ವಿಶೇಷ-ವರದಿಗಳು
ಜಾಗತಿಕ ವ್ಯಾಪ್ತಿಗಾಗಿ ವನ್ ವೆಬ್ ಯತ್ನಕ್ಕೆ ಬೃಹತ್ ಹೆಜ್ಜೆ
36 ಉಪಗ್ರಹಗಳ ಉಡಾವಣೆಗೆ ಸಿದ್ಧವಾಗುತ್ತಿವೆ 'ವನ್ ವೆಬ್' ಮತ್ತು ಇಸ್ರೋ

Photo credit: isro.gov.in
ಮಾರ್ಚ್ 26, 2023ರಂದು ವನ್ ವೆಬ್ ಸಂಸ್ಥೆಯ ನಿರ್ಮಾಣದ 36 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಿದೆ. ಇದು ವನ್ ವೆಬ್ ಸಂಸ್ಥೆಯ 18ನೆಯ ಉಡಾವಣೆಯಾಗಿದ್ದು, ಈ ವರ್ಷದ ಮೂರನೇ ಉಡಾವಣೆಯಾಗಿದೆ. ಈ ಉಡಾವಣೆಯ ಮೂಲಕ ಸಂಸ್ಥೆ ತನ್ನ ಮೊದಲ ತಲೆಮಾರಿನ ಲೋ ಅರ್ತ್ ಆರ್ಬಿಟ್ (ಎಲ್ಇಒ) ಉಪಗ್ರಹ ಪುಂಜವನ್ನು ಪೂರ್ಣಗೊಳಿಸಲಿದೆ. ಇದು ಸಂಸ್ಥೆಗೆ ಜಾಗತಿಕ ವ್ಯಾಪ್ತಿಯನ್ನು ಒದಗಿಸುತ್ತದೆ. 36 ಉಪಗ್ರಹಗಳ ಸೇರ್ಪಡೆಯ ಮೂಲಕ, ವನ್ ವೆಬ್ ಜಗತ್ತಿನ ಮೊದಲ ಜಾಗತಿಕ ಎಲ್ಇಒ ಉಪಗ್ರಹ ಪುಂಜವಾಗಿರಲಿದೆ.
ತನ್ನ ವಿತರಣಾ ಜಾಲದೊಡನೆ ಸಹಭಾಗಿತ್ವ ಹೊಂದುವ ಮೂಲಕ ವನ್ ವೆಬ್ ಸಂಸ್ಥೆ ಅತ್ಯಂತ ವೇಗವಾದ, ನಂಬಿಕಾರ್ಹ ಅಂತರ್ಜಾಲ ಸಂಪರ್ಕವನ್ನು ಒದಗಿಸಲಿದೆ. ಅದು ಜಗತ್ತಿನಾದ್ಯಂತ ಸಂಸ್ಥೆಗಳು, ಸರ್ಕಾರಗಳು ಮತ್ತು ವ್ಯಕ್ತಿಗಳಿಗೆ ತಡೆರಹಿತ ಸಂಪರ್ಕ ವ್ಯವಸ್ಥೆ ಕಲ್ಪಿಸಿ, ಎಲ್ಇಓ ಸಂಪರ್ಕ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆಗೊಳಿಸಿತ್ತು. ಅದೇ ಮೊದಲ ಬಾರಿಗೆ ಇಸ್ರೋ ತನ್ನ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (ಜಿಎಸ್ಎಲ್‌ವಿ ಎಂಕೆ 3) ಉಡಾವಣಾ ವಾಹನವನ್ನು ಜಾಗತಿಕ ವಾಣಿಜ್ಯಿಕ ಉಡಾವಣೆಗಾಗಿ ಬಳಸಿಕೊಂಡಿತ್ತು.
ವನ್ ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಅಮೆರಿಕಾದ ಫ್ಲೋರಿಡಾದ ಉತ್ಪಾದನಾ ಕೇಂದ್ರದಿಂದ ಫೆಬ್ರವರಿ 16ರಂದು ಭಾರತಕ್ಕೆ ತಂದು, ಲಾಂಚ್ ವೆಹಿಕಲ್ ಮಾರ್ಕ್ 3ಗೆ ಅಳವಡಿಸಲಾಯಿತು.
ವನ್ ವೆಬ್ ಈಗಾಗಲೇ ಜಗತ್ತಿನ ಪ್ರಮುಖ ಸ್ಥಳಗಳಲ್ಲಿ ಸಂಪರ್ಕ ವ್ಯವಸ್ಥೆಗಳನ್ನು ಸ್ಥಾಪಿಸಿದ್ದು, ಪ್ರಮುಖ ಅಂತರ್ಜಾಲ ಪೂರೈಕೆದಾರರಾದ ವಿಇಒಎನ್, ಆರೆಂಜ್, ಗ್ಯಾಲಕ್ಸಿ ಬ್ರಾಡ್‌ಬ್ಯಾಂಡ್, ಪರೇಟಸ್, ಟೆಲಿಸ್ಪೇಸಿಯೋ, ಹಾಗೂ ಮತ್ತಿತರ ಸಂಸ್ಥೆಗಳೊಡನೆ ಸಹಯೋಗ ಹೊಂದಿ, ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುತ್ತಿದೆ.
ಉಡಾವಣೆ ಯಾವತ್ತು ನಡೆಯಲಿದೆ?
ವನ್ ವೆಬ್ ಉಪಗ್ರಹಗಳ ಉಡಾವಣೆ ಮಾರ್ಚ್ 26, 2023ರ ಭಾನುವಾರ, ಯುರೋಪಿಯನ್ ಸಮಯ ರಾತ್ರಿ 11:30, ಭಾರತೀಯ ಸಮಯ ಬೆಳಗ್ಗಿನ 09 ಗಂಟೆಗೆ ನಡೆಯಲಿದೆ. ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಉಡಾವಣಾ ಸ್ಥಳವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯಿಕ ಅಂಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಉಡಾವಣೆಯನ್ನು ನಿರ್ವಹಿಸಲಿದೆ. ಇದರ ಹೊರತಾಗಿ, ಬೇರೆ ಉಡಾವಣಾ ಸಮಯವನ್ನು ನಿಗದಿಪಡಿಸಲಾಗಿಲ್ಲ.
ವನ್ ವೆಬ್ ಕಾನ್ಸ್ಟಲೇಷನ್ ಅನ್ನು ಭೂಮಿಯ ಧ್ರುವಗಳ ಮೇಲಿರುವ ಲೋ ಅರ್ತ್ ಆರ್ಬಿಟ್ (ಎಲ್ಇಓ) ಮೇಲೆ ಅಳವಡಿಸಲಾಗುತ್ತದೆ. ಈ ಉಪಗ್ರಹಗಳನ್ನು 12 ರಿಂಗ್‌ಗಳು ಅಥವಾ ಆರ್ಬಿಟಲ್ ಪ್ಲೇನ್‌ಗಳ ಮಾದರಿಯಲ್ಲಿ, ಪ್ರತಿ ರಿಂಗ್ ಸಹ 49 ಉಪಗ್ರಹಗಳನ್ನು ಒಳಗೊಂಡಿರುವಂತೆ ಜೋಡಿಸಲಾಗುತ್ತದೆ. ಈ ಆರ್ಬಿಟಲ್ ಪ್ಲೇನ್‌ಗಳು 87.9 ಡಿಗ್ರಿಗಳ ಧ್ರುವೀಯ ಕೋನದಲ್ಲಿ ವಾಲಿಕೊಂಡಿದ್ದು, ಭೂಮಿಯ ಮೇಲ್ಮೈಯಿಂದ 1,200 ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಪ್ರತಿಯೊಂದು ಉಪಗ್ರಹ ಭೂಮಿಗೆ ಒಂದು ಸುತ್ತು ಬರಲು 109 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅವುಗಳು ಭೂಮಿಯ ಬೇರೆ ಬೇರೆ ಪ್ರದೇಶಗಳನ್ನು ವ್ಯಾಪಿಸುವ ಸಲುವಾಗಿ ಸತತವಾಗಿ ಚಲಿಸುತ್ತಲೇ ಇರಬೇಕಾಗುತ್ತದೆ. ಈ ಉಪಗ್ರಹಗಳು ಭೂಮಿಯ ಮೇಲಿನ ವಿವಿಧ ರೀತಿಯ ಜಾಗಗಳನ್ನು ವ್ಯಾಪಿಸುತ್ತವೆ. ಸಂಪೂರ್ಣ ಸೇವೆಗಳನ್ನು ಒದಗಿಸಲು, 49 ಪ್ಲೇನ್‌ಗಳಲ್ಲಿ ಒಟ್ಟಾರೆಯಾಗಿ 588 ಉಪಗ್ರಹಗಳನ್ನು ನಿಯೋಜಿಸಲಾಗುತ್ತದೆ.
(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ