ರಾಷ್ಟ್ರೀಯ
ಕಾಶ್ಮೀರಿ ಪತ್ರಕರ್ತ ಇರ್ಫಾನ್ ಮೆಹರಾಜ್ ಬಂಧನಕ್ಕೆ ವ್ಯಾಪಕ ಖಂಡನೆ; ತಕ್ಷಣ ಬಿಡುಗಡೆಗೆ ಆಗ್ರಹ

ಇರ್ಫಾನ್ ಮೆಹರಾಜ್ (Photo: Twitter)
ಹೊಸದಿಲ್ಲಿ: ಕಾಶ್ಮೀರಿ ಪತ್ರಕರ್ತ ಇರ್ಫಾನ್ ಮೆಹರಾಜ್ (Irfan Mehraj) ಅವರನ್ನು ಮಾರ್ಚ್ 20 ರಂದು ರಾಷ್ಟ್ರೀಯ ತನಿಖಾ ಏಜನ್ಸಿ ಬಂಧಿಸಿರುವ ಕುರಿತು ತಮ್ಮ ತೀವ್ರ ಕಳವಳವನ್ನು ಹಲವಾರು ಪತ್ರಕರ್ತರು, ಮಾನವ ಹಕ್ಕು ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಮತ್ತು ಮಾನವ ಹಕ್ಕು ಹೋರಾಟಗಾರರ ಕುರಿತಾದ ವಿಶ್ವ ಸಂಸ್ಥೆಯ ವಿಶೇಷ ಅಧಿಕಾರಿ ವ್ಯಕ್ತಪಡಿಸಿದ್ದಾರೆ.
ಎನ್‌ಜಿಒ-ಉಗ್ರ ಹಣಕಾಸು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಹರಾಜ್ ಅವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳುತ್ತಿದೆ. ಕಾಶ್ಮೀರಿ ಮಾನವ ಹಕ್ಕು ಕಾರ್ಯಕರ್ತ ಖುರ್ರಮ್ ಪರ್ವೇಝ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು ಈಗಾಗಲೇ ಎನ್‌ಐಎ ಹಲವರನ್ನು ವಿಚಾರಣೆ ನಡೆಸಿದೆ.
ವಿಶ್ವ ಸಂಸ್ಥೆಯ ವಿಶೇಷ ರೆಪೋರ್ಟಿಯುರ್ ಮೇರಿ ಲಾವ್ಲೊರ್ ಮೆಹರಾಜ್ ಬಂಧನ ಕುರಿತು ಟ್ವೀಟ್ ಮಾಡಿ ಅವರ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಜರ್ನಲಿಸ್ಟ್ ಫೆಡರೇಶನ್ ಆಫ್ ಕಾಶ್ಮೀರ್ ಕೂಡ ಈ ಬಂಧನವನ್ನು ಖಂಡಿಸಿವೆ.
"ಪತ್ರಕರ್ತರ ವಿರುದ್ಧ ಯುಎಪಿಎ ಇದರ ಅತಿಯಾದ ಬಳಕೆಯನ್ನು ಎಡಿಟರ್ಸ್ ಗಿಲ್ಡ್ ಖಂಡಿಸುತ್ತದೆ, ತೀರಾ ಇತ್ತೀಚೆಗೆ ಇದೇ ಕಾಯಿದೆಯನ್ನು ಕಾಶ್ಮೀರಿ ಪತ್ರಕರ್ತ ಇರ್ಫಾನ್ ಮೆಹರಾಜ್ ಮೇಲೆ ಹೇರಲಾಗಿದೆ. ರಾಜ್ಯ ಆಡಳಿತವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸಬೇಕೆಂದು ಗಿಲ್ಡ್ ಆಗ್ರಹಿಸುತ್ತದೆ," ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.
"ಇರ್ಫಾನ್ ಅವರ ಬಂಧನವು ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಮನ, ಮಾಧ್ಯಮ ಸ್ವಾತಂತ್ರ್ಯ ಮತ್ತು ನಾಗರಿಕ ಸಮಾಜದ ಸ್ವಾತಂತ್ರ್ಯದ ಮೇಳಿನ ಅತಿಕ್ರಮಣದ ಇನ್ನೊಂದು ದೃಷ್ಟಾಂತವಾಗಿದೆ. ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಿರಂತರವಾಗಿ ನಡೆಯುತ್ತಿದೆ," ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.
"ಇರ್ಫಾನ್ ಅವರಂತಹ ಮಾನವ ಹಕ್ಕು ಹೋರಾಟಗಾರರನ್ನು ಪ್ರೋತ್ಸಾಹಿಸಬೇಕು ಮತ್ತು ರಕ್ಷಿಸಬೇಕು, ಅವರ ವಿರುದ್ಧ ದೌರ್ಜನ್ಯವೆಸಗುವುದಲ್ಲ," ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಇದರ ಮಂಡಳಿಯ ಅಧ್ಯಕ್ಷ ಆಕಾರ್ ಪಟೇಲ್ ಹೇಳಿದ್ದಾರೆ.
ಕಠಿಣ ಯುಎಪಿಎ ಅನ್ನು ಪತ್ರಕರ್ತನೊಬ್ಬನ ಮೇಲೆ ಹೇರುವುದು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ" ಎಂದು ಹೇಳಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅವರ ತಕ್ಷಣ ಬಿಡುಗಡೆಗೆ ಆಗ್ರಹಿಸಿದೆ.
ಇದೇ ವಿಚಾರದ ಕುರಿತು ಜರ್ನಲಿಸ್ಟ್ ಫೆಡರೇಶನ್ ಆಫ್ ಕಾಶ್ಮೀರ್ ಕೂಡ ಪ್ರತಿಕ್ರಿಯಿಸಿ ಈಗಾಗಲೇ ಕಾಶ್ಮೀರದ ಮೂವರು ಇತರ ಪತ್ರಕರ್ತರಾದ ಆಸಿಫ್ ಸುಲ್ತಾನ್, ಸಾಜದ್ ಗುಲ್ ಮತ್ತು ಫಾಹದ್ ಶಾ ಜೈಲಿನಲ್ಲಿರುವುದನ್ನು ನೆನಪಿಸಿದೆ.
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹಾಗೂ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಕೂಡ ಪತ್ರಕರ್ತನ ಬಂಧನ ಖಂಡಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ