ರಾಷ್ಟ್ರೀಯ
ಬಂಧಿತರಿಗೆ ಕಾನೂನು ನೆರವು ನೀಡಲು ಮುಂದೆ ಬಂದ ಪಕ್ಷ
ಅಮೃತ್‌ಪಾಲ್ ಸಿಂಗ್ ಬಂಧನ ಕಾರ್ಯಾಚರಣೆಗೆ ಶಿರೋಮಣಿ ಅಕಾಲಿ ದಳ ಆಕ್ಷೇಪ

ಅಕಾಲಿ ದಳ ನಾಯಕ ಸುಖಬೀರ್ ಸಿಂಗ್ ಬಾದಲ್
ಹೊಸದಿಲ್ಲಿ: ಖಾಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ವ್ಯಾಪಕ ಕಾರ್ಯಾಚರಣೆಯು ಸಂವಿಧಾನದ ಪರಿಧಿಯನ್ನು ಮೀರಿದೆ ಮತ್ತು ಷಡ್ಯಂತ್ರವಾಗಿದೆ ಎಂದು ಹೇಳಿರುವ ಪಂಜಾಬ್ ರಾಜ್ಯದ ವಿಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ, ಈ ಕಾರ್ಯಾಚರಣೆಯಲ್ಲಿ ಬಂಧಿತರಾದವರಿಗೆ ಕಾನೂನು ನೆರವು ನೀಡಲು ಇಂದು ಮುಂದೆ ಬಂದಿದೆ.
"ಈ ಕಾರ್ಯಾಚರಣೆಯಲ್ಲಿ ಬಂಧಿತರಾದ ಎಲ್ಲಾ ಸಿಖ್ ಯುವಕರಿಗೆ ಸಂಪೂರ್ಣ ಕಾನೂನು ನೆರವು ನೀಡಲು ಶಿರೋಮಣಿ ಅಕಾಲಿ ದಳ ಮುಂದಾಗಿದೆ ಮತ್ತು ಪಂಜಾಬ್‌ನ ಆಪ್ ಸರ್ಕಾರದಿಂದ ಅವರ ಹಕ್ಕುಗಳು ದಮನವಾಗದಂತೆ ನೋಡಿಕೊಳ್ಳಲಿದೆ," ಎಂದು ಅಕಾಲಿ ದಳ ನಾಯಕ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ.
"ಅಮಾಯಕ ಸಿಖ್ ಯುವಕರ ಬಂಧನವನ್ನು, ಪ್ರಮುಖವಾಗಿ ಕೇವಲ ಶಂಕೆಯ ಆಧಾರದಲ್ಲಿ ಅಮೃತ್‌ಧಾರಿ ಯುವಕರ ಬಂಧನವನ್ನು ಶಿರೋಮಣಿ ಅಕಾಲಿ ದಳ ಖಂಡಿಸುತ್ತದೆ ಹಾಗೂ ಎಲ್ಲರ ತಕ್ಷಣ ಬಿಡುಗಡೆಗೆ ಆಗ್ರಹಿಸುತ್ತದೆ. ಶಿರೋಮಣಿ ಅಕಾಲಿ ದಾಳ ನ್ಯಾಯಕ್ಕೆ ಮತ್ತು ಪ್ರಮುಖವಾಗಿ ಪಂಜಾಬಿಗಳ ಹಾಗೂ ನಿರ್ದಿಷ್ಟವಾಗಿ ಸಿಖರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ," ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮತಗಳ ಧ್ರುವೀಕರಣಕ್ಕಾಗಿ ಮತ್ತು ಚುನಾವಣಾ ಲಾಭಕ್ಕಾಗಿ ಸಿಖ್ ಸಮುದಾಯಕ್ಕೆ ಅಗೌರವ ತರಲು ಆಪ್ ಸರಕಾರ ಈ ಬಂಧನಗಳನ್ನು ನಡೆಸುತ್ತಿದೆ ಎಂದೂ ಬಾದಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಪಿಎಫ್‌ಐ, ಸಹಸಂಘಟನೆಗಳ ಮೇಲಿನ ನಿಷೇಧವನ್ನು ಎತ್ತಿ ಹಿಡಿದ ಯುಎಪಿಎ ಟ್ರಿಬ್ಯುನಲ್
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ