varthabharthi


ಪ್ರಚಲಿತ

ಚುನಾವಣೆ ಗೆಲುವಿಗೆ ನಾನಾ ಪ್ರಹಸನಗಳು

ವಾರ್ತಾ ಭಾರತಿ : 20 Mar, 2023
ಸನತ್ ಕುಮಾರ್ ಬೆಳಗಲಿ

ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರದ ಏಳು ದಶಕಗಳ ನಂತರ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಸಂವಿಧಾನ ಅಪಾಯದಲ್ಲಿದೆ.ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಉಡುಪು, ಧಾರ್ಮಿಕತೆ, ರಾಷ್ಟ್ರೀಯತೆಗಳ ಅಪರೂಪದ ದೇಶವಾದ ಭಾರತ ಸುರಕ್ಷಿತವಾಗಿ ಉಳಿಯಬೇಕಾದರೆ ಬಾಬಾ ಸಾಹೇಬರ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾದ ಅಪಾಯವನ್ನು ಹಿಮ್ಮೆಟ್ಟಿಸಬೇಕು. ಹೊಸ ಪೀಳಿಗೆಯ ತರುಣರ ಮೆದುಳಿನಲ್ಲಿ ಗೂಡು ಕಟ್ಟಿದ ಕೋಮು ವಿಷವನ್ನು ತೆಗೆಯಬೇಕಾಗಿದೆ. ಭಾರತ ಹಿಂದೆ ಕೂಡ ಇಂಥ ಸವಾಲುಗಳನ್ನು ಎದುರಿಸಿ ಸುರಕ್ಷಿತವಾಗಿ ಉಳಿದಿದೆ.ನನಗೆ ತಿಳುವಳಿಕೆ ಬಂದಾಗಿನಿಂದ ಕಳೆದ ಆರೂವರೆ ದಶಕಗಳಿಂದ ಅನೇಕ ಚುನಾವಣೆ ಮತ್ತು ಉಪಚುನಾವಣೆಗಳನ್ನು ನೋಡಿದ್ದೇನೆ. ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದೇನೆ. ಇಂದಿರಾಗಾಂಧಿ, ಜ್ಯೋತಿ ಬಸು, ಭೂಪೇಶ್ ಗುಪ್ತಾ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವಾರು ಘಟಾನುಘಟಿಗಳ ಭಾಷಣಗಳನ್ನು ಕೇಳಿದ್ದೇನೆ. ಜಾರ್ಜ್ ಫೆರ್ನಾಂಡಿಸ್, ಕೆ.ಎಚ್.ರಂಗನಾಥ, ಬಿ.ವಿ.ಕಕ್ಕಿಲ್ಲಾಯ ಮುಂತಾದ ನಾಯಕರ ಜೊತೆ ತಾಸುಗಟ್ಟಲೆ ಮಾತಾಡಿದ್ದೇನೆ. ಆದರೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ಚುನಾವಣೆಯ ಅಧೋಗತಿಯನ್ನು ಹಿಂದೆಂದೂ ಕಂಡಿಲ್ಲ.

ಹಿಂದಿನ ಚುನಾವಣೆಗಳಲ್ಲಿ ಆಡಳಿತ ಪಕ್ಷದ ನಾಯಕರು, ಕಾರ್ಯಕರ್ತರು ತಮ್ಮ ಸರಕಾರದ ಸಾಧನೆಗಳ ಬಗ್ಗೆ ಜನರಿಗೆ ವಿವರಿಸುತ್ತಿದ್ದರು. ಮತ್ತೆ ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳು ಸರಕಾರದ ವೈಫಲ್ಯಗಳನ್ನು ಬಯಲಿಗೆಳೆದು ಭಾಷಣ ಮಾಡುತ್ತಿದ್ದರು. ಆದರೆ, ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ತನ್ನ ಸಾಧನೆಗಳನ್ನು ವಿವರಿಸದೆ ನಿರಂತರವಾಗಿ ಪ್ರತಿಪಕ್ಷಗಳ ವಿರುದ್ಧ ಆಕ್ರಮಣಶೀಲವಾಗಿ ವರ್ತಿಸುತ್ತಿದೆ. ಸಾಮಾನ್ಯವಾಗಿ ಘನತೆಯಿಂದ ವರ್ತಿಸಬೇಕಾದ ಆಡಳಿತ ಪಕ್ಷ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸಲ್ಲದ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಸಂಸತ್ತಿನಲ್ಲಿ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಕೂಗಾಡಿ ,ಅರಚಾಡಿ ಪ್ರತಿಪಕ್ಷ ಗಳ ಧ್ವನಿ ಕೇಳದಂತೆ ಮಾಡುತ್ತಾರೆ. ಉದಾಹರಣೆಗೆ ರಾಹುಲ್ ಗಾಂಧಿಯವರು ಬ್ರಿಟನ್ ನಲ್ಲಿ ಆಡಿದರೆನ್ನಲಾದ ಮಾತಿನ ಎಳೆಯನ್ನು ಹಿಡಿದುಕೊಂಡು ಸಂಸತ್ತಿನ ಉಭಯ ಸದನಗಳ ಕಲಾಪಗಳು ನಡೆಯದಂತೆ ಮಾಡುವಲ್ಲಿ ಆಡಳಿತ ಪಕ್ಷದ ಸದಸ್ಯರು ಯಶಸ್ವಿಯಾಗಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ರಾಹುಲ್ ಗಾಂಧಿಯವರ ಮಾತಿಗೆ ಈ ಪರಿ ಕೋಲಾಹಲ ಎಬ್ಬಿಸಲು ನಿಜವಾದ ಕಾರಣ ಭಾರತದ ಪ್ರಜಾಪ್ರಭುತ್ವ ದ ಬಗೆಗಿನ ಮಮಕಾರವಲ್ಲ, ಬದಲಿಗೆ ಕೋಟ್ಯಂತರ ಲೂಟಿಯ ಅದಾನಿ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಯಾಗದಂತೆ ಕಲಾಪದ ದಾರಿ ತಪ್ಪಿಸಲು ಈ ರೀತಿ ಕೋಲಾಹಲ ಎಬ್ಬಿಸುವುದು ಬಿಜೆಪಿಯ ಚಾಳಿಯಾಗಿದೆ.

ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಂದರೆ ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚಕಾರವೆತ್ತದೆ ಕೋಮು ಮತ್ತು ಮತಾಂಧತೆಯ ಭಾವನಾತ್ಮಕ ವಿಷಯಗಳನ್ನು ಪದೇ ಪದೇ ಪ್ರಸ್ತಾಪಿಸಿ ಜನಸಾಮಾನ್ಯರನ್ನು ಕೋಮು ಆಧಾರದಲ್ಲಿ ವಿಭಜಿಸಿ ಓಟಿನ ಬೆಳೆ ತೆಗೆಯಲು ಇವರು ಮಸಲತ್ತು ನಡೆಸಿದ್ದಾರೆ.
ಕರಾವಳಿಗೆ ಲವ್ ಜಿಹಾದ್, ಮಂಡ್ಯಕ್ಕೆ ಟಿಪ್ಪು, ಉರಿಗೌಡ, ಚಿತ್ರದುರ್ಗಕ್ಕೆ ಬಂದರೆ ಒನಕೆ ಓಬವ್ವ, ಬಳ್ಳಾರಿ ಭಾಗಕ್ಕೆ ಅಂಜನಾದ್ರಿ ಬೆಟ್ಟ, ಕಲಬುರಗಿಗೆ ಆಳಂದ ದರ್ಗಾ, ಹೀಗೆ ಮುಂದಿನ ಹತ್ತು ವರ್ಷಗಳ ಚುನಾವಣಾ ಅಜೆಂಡಾ ರೆಡಿಯಾಗಿದೆ.ಉದ್ಯೋಗ, ಅನ್ನ, ಅಕ್ಷರ, ನಾಗರಿಕ ಸೌಲಭ್ಯ ಯಾರೂ ಕೇಳುವ ಹಾಗಿಲ್ಲ. ಚುನಾವಣೆಯಲ್ಲಿ ಬೇಕಾದರೆ ಒಂದಿಷ್ಟು ಭಕ್ಷಿಸು ಅಷ್ಟೇ. ಇದು ರಾಜ್ಯದ ಇಂದಿನ ಪರಿಸ್ಥಿತಿ. ದೇಶದ ಸ್ಥಿತಿಯೂ ಭಿನ್ನವಲ್ಲ.

ಮಂಡ್ಯದಲ್ಲಿ ಮುಸಲ್ಮಾನರ ವಿರುದ್ಧ ಒಕ್ಕಲಿಗರನ್ನು ಎತ್ತಿಕಟ್ಟಲು ಚರಿತ್ರೆಯಲ್ಲಿ ಇಲ್ಲದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬ ಪಾತ್ರಗಳನ್ನು ಸೃಷ್ಟಿಸಿ ಅವರು ಟಿಪ್ಪುವನ್ನು ಕೊಂದರು ಎಂದು ಒಕ್ಕಲಿಗ ಸಮುದಾಯವನ್ನು ಬ್ರಿಟಿಷ್ ಚೇಲಾಗಳೆಂಬಂತೆ ಬಿಂಬಿಸಿದರು.ಇದಕ್ಕಾಗಿ ಸರಕಾರದ ಬೊಕ್ಕಸದ ಹಣದಿಂದ ರಂಗಾಯಣದಿಂದ ನಕಲಿ ನಾಟಕ ಸಿದ್ಧಪಡಿಸಿ ರಾಜ್ಯಾದ್ಯಂತ ಪ್ರದರ್ಶನ ಮಾಡುವ ಹೀನಾಯ ಮಟ್ಟಕ್ಕೆ ತಲುಪಿರುವುದು ಇವರ ಹತಾಶೆಯಲ್ಲದೆ ಬೇರೇನೂ ಅಲ್ಲ.ಇದು ಕೂಡ ಯಶಸ್ವಿ ಆಗುವದಿಲ್ಲ ಎಂದಾದಾಗ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಇನ್ನೊಂದು ರೈಲು ಬಿಟ್ಟರು. ಟಿಪ್ಪು ಸುಲ್ತಾನ್ ಹಾಸನದ ಹೆಸರನ್ನು ಖೈಮಾಬಾದ್ ಎಂದು ಬದಲಿಸಲು ಯತ್ನಿಸಿದ್ದನಂತೆ ಎಂದು ಕತೆ ಕಟ್ಟಿದರು.ಹೀಗೆ ಕೋಮು ದಳ್ಳುರಿ ಎಬ್ಬಿಸಲು ಏನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ.

ಹಿಟ್ಲರನ ಸಂಪುಟದಲ್ಲಿ ಗೋಬೆಲ್ಸ್ ಎಂಬ ಪ್ರಚಾರ ಮಂತ್ರಿ ಇದ್ದ.ಒಂದು ಸುಳ್ಳನ್ನು ನೂರು ಸಲ, ಸಾವಿರ ಸಲ ಹೇಳಿದರೆ ಜನರು ನಂಬುತ್ತಾರೆ ಎಂದು ಅವನು ಹೇಳುತ್ತಿದ್ದ. ಯೆಹೂದಿಗಳ ವಿರುದ್ಧ ಜರ್ಮನ್ ಜನರನ್ನು ಎತ್ತಿ ಕಟ್ಟಿದ್ದು ಇಂಥ ಸುಳ್ಳುಗಳ ಮೂಲಕ.ಈಗ ಮಂಡ್ಯದಲ್ಲಿ ಉರಿಗೌಡ, ದೊಡ್ಡ ನಂಜೇಗೌಡ ಎಂಬ ನಕಲಿ ಪಾತ್ರಗಳು ಸೃಷ್ಟಿಯಾಗಿದ್ದು ಗೋಬೆಲ್ಸ್ ಮಾದರಿಯಲ್ಲಿ. ಗೋಬೆಲ್ಸ್ ತಂತ್ರ ಮಂಗಳೂರಿನಲ್ಲಿ ಫಲಿಸಿತು. ಮುಂದಿನ ಬಲಿ ಮಂಡ್ಯ,ಜನರು ಸುಳ್ಳನ್ನು ನಂಬುವವರೆಗೆ ಹಿಟ್ಲರ್, ಗೋಬೆಲ್ಸ್‌ಗಳು ಇರುತ್ತಾರೆ.

ಈಗ ಇದು ಎಲ್ಲಿಗೆ ತಲುಪಿದೆಯೆಂದರೆ ಚಿತ್ರ ನಿರ್ಮಾಪಕರಾದ ಮಂತ್ರಿ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಹೆಸರಿನಲ್ಲಿ ಸಿನೆಮಾ ಮಾಡಲು ಉರಿಗೌಡ, ನಂಜೇಗೌಡ ಹೆಸರನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಹೀಗೆ ನೂರಾರು ಸಲ ಹೇಳಿ, ಹೇಳಿ, ನಾಟಕ, ಸಿನೆಮಾ ಮಾಡಿ ಸುಳ್ಳನ್ನು ಸತ್ಯವೆಂದು ನಂಬಿಸುತ್ತಾರೆ.

ಯಾವುದೇ ಚಾರಿತ್ರಿಕ ವಿಷಯದ ಬಗ್ಗೆ ಮಾತನಾಡುವಾಗ ಅದಕ್ಕೆ ಪೂರಕವಾದ ದಾಖಲೆ ಇರಬೇಕು. ಇತಿಹಾಸಕಾರರ ಸಂಶೋಧನೆಯ ಆಧಾರ ವಿರಬೇಕು. ಮಂತ್ರಿಗಳು ಇತಿಹಾಸಕಾರರಲ್ಲ. ದಾಖಲೆಯಿಲ್ಲದೆ ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ. ಇಂಥ ಮಾತು ಅರ್ಥಹೀನ. ಚುನಾವಣಾ ರಾಜಕಾರಣಕ್ಕೆ ಉರಿಗೌಡ, ನಂಜೇಗೌಡರನ್ನು ಸೃಷ್ಟಿಸಿದ ಸಚಿವರಾದ ಅಶ್ವತ್ಥ ನಾರಾಯಣ ಮತ್ತು ಅಶೋಕ್ ಹಾಗೂ ಶಾಸಕ ಸಿ.ಟಿ.ರವಿ ತಮ್ಮ ಸಾಂವಿಧಾನಿಕ ಸ್ಥಾನಮಾನದ ಜವಾಬ್ದಾರಿಯನ್ನು, ಉತ್ತರ ದಾಯಿತ್ವವನ್ನು ಗಾಳಿಗೆ ತೂರಿ ಅಂತೆ ಕಂತೆಗಳ ಕತೆಗಳನ್ನು ಸಂತೆಯಲ್ಲಿ ತೂರಿ ಬಿಡುವುದು ಅಪಚಾರ. ದಾಖಲೆ ಕೇಳುವುದು ಕರ್ನಾಟಕದ ಆರು ಕೋಟಿ ಕನ್ನಡಿಗರ ಹಕ್ಕು ಅದನ್ನು ಸಚಿವರು ನೀಡಬೇಕು. ಯಾವ ಇತಿಹಾಸಕಾರನ ಪುಸ್ತಕದಲ್ಲಿ ನೀವು ಹೇಳುವ ಮಾತಿನ ಉಲ್ಲೇಖವಿದೆ ತಿಳಿಸಿ, ಇಲ್ಲವೇ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿ,ಮುಖ್ಯ ಮಂತ್ರಿಗಳು ಇಂಥ ಅಪಚಾರ ನಡೆಯಲು ಅವಕಾಶ ನೀಡಬಾರದು.

ದೇಹವೇ ದೇಗುಲ ಎಂದು ಹನ್ನೆರಡನೇ ಶತಮಾನದಲ್ಲಿ ಸಾರಿದ ಬಸವಣ್ಣನವರು ಸ್ಥಾವರ ಸಂಸ್ಕೃತಿಯನ್ನು ವಿರೋಧಿಸಿದರು.ಜನಸಾಮಾನ್ಯರ ಕೈಗೆ ಇಷ್ಟಲಿಂಗವನ್ನು ಕೊಟ್ಟು ಗುಡಿ, ಗುಂಡಾರಗಳ ವೌಢ್ಯವನ್ನು ನಿವಾರಿಸಲು ಯತ್ನಿಸಿದರು. ಅದಕ್ಕಾಗಿ ಬಲಿದಾನ ಮಾಡಿದರು. ಆದರೆ ಇಂದಿನ ಬಿಜೆಪಿ ಸರಕಾರ ವಿವಿಧ ಸಮುದಾಯಗಳ ನಾಯಕರ ನೂರಾರು ಅಡಿ ಎತ್ತರದ ಪ್ರತಿಮೆಗಳನ್ನು ಅನಾವರಣಗೊಳಿಸುತ್ತ ಜನರು ಮೂಲಭೂತ ಅಗತ್ಯಗಳನ್ನು ಪ್ರಶ್ನಿಸದಂತೆ ಮಾಯಾಜಾಲ ಬೀಸುತ್ತಿದೆ.

ಜನಸಾಮಾನ್ಯರನ್ನು ಭಾವನಾತ್ಮಕ ವಿಷಯಗಳ ಸಂತೆಯಲ್ಲಿ ಮುಳುಗಿಸಲು ಇನ್ನೊಂದು ಕಾರಣ ಬಿಜೆಪಿಯೊಳಗಿನ ಆಂತರಿಕ ಕಚ್ಚಾಟ. ಎಂಥ ತತ್ವನಿಷ್ಠ ಪಕ್ಷವಾದರೂ ಅಧಿಕಾರ ರಾಜಕಾರಣದ ಸುಳಿಗೆ ಸಿಲುಕಿದರೆ ಅಲ್ಲಿ ಸ್ವಾರ್ಥಕ್ಕಾಗಿ ಒಳ ಜಗಳ ಸಹಜ. ರಾಜ್ಯದಲ್ಲಿ ಮೋದಿಯವರ ಅಲೆಯ ಅಬ್ಬರ ಜೋರಾಗಿ ಕೇಳಿಬರುತ್ತಿದ್ದರೂ ಪಕ್ಷದ ಒಳಗಿನ ಮುಸುಕಿನ ಗುದ್ದಾಟ ತೀವ್ರಗೊಂಡಿದೆ. ಲಿಂಗಾಯತರ ಬಗ್ಗೆ ವಿಶೇಷವಾಗಿ ಯಡಿಯೂರಪ್ಪನವರ ಬಗ್ಗೆ ಸಿ.ಟಿ.ರವಿ ಆಡಿದ ಮತ್ತು ಆಡುತ್ತಿರುವ ಮಾತುಗಳಿಂದ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ.ಇದು ಅಮಿತ್ ಶಾಗೂ ತಲೆನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿಯವರ ನಡುವಿನ ಕಿತ್ತಾಟ ದಿಲ್ಲಿಯ ವರೆಗೆ ಹೋಗಿದೆ. ಬಿಜಾಪುರದಲ್ಲಿ ಯಡಿಯೂರಪ್ಪ ನವರ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್‌ರ ವಿರುದ್ಧ ಮಾಜಿಮಂತ್ರಿ ಅಪ್ಪು ಪಟ್ಟಣಶೆಟ್ಟಿ ಬಣ ತಿರುಗಿ ಬಿದ್ದಿದೆ.

ಯತ್ನಾಳ್ ಬಹಿರಂಗವಾಗಿ ಮುಸಲ್ಮಾನರ ವಿರುದ್ಧ ಮಾತಾಡಿದರೂ ಆತನ ವ್ಯವಹಾರ ಸಂಬಂಧಗಳು ಮುಸ್ಲಿಮ್ ಉದ್ಯಮಿಗಳು ಮತ್ತು ವ್ಯಾಪಾರಿಗಳ ಜೊತೆಗಿವೆ ಎಂದು ಅಪ್ಪು ಪಟ್ಟಣಶೆಟ್ಟಿ ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಯಡಿಯೂರಪ್ಪನವರು ಬಹಿರಂಗವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರೂ ಅವರ ಗುಂಪಿನ ಅನೇಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಹುಬ್ಬಳ್ಳ-ಧಾರವಾಡದಲ್ಲಿ ಯಡಿಯೂರಪ್ಪನವರ ಕಟ್ಟಾ ಶಿಷ್ಯ ಮೊಹನ್ ಲಿಂಬಿಕಾಯಿ ಕಾಂಗ್ರೆಸ್ ಟಿಕೆಟ್ ಪಡೆದು ಬಿಜೆಪಿಯ ಅರವಿಂದ್ ಬೆಲ್ಲದ ವಿರುದ್ಧ ಸ್ಪರ್ಧಿಸಲು ತಯಾರಾಗಿದ್ದಾರೆ. ಯಡಿಯೂರಪ್ಪನವರ ವಿರೋಧಿಯಾಗಿರುವ ಸಿ.ಟಿ.ರವಿ ವಿರುದ್ಧ ಯಡಿಯೂರಪ್ಪ ನವರ ಶಿಷ್ಯ ಎಚ್.ಡಿ. ತಮ್ಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಹೀಗಾಗಿ ಬಿಜೆಪಿಯ ಸೈದ್ಧಾಂತಿಕ ಗುರು ಆರೆಸ್ಸೆಸ್ ಅನಿವಾರ್ಯವಾಗಿ ಉರಿಗೌಡರ, ನಂಜೇಗೌಡ ರಂಥ ನಕಲಿ ನಾಟಕದ ಸ್ಕ್ರಿಪ್ಟ್ ಸಿದ್ಧಪಡಿಸಬೇಕಾಗಿದೆ.

ಮತದಾರರನ್ನು ಸೆಳೆಯಲು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.ಕಲಬುರಗಿಯ ಬಿಜೆಪಿ ಶಾಸಕರೊಬ್ಬರು ಶಿವ ಪಾರ್ವತಿ ಕಲ್ಯಾಣೋತ್ಸವದ ಜೊತೆಗೆ ಕೆಲವು ಆಯ್ದ ಮತದಾರರನ್ನು ಸ್ವಂತ ಖರ್ಚಿನಲ್ಲಿ ವಿಶೇಷ ರೈಲಿನಲ್ಲಿ ಕಾಶಿ ಯಾತ್ರೆ ಮಾಡಿಸಿಕೊಂಡು ಬಂದರು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಮನೆ ಮನೆಗೆ ಗುಪ್ತವಾಗಿ ಕಾಣಿಕೆಗಳನ್ನು ಸಲ್ಲಿಸಲಾಗುತ್ತಿದೆ.

ಐದು ವರ್ಷಕ್ಕೊಮ್ಮೆ ಚುನಾವಣೆಗಳು ಬಂದಾಗ ಶ್ರೀನಿವಾಸ ಕಲ್ಯಾಣ, ಶಿವ, ಪಾರ್ವತಿ ಕಲ್ಯಾಣ ಸಮಾರಂಭಗಳು ಜೋರಾಗಿ ನಡೆಯುತ್ತವೆ. ಮತ್ತೆ ಕಲ್ಯಾಣೋತ್ಸವ ಮಾಡಿಸಿಕೊಳ್ಳಲು ಶ್ರೀ ನಿವಾಸ, ಶಿವ, ಪಾರ್ವತಿ ಐದು ವರ್ಷ ಕಾಯಬೇಕು. ಈ ಕಲ್ಯಾಣೋತ್ಸವ ಸಂದರ್ಭದಲ್ಲಿ ಮನೆ, ಮನೆಗೆ ಹೋಗಿ ಅರಶಿನ, ಕುಂಕುಮವನ್ನು ನೀಡಿ ಕಲ್ಯಾಣ ಮಹೋತ್ಸವಕ್ಕೆ ಆಹ್ವಾನಿಸಲಾಗುತ್ತಿದೆ. ಉತ್ಸವದಲ್ಲಿ ಬಂದ ಭಕ್ತರಿಗೆ ಲಾಡು ಪ್ರಸಾದದ ಊಟ, ವಸ್ತ್ರ ,ಉಡುಗೊರೆಗಳನ್ನು ನೀಡಲಾಗುತ್ತಿದೆ. ಕಲ್ಯಾಣ ಮಹೋತ್ಸವಕ್ಕೆ ತಿರುಪತಿಯಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ದೇವರ ವಿಗ್ರಹಗಳನ್ನು ತರಲಾಗುತ್ತಿದೆ.

ಒಟ್ಟಾರೆ ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರದ ಏಳು ದಶಕಗಳ ನಂತರ ತೀವ್ರ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಸಂವಿಧಾನ ಅಪಾಯದಲ್ಲಿದೆ.ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಉಡುಪು, ಧಾರ್ಮಿಕತೆ,ರಾಷ್ಟ್ರೀಯತೆಗಳ ಅಪರೂಪದ ದೇಶವಾದ ಭಾರತ ಸುರಕ್ಷಿತವಾಗಿ ಉಳಿಯಬೇಕಾದರೆ ಬಾಬಾಸಾಹೇಬರ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾದ ಅಪಾಯವನ್ನು ಹಿಮ್ಮೆಟ್ಟಿಸಬೇಕು.ಹೊಸ ಪೀಳಿಗೆಯ ತರುಣರ ಮೆದುಳಿನಲ್ಲಿ ಗೂಡು ಕಟ್ಟಿದ ಕೋಮು ವಿಷವನ್ನು ತೆಗೆಯಬೇಕಾಗಿದೆ. ಭಾರತ ಹಿಂದೆ ಕೂಡ ಇಂಥ ಸವಾಲುಗಳನ್ನು ಎದುರಿಸಿ ಸುರಕ್ಷಿತವಾಗಿ ಉಳಿದಿದೆ. ಮುಂದೆಯೂ ಉಳಿಯುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)