varthabharthi


ನಿಮ್ಮ ಅಂಕಣ

ಸುದೀರ್ಘ ಮುಷ್ಕರದಿಂದ ಪ್ರಯಾಣಿಕರು ಪರದಾಡಬೇಕಾದೀತು

ವಾರ್ತಾ ಭಾರತಿ : 18 Mar, 2023
ಶಹೀನ್ ಶಾಸ, ವಿನಯ್ ಕೆ. ಶ್ರೀನಿವಾಸ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ (ಬಿಬಿಪಿವಿ)

ಮಾನ್ಯರೇ,

ಕರ್ನಾಟಕದ RTC ನೌಕರರ ಸಂಘಗಳು ಮತ್ತೊಮ್ಮೆ ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಇದು ಮತ್ತೊಂದು ಸುದೀರ್ಘ ಮುಷ್ಕರವಾಗಿ ಪ್ರಯಾಣಿಕರು ಪರದಾಡುವಂತಾಗುತ್ತದೆ ಮತ್ತು ನಿಗಮವು ಮತ್ತಷ್ಟು ಅಸ್ತವ್ಯಸ್ತವಾಗುತ್ತದೆ ಎಂಬ ಆತಂಕವಿದೆ.

2021ರಲ್ಲಿ ನಡೆದ 14 ದಿನಗಳ ಮುಷ್ಕರ ಮತ್ತು ಅದರಿಂದ ಪ್ರಯಾಣಿಕರಿಗೆ ಉಂಟಾದ ಕಷ್ಟವನ್ನು ನಾವು ಇನ್ನೂ ಮರೆತಿಲ್ಲ. ವಾಸ್ತವವಾಗಿ, 2020-21ರಲ್ಲಿ ಸಾರಿಗೆ ನಿಗಮದ ನೌಕರರ ಮುಷ್ಕರಕ್ಕೆ ಕಾರಣವಾದ ಅದೇ ಸಮಸ್ಯೆಗಳು ಪ್ರಸಕ್ತ ಮುಷ್ಕರಕ್ಕೂ ಮತ್ತೊಮ್ಮೆ ಕರೆ ನೀಡಿರುವುದು ಗಮನಾರ್ಹ ಸಂಗತಿ. ಹಲವು ಬಾರಿ ಭರವಸೆ ನೀಡಿ ಎರಡು ವರ್ಷಗಳಿಂದ ಈ ಬೇಡಿಕೆಗಳನ್ನು ಈಡೇರಿಸದೆ ಇರುವುದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾರಣವಾಗಿದೆ. ಇದು ವರ್ಷಾಂತ್ಯದ ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ. ಸರಕಾರವು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ತುರ್ತಾಗಿ ಮಾತುಕತೆಗಳನ್ನು ನಡೆಸುವುದು ಮತ್ತು ಭರವಸೆಯಂತೆ ವೇತನ ಪರಿಷ್ಕರಣೆ ಕುರಿತು ಸಮಾಧಾನಕರ ನಿರ್ಣಯವನ್ನು ಕಂಡುಕೊಳ್ಳುವುದು ಮತ್ತು ಮುಷ್ಕರವನ್ನು ತಪ್ಪಿಸುವುದು ಅತ್ಯಗತ್ಯ.

BMTC ಸಿಬ್ಬಂದಿಗೆ ಸಿಗಬೇಕಿದ್ದ 4 ವರ್ಷಗಳಿಗೊಮ್ಮೆ ಅಗುವ ವೇತನ ಪರಿಷ್ಕರಣೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ಮಾಡಲಾಗಿಲ್ಲ. ಕಡಿಮೆ ಪ್ರಯಾಣಿಕರು ಮತ್ತು ಅದರ ಪರಿಣಾಮವಾಗಿ ಆರ್ಥಿಕ ಸಂಕಷ್ಟವು ಸಂಬಳ ಪಾವತಿಯಲ್ಲಿ ದೀರ್ಘ ವಿಳಂಬಕ್ಕೆ ಕಾರಣವಾಯಿತು. ಇದು ಡಿಪೋ ಮಟ್ಟದಲ್ಲಿ ಈಗಾಗಲೇ ಇದ್ದ ಒತ್ತಡದ ಕೆಲಸದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಿತು. ಫ್ರಂಟ್‌ಲೈನ್‌ನಲ್ಲಿ ಕೆಲಸ ಮಾಡಿದ ತಳಮಟ್ಟದ ಸಿಬ್ಬಂದಿಗೆ ಸುರಕ್ಷತಾ ಪರಿಕರಗಳನ್ನು ನೀಡದಿರುವುದು ಮತ್ತು ಕೋವಿಡ್‌ನಿಂದ ಸಾವನ್ನಪ್ಪಿದ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರವನ್ನು ಒದಗಿಸದಿರುವುದು 2020ರಲ್ಲಿ ಸಿಬ್ಬಂದಿಯಲ್ಲಿ ಹೆಚ್ಚಿನ ಅಸಮಾಧಾನಕ್ಕೆ ಕಾರಣವಾಯಿತು. ಇಂತಹ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳು 2020 ಮತ್ತು 2021ರಲ್ಲಿಯೂ ಮುಷ್ಕರಕ್ಕೆ ಇಳಿದರು.
ಕೆಲವು ಬೇಡಿಕೆಗಳಿಗೆ ಸರಕಾರ ಮತ್ತು ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದರೂ, ಹಲವು ಬೇಡಿಕೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಮುಷ್ಕರ ನಡೆಸಿ ಕೆಲಸದಿಂದ ವಜಾಗೊಂಡ ಹಲವು ಸಿಬ್ಬಂದಿ ಮತ್ತೆ ಪ್ರವೇಶ ಪಡೆದಿಲ್ಲ. ಮತ್ತೆ ಸೇರಿದವರನ್ನು ಷರತ್ತುಗಳ ಅಡಿಯಲ್ಲಿ ಇರಿಸಲಾಗಿದೆ. ವೇತನ ಪರಿಷ್ಕರಣೆ ಬೇಡಿಕೆ ಕುರಿತು ಇದುವರೆಗೂ ಸಮಾಧಾನಕರ ಒಪ್ಪಂದಕ್ಕೆ ಬಂದಿಲ್ಲ. ಅವರ ವೇತನ ಪರಿಷ್ಕರಣೆ 3 ವರ್ಷಗಳ ಕಾಲ ಬಾಕಿ ಇದ್ದರೂ, 2016ರಲ್ಲಿ ಪಡೆಯುತ್ತಿದ್ದ ವೇತನವನ್ನೇ ಇಂದೂ ಪಡೆಯುತ್ತಿದ್ದಾರೆ. ಪರಿಸ್ಥಿತಿ ಈಗ ಅಸಹನೀಯವಾಗುತ್ತಿದೆ. ಕಾರ್ಮಿಕರ ಸಂಘಗಳೊಂದಿಗೆ ತುರ್ತಾಗಿ ಇತ್ಯರ್ಥಕ್ಕೆ ಬರಲು ಸರಕಾರ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಈಗಲೇ ತೆಗೆದುಕೊಳ್ಳಬೇಕು.
ಯಾವುದೇ ಸಮಯದಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಮಾದರಿ ನೀತಿ ಸಂಹಿತೆ ತಕ್ಷಣವೇ ಜಾರಿಯಾಗಲಿದೆ. ಒಂದೊಮ್ಮೆ ಹೀಗಾದರೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವ ಪರಿಸ್ಥಿತಿಯಲ್ಲಿ ಸರಕಾರ ಇರುವುದಿಲ್ಲ. 2021ರ 14 ದಿನಗಳ ಮುಷ್ಕರದ ಸಂದರ್ಭದಲ್ಲಿ ಉಪಚುನಾವಣೆಗಾಗಿ ನೀತಿ ಸಂಹಿತೆ ಪ್ರಾರಂಭವಾದಾಗ ನಾವು ಅದೇ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇಂದೂ ಸಹ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗುವ ಮುನ್ನವೇ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ. ಇದು ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದು ನೌಕರರು, ನಿಗಮಗಳು ಮತ್ತು ಸರಕಾರದ ನಡುವಿನ ನಂಬಿಕೆಯನ್ನು ಹಾಳುಮಾಡುತ್ತದೆ. ಮುಷ್ಕರವನ್ನು ತಡೆಯಲು, ಸರಕಾರವು ಕಾರ್ಮಿಕರೊಂದಿಗೆ ಸಮಂಜಸವಾದ ಇತ್ಯರ್ಥಕ್ಕೆ ಬರಲು ತುರ್ತಾಗಿ ಮಾತುಕತೆ ನಡೆಸಬೇಕೆಂದು ನಾವು ಮನವಿ ಮಾಡುತ್ತೇವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)