ಇರುವುದರಿಂದಷ್ಟೇ ಮುಖ್ಯಮಂತ್ರಿ ಯವರ ಹೊಣೆಗಾರಿಕೆ ಮುಗಿಯುವುದಿಲ್ಲ. ಗಡಿವಿವಾದ ನ್ಯಾಯಾಲಯದಲ್ಲಿರುವಾಗ ಇಂತಹದೊಂದು ಅತಿರೇಕದ ನಿರ್ಧಾರವನ್ನು ಮಾಡಿದ ಮಹಾರಾಷ್ಟ್ರ ಸರಕಾರದ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರವನ್ನು ಒತ್ತಾಯಿಸಬೇಕಾದುದು ಕರ್ನಾಟಕ ಸರಕಾರದ ಕರ್ತವ್ಯವಾಗಿದೆ.

ಕರ್ನಾಟಕ, ಮಹಾರಾಷ್ಟ್ರ ಜೊತೆಗೆ ಕೇಂದ್ರದಲ್ಲೂ ಬಿಜೆಪಿ ಸರಕಾರ ವಿರುವುದರಿಂದ ಪರಸ್ಪರ ಸಹಮತಕ್ಕೆ ಬರುವುದು ಕಷ್ಟವಿಲ್ಲ. ಆದುದರಿಂದ, ಮಹಾರಾಷ್ಟ್ರ ಸರಕಾರಕ್ಕೆ ಬುದ್ಧಿ ಮಾತು ಹೇಳಲು ಕೇಂದ್ರವನ್ನು ಮುಖ್ಯಮಂತ್ರಿ ಬೊಮ್ಮಾಯಿ ಒತ್ತಾಯಿಸಬೇಕು. ಬಿಜೆಪಿ ನಾಯಕರ ವಿಷಾದದ ಹೇಳಿಕೆಗಳಿಂದ ಸಮಸ್ಯೆ ಪರಿಹಾರವಾಗದು. ಕರ್ನಾಟಕದಲ್ಲಿರುವ ಬಿಜೆಪಿಯ ಅಷ್ಟೂ ಸಂಸದರು ಬೆಳಗಾವಿಗಾಗಿ ಕೇಂದ್ರದ ವರಿಷ್ಠರ ಮುಂದೆ ಬಾಯಿ ತೆರೆಯಬೇಕು. ಕರ್ನಾಟಕದಲ್ಲಿ ಕುಳಿತು ಅನಗತ್ಯ ಉರಿ, ನಂಜುಗಳನ್ನು ಕಾರುತ್ತಾ ಸಮಯ ಕಳೆಯುವ ಬದಲು ಬೆಳಗಾವಿಗಾಗಿ ದಿಲ್ಲಿಯಲ್ಲಿ ಧ್ವನಿಯೆತ್ತುವ ಸಮಯ ಬಂದಿದೆ. ಹಾಗೆಯೇ, ಬೆಳಗಾವಿಯನ್ನು ಬರೇ ಕಾನೂನು ಹೋರಾಟಗಳ ಮೂಲಕ ನಮ್ಮದಾಗಿಸಲು ಸಾಧ್ಯವಿಲ್ಲ. ಯಾಕೆಂದರೆ ಬೆಳಗಾವಿಯೆಂದರೆ ಬರೇ ಭೂಭಾಗ ಅಷ್ಟೇ ಅಲ್ಲ. ಅಲ್ಲಿ ಬದುಕುತ್ತಿರುವ ಜನರು ಕೂಡ ಕರ್ನಾಟಕದ ಮುಖ್ಯ ಭಾಗವಾಗಿದ್ದಾರೆ. ಸಾಧಾರಣವಾಗಿ ಗಡಿ ಭಾಗದಲ್ಲಿರುವ ಜನರ ಸಂಕಟವೆಂದರೆ, ಅವರು ಉಭಯ ರಾಜ್ಯಗಳಿಗೂ ಬೇಡವಾದ ಮಕ್ಕಳು. ಯಾವುದೋ ಗುರುತು ಚೀಟಿ ಅಥವಾ ಇನ್ನಾವುದೋ ಸರಕಾರಿ ಸೌಲಭ್ಯಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡಿದಾಗ 'ನೀವು ಆ ರಾಜ್ಯದ ಬಳಿ ಕೇಳಿ' ಎಂದು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಲೆದಾಡಿಸುತ್ತಿರುತ್ತಾರೆ.

ಬೆಳಗಾವಿಯಲ್ಲಿ ಅತ್ತ ಕನ್ನಡಕ್ಕೂ ಸಲ್ಲದೆ, ಇತ್ತ ಮರಾಠಿಗರೂ ಆಗದೆ ಇರುವ ನೂರಾರು ಕುಟುಂಬಗಳಿವೆ. ಒಂದು ಕಾಲದಲ್ಲಿ ಬೆಳಗಾವಿ ಗಡಿಯಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದರು. ಇಂತಹ ಸಂದರ್ಭದಲ್ಲಿ ಮಹಾಜನ್ ವರದಿ ಕರ್ನಾಟಕದ ಪರವಾಗಿ ತನ್ನ ನಿಲುವನ್ನು ಎತ್ತಿ ಹಿಡಿದಿತ್ತು. ಆದರೆ ಇಂದು ಬೆಳಗಾವಿ ಗಡಿಯಲ್ಲಿ ಅದೇ ಪರಿಸ್ಥಿತಿಯಿಲ್ಲ. ಮರಾಠಿಗರ ಸಂಖ್ಯೆ ದೊಡ್ಡದಾಗಿ ವಿಸ್ತರಿಸಿದೆ. ಇದಕ್ಕೆ ಕಾರಣ ಏನು? ಯಾರು? ಎನ್ನುವುದರ ಬಗ್ಗೆ ಸರಕಾರ ಆತ್ಮವಿಮರ್ಶೆ ನಡೆಸಬೇಕು. ಬೆಳಗಾವಿ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಒಂದೆಡೆ ಬರ. ಮಳೆಗಾಲದ ಸಂದರ್ಭದಲ್ಲಿ ನೆರೆಯಿಂದಲೂ ಈ ಜಿಲ್ಲೆ ತತ್ತರಿಸುತ್ತಿದೆ. ಬೆಳಗಾವಿ ತನ್ನದು ಎಂದು ಹೇಳಿಕೊಳ್ಳುವ ಮಹಾರಾಷ್ಟ್ರ, ಹೆಚ್ಚುವರಿ ಅಣೆಕಟ್ಟಿನ ನೀರನ್ನು ಹೊರ ಬಿಡುವ ಸಂದರ್ಭದಲ್ಲಿ ಬೆಳಗಾವಿಯ ಜನರ ಕುರಿತು ಕಾಳಜಿ ತೋರಿಸಿದ್ದಿಲ್ಲ. ನೆರೆ ನೀರಿನಿಂದ ಕೊಚ್ಚಿ ಹೋದ ಜನರಿಗಾಗಿ ಮಿಡಿದದ್ದೂ ಇಲ್ಲ. ಬೆಳಗಾವಿಯ ಗಡಿಭಾಗ ತನ್ನದು ಎಂದು ಹೇಳಿಕೊಳ್ಳುವ ಕರ್ನಾಟಕ ಸರಕಾರವೂ ಆ ಭಾಗದ ಜನರ ಅಭಿವೃದ್ಧಿಗಾಗಿ, ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲು ಆಸಕ್ತಿ ವಹಿಸಿದ್ದಿಲ್ಲ.

ಇಂದು ಮಹಾರಾಷ್ಟ್ರ ಗಡಿ ಭಾಗದ ಜನರಿಗಾಗಿ ಆರೋಗ್ಯ ಯೋಜನೆಯನ್ನು ಘೋಷಿಸಿದೆ. ಆದರೆ ಈ ಯೋಜನೆಯ ಅನುಷ್ಠಾನವನ್ನು ರಾಜ್ಯ ಸರಕಾರ ವಿರೋಧಿಸಿದೆ. ರಾಜ್ಯ ಸರಕಾರ ವಿರೋಧಿಸಿದಾಕ್ಷಣ, ಅಲ್ಲಿನ ಗಡಿ ಭಾಗದ ಜನರೂ ಆ ಯೋಜನೆಗಳನ್ನು ವಿರೋಧಿಸ ಬೇಕಾಗಿಲ್ಲ . ಅನಾರೋಗ್ಯಕ್ಕೆ 'ಭಾಷೆ, ಗಡಿ'ಯ ಹಂಗಿಲ್ಲ. ಅದು ಕನ್ನಡಿಗರು, ಮರಾಠಿಗರು ಎಂದು ಹುಡುಕಿಕೊಂಡು ಬರುವುದಿಲ್ಲ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗಡಿಭಾಗದಲ್ಲಿರುವ ಜನರಿಗೆ ಅನ್ನಿಸಿದರೆ ರಾಜ್ಯ ಸರಕಾರ ಏನು ಮಾಡುತ್ತದೆ? ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆಯೆ? ಮಹಾರಾಷ್ಟ್ರ ಸರಕಾರ ಅನುಷ್ಠಾನಗೊಳಿಸುವ ಯೋಜನೆಯನ್ನು ತಿರಸ್ಕರಿಸಬೇಕಾದರೆ, ಅಲ್ಲಿ ನ ಜನರಿಗೆ ಕರ್ನಾಟಕ ಸರಕಾರ ತನ್ನ ಪಾಲಿನ ಜನಪರ ಯೋಜನೆಗಳನ್ನು ಪ್ರತಿಯಾಗಿ ಘೋಷಿಸಬೇಕು. ಅವರ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಯ ವಿಷಯದಲ್ಲಿ ಪೈಪೋಟಿ ನಡೆಸಬೇಕು.

ಕರ್ನಾಟಕ ರಾಜ್ಯದ ನೆರಳಲ್ಲಿ ನಾವು ನೆಮ್ಮದಿಯಿಂದಿರುತ್ತೇವೆ ಎಂಬ ಭಾವನೆ ಮೊದಲು ಗಡಿ ಭಾಗದಲ್ಲಿ ಬದುಕುತ್ತಿರುವ ಜನರಿಗೂ ಅನ್ನಿಸಬೇಕು. ಆಗ ಅವರು ಮಹಾರಾಷ್ಟ್ರದ ಯಾವುದೇ ಆಮಿಷಗಳಿಗೂ ಬಲಿ ಬೀಳುವುದಿಲ್ಲ. ಈ ನಿಟ್ಟಿನಲ್ಲಿ ಮೊದಲು ಸರಕಾರ ತನ್ನ ಯೋಜನೆಗಳು ಎಷ್ಟರಮಟ್ಟಿಗೆ ಗಡಿಭಾಗದ ಜನರಿಗೆ ತಲುಪಿದೆ ಎನ್ನುವುದರ ಬಗ್ಗೆ ಸಮೀಕ್ಷೆ ನಡೆಸಬೇಕು. ಗಡಿಭಾಗದಲ್ಲಿ ಇನ್ನೂ ಕನ್ನಡತನವನ್ನು ಉಳಿಸಿಕೊಂಡಿರುವ ಕನ್ನಡಿಗರ ನೆರವಿಗೆ ಮುಂದಾಗಿ, ಬೆಳಗಾವಿಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕು. ಇದೇ ಸಂದರ್ಭದಲ್ಲಿ, ಮುಂಬಯಿ ಸೇರಿದಂತೆ ಇಡೀ ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕನ್ನಡಿಗರು ಬದುಕುತ್ತಿದ್ದಾರೆ. ಕರ್ನಾಟಕ ಸರಕಾರದಿಂದ ಅವರೂ ಬೇರೆ ಬೇರೆ ವಿಷಯ ಗಳಿಗಾಗಿ ಸಹಾಯ ಯಾಚಿಸುತ್ತಿದ್ದಾರಾದರೂ, ಸರಕಾರ ಆ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ಕನ್ನಡ ಸಂಘಟನೆಗಳು ದೂರುತ್ತಿವೆ. ಆ ಹೊರನಾಡ ಕನ್ನಡಿಗರ ಬೇಡಿಕೆಗಳಿಗೆ ಕಿವಿಯಾಗುವ ಮೂಲಕ, ಕರ್ನಾಟಕ ಸರಕಾರ ಮಹಾರಾಷ್ಟ್ರದ ಜೊತೆಗೆ ಸ್ಪರ್ಧೆಗಿಳಿಯಬೇಕು. ಇಲ್ಲವಾದರೆ ಮಹಾರಾಷ್ಟ್ರದಲ್ಲಿರುವ ಅಷ್ಟೂ ಕನ್ನಡಿಗರು ನಿಧಾನಕ್ಕೆ ಮಹಾರಾಷ್ಟ್ರದ ಮುಖ್ಯವಾಹಿನಿಯಲ್ಲಿ ಒಂದಾಗಿ ಕರ್ನಾಟಕದಿಂದ ಶಾಶ್ವತವಾಗಿ ದೂರಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)