varthabharthi


ಕರ್ನಾಟಕ

ವಿಧಾನಸಭಾ ಚುನಾವಣೆಗೆ ತಾನು ಸ್ಫರ್ಧಿಸುವ ಕ್ಷೇತ್ರದ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?

ವಾರ್ತಾ ಭಾರತಿ : 18 Mar, 2023

ಸಿದ್ದರಾಮಯ್ಯ 

ಬೆಂಗಳೂರು: ‘ಪಕ್ಷದ ವರಿಷ್ಠರು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸೂಚಿಸಿದರೆ ವರುಣಾ, ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ತಿಳಿಸಿದರೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿಂದ ನಾನು ಸ್ಪರ್ಧಿಸುವೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಂಬರಲಿರುವ ವಿಧಾನಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಾನು ಯಾವುದೇ ರೀತಿಯಲ್ಲಿಯೂ ಉದ್ವಿಗ್ನತೆ(ಟೆನ್ಷನ್)ಗೆ ಒಳಗಾಗಿಲ್ಲ. ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕೆಂದು ಹೈಕಮಾಂಡ್ ನಿರ್ಧಾರ ಮಾಡಬೇಕು. ಮಾ.22ರ ಯುಗಾದಿ ಹಬ್ಬದ ದಿನವೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ’ ಎಂದು ನುಡಿದರು.

‘ಹಾಲಿ ಶಾಸಕರೆಲ್ಲರಿಗೂ ಇನ್ನೂ ಟಿಕೆಟ್ ಅಂತಿಮವಾಗಿಲ್ಲ. ಒಂದು ಹೆಸರಿರುವ ಮತ್ತು ಗೊಂದಲ ಇಲ್ಲದ ಕಡೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಇದೀಗ ವರುಣಾ ಕ್ಷೇತ್ರದಿಂದ ಯತೀಂದ್ರ ಸ್ಪರ್ಧೆ ಮಾಡಲಿದ್ದು, ಒಂದೇ ಹೆಸರು ಅಂತಿಮಗೊಳಿಸಲಾಗಿದೆ’ ಎಂದ ಅವರು, ‘ಬಿಜೆಪಿಯ ಇನ್ನಷ್ಟು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಒತ್ತಡವಿದೆ. ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ನಾನು ಕೋಲಾರದಲ್ಲಿ ಮನೆ ಮಾಡಿಲ್ಲ. ಆದರೆ, ಆ ಕ್ಷೇತ್ರದಲ್ಲಿ ಮನೆ ನೋಡಿದ್ದು ನಿಜ. ನಾಳೆ ಬೆಳಗಾವಿ ಪ್ರವಾಸದ ಹಿನ್ನೆಲೆಯಲ್ಲಿ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ. ನಾನು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಬೆಂಗಳೂರು-ಮೈಸೂರು ಹೆದ್ದಾರಿ ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿಲ್ಲ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ರಸ್ತೆ ಉದ್ಘಾಟನೆ ಮಾಡಲಾಗಿದೆ. ಒಂದೇ ಮಳೆಗೆ ರಸ್ತೆ ಕೆರೆಯಂತೆ ಆಗಿದೆ. ಶೇ.20ರಷ್ಟು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಟೀಕಿಸಿದ ಅವರು, ‘ಕಾಂಗ್ರೆಸ್ ಅವಧಿಯಲ್ಲಿ ರಾಜ್ಯ ಹೆದ್ದಾರಿಯಾಗಿದ್ದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಲಾಯಿತು’ ಎಂದು ತಿಳಿಸಿದರು.

‘ಕೋಲಾರ ವಿಧಾನಸಭಾ ಕ್ಷೇತ್ರ ಹದವಾಗಿದ್ದು, ಈ ಕಾರಣಕ್ಕಾಗಿ ಸಿದ್ದರಾಮಯ್ಯನವರಿಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮನವಿ ಮಾಡಿದ್ದೇವೆ. ಸಿದ್ದರಾಮಯ್ಯನವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಕೋಲಾರ ಸ್ಪರ್ಧೆ ಸುರಕ್ಷಿತ ಎಂದು ನಾವು ಅವರಲ್ಲಿ ಹೇಳಿದ್ದೇವೆ. ನೀವು ನಾಮಪತ್ರ ಸಲ್ಲಿಕೆ ಮಾಡಿ, ನಾವು ನೋಡಿಕೊಳ್ಳುತ್ತೇವೆ ಎಂದಿದ್ದೇವೆ. ಕೋಲಾರದಿಂದ ಸ್ಪರ್ಧೆಗೆ ಮತ್ತೊಮ್ಮೆ ಹೈಕಮಾಂಡ್ ಬಳಿ ಮಾತನಾಡಿ ಎಂದು ಮನವಿ ಮಾಡಿದ್ದೇವೆ’
-ಎಂ.ಆರ್.ಸೀತಾರಾಮ್ ಕಾಂಗ್ರೆಸ್ ಪಕ್ಷದ ಮುಖಂಡ

ಇದನ್ನೂ ಓದಿ: ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯಲಿದ್ದಾರೆಯೇ ಸಿದ್ದರಾಮಯ್ಯ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)