ಕರ್ನಾಟಕ
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ
ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 23ನೇ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ-2023’ಕ್ಕೆ ವರ್ಣರಂಜಿತ ಕಾರ್ಯಕ್ರಮದಲ್ಲಿ ನಾಪೋಕ್ಲುವಿನ ಚೆರಿಯಪರಂಬು ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುಕ್ತ ಚಾಲನೆ ನೀಡಿದರು.
ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ಭಾಷೆಯಲ್ಲಿ ಮಾತು ಪ್ರಾರಂಭಿಸಿದ ಮುಖ್ಯಮಂತ್ರಿ ನಶಿಸಿ ಹೋಗುತ್ತಿರುವ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಬೆಸೆಯಲು ಕುಟುಂಬಗಳ ನಡುವಿನ ಹಾಕಿ ಸಹಕಾರಿಯಾಗಿದೆ ಎಂದರು.
ಕುಟುಂಬದಲ್ಲಿ ಸದಸ್ಯರ ಸಂಬಂಧ ಉತ್ತಮವಾಗಿದ್ದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇದು ಭಾರತೀಯ ನಾಗರಿಕತೆಯಾಗಿದ್ದು, ಕೊಡವ ಕೌಟುಂಬಿಕ ಹಾಕಿ ಉತ್ಸವ ಇದಕ್ಕೆ ಸೂಕ್ತ ನಿದರ್ಶನವಾಗಿದೆ. ಹಾಕಿ ಕ್ರೀಡೆಯ ಮೂಲಕ ಕೊಡವರು ತಮ್ಮಲ್ಲಿನ ಉತ್ತಮ ಕೌಟುಂಬಿಕ ಸಂಬಂಧಗಳಿಗೆ ಮಾದರಿಯಾಗಿದ್ದಾರೆ. ಕೆ.ಜಿ.ಬೋಪಯ್ಯ ಅವರು ಹಾಕಿ ಕ್ರೀಡೆಗೆ ಸೂಕ್ತ ಅನುದಾನ ತರುವಲ್ಲಿ ಶ್ರಮಿಸಿದ್ದಾರೆ. ನನ್ನಲ್ಲಿ ಬೋಪಯ್ಯ ಅವರ ನಿಯೋಗ ಬಂದಾಗ 1 ಕೋಟಿ ಕೇಳಿದ್ದರು. ತಕ್ಷಣವೇ ನಾನು 1 ಕೋಟಿ ಮಂಜೂರು ಮಾಡಿದ್ದೇನೆ ಎಂದರು.
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ತಕ್ಷಣ ಆದೇಶ ಹೊರಡಿಸುತ್ತೇನೆ ಣೆಂದು ಮುಖ್ಯಮಂತ್ರಿ ಘೋಷಿಸಿದರು.
ಹಾಕಿ ಉತ್ಸವದ ಅಂಗವಾಗಿ ಇಂದು ಬೆಳಗ್ಗಿನಿಂದಲೆ ನಾಪೋಕ್ಲು ಚೆರಿಯಪರಂಬು ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಸಂಜೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳನ್ನು ಅಪ್ಪಚಟ್ಟೋಳಂಡ ಕುಟುಂಬದ ಪರವಾಗಿ ಕೊಡಗಿನ ಸಾಂಪ್ರದಾಯಿಕ ಉಡುಪು ತೊಡಿಸಿ, ವಡಿ ಕತ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್ಸಿ ಸುಜಾ ಕುಶಾಲಪ್ಪ, ಅಪ್ಪಚೆಟ್ಟೋಂಡ ಹಾಕಿ ಉತ್ಸವ ಸಮಿತಿಯ ಪ್ರಮುಖರು ಹಾಜರಿದ್ದರು.
ಕೊಡವ ಸಮುದಾಯದ 336 ತಂಡಗಳ ನಡುವಣ ಪಂದ್ಯಾವಳಿ ಮುಂದಿನ 23 ದಿನಗಳ ಕಾಲ ಹಾಕಿ ಪ್ರಿಯರನ್ನು ತನ್ನಡೆಗೆ ಸೆಳೆಯಲಿದೆ. ಇದೇ ಮೊಟ್ಟ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಂಡಿರುವುದು ವಿಶೇಷ.
ಆಕರ್ಷಕ ಮೆರವಣಿಗೆ- ಹಾಕಿ ಉತ್ಸವದ ಅಂಗವಾಗಿ ಇಂದು ಬೆಳಗ್ಗೆ ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಅಪ್ಪಚೆಟ್ಟೋಳಂಡ ಈರಪ್ಪ ಅವರ ನೇತೃತ್ವದಲ್ಲಿ, ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಸಮುದಾಯದ ಪುರುಷರು, ಮಹಿಳೆಯರು ಮಕ್ಕಳು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು.
1997ರಲ್ಲಿ ಮೊಟ್ಟ ಮೊದಲ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಿಸಿದ ಪಾಂಡಂಡ ಕುಟುಂಬದಿಂದ ಇಲ್ಲಿಯವರೆಗೆ ಪಂದ್ಯಾವಳಿ ಆಯೋಜಿಸಿರುವ ಒಟ್ಟು 23 ತಂಡಗಳ ಪ್ರತಿನಿಧಿಗಳು ಆಕಾಶಕ್ಕೆ ಗುಂಡು ಹಾರಿಸುವುದರೊಂದಿಗೆ ಹಲ ಸಂಖ್ಯೆಯಲ್ಲ ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಪಂದ್ಯಾವಳಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.
ಧ್ವಜಾರೋಹಣ-ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು ಅಕಾಡೆಮಿಯ ಧ್ವಜಾರೋಹಣ ನೆರವೇರಿಸಿದರೆ, ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಧ್ವಜವನ್ನು ಕುಟುಂಬದ ಪಟ್ಟೆದಾರ ಅಪ್ಪಚೆಟ್ಟೋಳಂಡ ಈರಪ್ಪ ಅವರು ಆರೋಹಿಸಿದರು.
ಜಿಲ್ಲೆಯ ಸಮಮಸ್ಯೆಗಳನ್ನು ಸಿಎಂ ಗಮನಕ್ಕೆ ತನ್ನಿ- ಈ ಸಂದರ್ಭ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಮಾತನಾಡಿ, ಸಮಾರಂಭಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಈ ಸಂದರ್ಭ ಜಿಲ್ಲೆಯ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವುವಂತೆ ತಿಳಿಸಿ, ಈ ಬಾರಿಯ ಪಮದ್ಯಾವಳಿಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಂಡಿರುವುದು ನಿಜಕ್ಕೂ ಸಂತಸವನ್ನು ತಂದಿದೆಯೆಂದು ನುಡಿದರು.
ಬೆಳ್ಳಿ ರೋಲಿಂಗ್ ಟ್ರೋಫಿ- ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ಹಾಕಿ ಪಂದ್ಯಾವಳಿಯ ಜನಕ ಪಾಂಡಂಡ ಕುಟ್ಟಪ್ಪ ಅವರ ಜ್ಞಾಪಕಾರ್ಥ ಬೆಳ್ಳಿಯ ರೋಲಿಂಗ್ ಕಪ್ನ್ನು ನೀಡುತ್ತಿರುವುದಾಗಿ ತಿಳಿಸಿದರು.
ಮುಂದಿನ 2024 ನೇ ಸಾಲಿನಲ್ಲಿ ಕುಂಡ್ಯೋಳಂಡ ತಂಡ ನಾಪೋಕ್ಲುವಿನಲ್ಲಿ, 2025ನೇ ಸಾಲಿನಲ್ಲಿ ಮುದ್ದಂಡ ಕುಟುಂಬಸ್ಥರು ಮಡಿಕೇರಿಯಲ್ಲಿ ಕೌÀಟುಂಬಿಕ ಹಾಕಿ ಪಂದ್ಯಾವಳಿ ನಡೆಸಲಿರುವುದಾಗಿ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ ಸಮಿತಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ, ಪದ್ಮಶ್ರೀ ರಾಣಿ ಮಾಚಯ್ಯ, ಪ್ರಮುಖರಾದ ರವಿ ಪೆಮ್ಮಯ್ಯ, ಮಿಥುನ್ ಮಾಚಯ್ಯ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ