varthabharthi


ರಾಷ್ಟ್ರೀಯ

ರಾಮನಿಗಿಂತ ರಾವಣ ಶ್ರೇಷ್ಠ ಕಾಲ್ಪನಿಕ ವ್ಯಕ್ತಿ: ಬಿಹಾರ ಮಾಜಿ ಸಿ.ಎಂ ಜಿತನ್ ರಾಮ್ ಮಾಂಝಿ

ವಾರ್ತಾ ಭಾರತಿ : 18 Mar, 2023

ಪಾಟ್ನಾ, ಮಾ. 18: ರಾಮನಿಗಿಂತ ರಾವಣ ‘‘ಶ್ರೇಷ್ಠ ಕಾಲ್ಪನಿಕ ವ್ಯಕ್ತಿ’’ ಎಂದು ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) (ಎಚ್‌ಎಎಂ)ದ ಸ್ಥಾಪಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಶುಕ್ರವಾರ ಪ್ರತಿಪಾದಿಸಿದ್ದಾರೆ.

ಈ ಹಿಂದೆ ಅವರು ಮಹಾಕಾವ್ಯ ‘ರಾಮ ಚರಿತ ಮಾನಸ’ದ ಕುರಿತ ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಈಗ ಅವರು ರಾಮ, ರಾವಣರ ಕುರಿತ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
 
‘‘ರಾಮ ಹಾಗೂ ರಾವಣ ಕಾಲ್ಪನಿಕ ಕಥೆಯ ಕಾಲ್ಪನಿಕ ವ್ಯಕ್ತಿಗಳು ಎಂದು ನಾನು ಭಾವಿಸುತ್ತೇನೆ. ಕಥೆಯ ಪ್ರಕಾರ ರಾಮನಿಗಿಂತ ರಾವಣ ಶ್ರೇಷ್ಠ ವ್ಯಕ್ತಿ’’ ಎಂದು ದಲಿತ ನಾಯಕ ಮಾಂಝಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಮನಿಗಿಂತ ರಾವಣ ಶ್ರೇಷ್ಠ ವ್ಯಕ್ತಿ. ಯಾಕೆಂದರೆ ರಾವಣ ದೈವಿಕ ಶಕ್ತಿಯಿಂದ ಯಾವುದೇ ನೆರವು ಪಡೆಯಲಿಲ್ಲ. ಆದರೆ ರಾಮನಿಗೆ ಬಿಕ್ಕಟ್ಟಿನ ಸಂದರ್ಭ ದೈವಿಕ ಶಕ್ತಿ ದೊರೆಯಿತು ಎಂದು ಅವರು ಹೇಳಿದ್ದಾರೆ.

‘‘ನಾನು ರಾಮ ಕಾಲ್ಪನಿಕ ವ್ಯಕ್ತಿ ಎಂಬ ಸತ್ಯವನ್ನು ಹೇಳುತ್ತಿದ್ದೇನೆ. ಹಿಂದೆ ಜನಪ್ರಿಯ ಲೇಖಕ ಹಾಗೂ ಬುದ್ಧಿಜೀವಿ ರಾಹುಲ ಸಾಂಕೃತಾಯನ ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳಿದ್ದರು. ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕ್ ಕೂಡ ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳಿದ್ದಾರೆ. ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಉಲ್ಲೇಖಿಸಲಾಗಿದೆ’’ ಎಂದು ಮಾಂಝಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)