varthabharthi


ಅಂತಾರಾಷ್ಟ್ರೀಯ

ನಿತ್ಯಾನಂದನ ಕಾಲ್ಪನಿಕ ದೇಶದ ಜೊತೆಗಿನ ಸಹೋದರಿ ನಗರ ಒಪ್ಪಂದ ರದ್ದುಪಡಿಸಿದ ನೆವಾರ್ಕ್ ನಗರ

​ ಅಮೆರಿಕದ 30ಕ್ಕೂ ಅಧಿಕ ನಗರಗಳ ಜೊತೆ ಸಾಂಸ್ಕೃತಿಕ ಒಪ್ಪಂದ ಮಾಡಿಕೊಂಡಿದ್ದ ಕೈಲಾಸ

ವಾರ್ತಾ ಭಾರತಿ : 18 Mar, 2023

PHOTO: NDTV 

ನ್ಯೂಯಾರ್ಕ್,ಮಾ.18; ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಕಾಲ್ಪನಿಕ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ವು ಈವರೆಗೆ ಅಮೆರಿಕದ 30 ನಗರಗಳ ಜೊತೆ ಸಾಂಸ್ಕೃತಿಕ ಪಾಲುದಾರಿಕೆಯ ಒಪ್ಪಂದಕ್ಕೆ ಸಹಿಹಾಕಿರುವುದಾಗಿ ಫಾಕ್ಸ್ ಸುದ್ದಿಸಂಸ್ಥೆಯ ವರದಿಯೊಂದು ತಿಳಿಸಿದೆ. ಕಾಲ್ಪನಿಕ ‘ಕೈಲಾಸ’ ದೇಶದ ಜೊತೆಗೆ ತಾನು ಏರ್ಪಡಿಸಿಕೊಂಡಿದ್ದ ‘ಸಹೋದರಿ ನಗ’ ಒಪ್ಪಂವನ್ನು ರದ್ದುಪಡಿಸಿರುವುದಾಗಿ ಅಮೆರಿಕದ ನ್ಯೂಜೆರ್ಸಿ ರಾಜ್ಯದ ನೆವಾರ್ಕ್ ನಗರ ಘೋಷಿಸಿದ ಕೆಲವು ದಿನಗಳ ಬಳಿಕ ಈ ವರದಿ ಪ್ರಕಟವಾಗಿದೆ.

ನೆವಾರ್ಕ್ ನಗರ ಹಾಗೂ ನಕಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ದ ನಡುವೆ ಈ ವರ್ಷದ ಜನವರಿ 12ರಂದು ಸಹೋದರಿ ನಗರ ಒಪ್ಪಂದ ಏರ್ಪಟ್ಟಿತ್ತು. ನೆವಾರ್ಕ್ನ ಸಿಟಿ ಹಾಲ್ ನಲ್ಲಿ ಸಹಿ ಸಮಾರಂಭ ನಡೆದಿತ್ತು.

ನಿತ್ಯಾನಂದನ ಕಾಲ್ಪನಿಕ ರಾಷ್ಟ್ರ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಜೊತೆ 30ಕ್ಕೂ ಅಧಿಕ ನಗರಗಳು ಸಾಂಸ್ಕೃತಿಕ ಪಾಲುದಾರಿಕೆಯ ಒಪ್ಪಂದಕ್ಕೆ ಸಹಿಹಾಕಿವೆ. ಅಮೆರಿಕದ ರಿಚ್ಮಂಡ್, ವರ್ಜಿನಿಯಾ, ಡೇಟನ್, ಬುಯೆನಾ ಪಾರ್ಕ್, ಫ್ಲೊರಿಡಾಗಳು ‘ಕೈಲಾಸ’ದ ಜೊತೆ ಒಪ್ಪಂದಕ್ಕೆ ಸಹಿಹಾಕಿರುವ ನಗರಗಳಲ್ಲಿ ಸೇರಿವೆ ಎಂದು ವರದಿ ಹೇಳಿದೆ.

ಮೇಯರ್ ಗಳು ಅಥವಾ ನಗರ ಮಂಡಳಿಗಳು ಮಾತ್ರವಲ್ಲದೆ ಅಮೆರಿಕದ ಫೆಡರಲ್ ಸರಕಾರವನ್ನು ನಡೆಸುತ್ತಿರುವ ವ್ಯಕ್ತಿಗಳು ಕೂಡಾ ನಿತ್ಯಾನಂದನ ನಕಲಿ ರಾಷ್ಟ್ರಕ್ಕೆ ಮರುಳಾಗಿದ್ದಾರೆ ಎಂದು ವರದಿ ಹೇಳಿದೆ. ಅಮೆರಿಕದ ಕಾಂಗ್ರೆಸ್ನ ಇಬ್ಬರು ಸದಸ್ಯರು ಕೈಲಾಸಕ್ಕೆ ವಿಶೇಷ ಮಾನ್ಯತೆಯನ್ನು ನೀಡಿದ್ದಾರೆ. ಅಎರಿಕ ಕಾಂಗ್ರೆಸ್ನ ವಿನಿಯೋಗ ಸಮಿತಿಯ ಸದಸ್ಯೆಯೂ ಆಗಿರುವ ಕ್ಯಾಲಿಫೋರ್ನಿಯಾದ ಕಾಂಗ್ರೆಸ್ ಸದಸ್ಯೆ ನೊರ್ಮಾ ಟೊರೆಸ್ ಅವರಲ್ಲೊಬ್ಬರು ಎಂದು ವರದಿ ತಿಳಿಸಿದೆ.

‘‘ಹೀಗೆ ನಮ್ಮ ತೆರಿಗೆಯ ಹಣವನ್ನು ಹೇಗೆ ವಿನಿಯೋಗಿಸಬೇಕೆಂಬುದನ್ನು ನಿರ್ಧರಿಸುವ ವ್ಯಕ್ತಿಯು, ನಕಲಿ ರಾಷ್ಟ್ರವೊಂದರ, ಅತ್ಯಾಚಾರ ಆರೋಪಿ ಗುರುವಿನಿಂದ ಮೋಸ ಹೋಗಿದ್ದಾರೆ’’ ಫಾಕ್ಸ್ ಸುದ್ದಿವಾಹಿನಿಯ ನಿರೂಪಕರೊಬ್ಬರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನೆವಾರ್ಕ್ ನಗರದ ಸಂವಹನದ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗಾರೊಫಾಲೊ ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ, ‘‘ ಕೈಲಾಸವನ್ನು ಆವರಿಸಿಕೊಂಡಿರುವ ವಿವಾದಗಳ ಬಗ್ಗೆ ನಮಗೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನೆವಾರ್ಕ್ ನಗರವು ತಕ್ಷಣವೇ ಕಾರ್ಯಪ್ರವೃತ್ತಿವಾಗಿದ್ದು,, ಸಹೋದರಿ ನಗರ ಒಪ್ಪಂದವನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)