ದಕ್ಷಿಣ ಕನ್ನಡ
ಸೈಯ್ಯದ್ ಮದನಿ ದರ್ಗಾದ ಆಡಳಿತ ಸಮಿತಿಗೆ ಕಾನೂನು ಬದ್ಧವಾಗಿ ಚುನಾವಣೆ ನಡೆದಿದೆ: ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್

ಮಂಗಳೂರು , ಮಾ.23:ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಆಡಳಿತ ಮಂಡಳಿಗೆ ಕಾನೂನು ಬದ್ಧವಾಗಿ ಚುನಾವಣೆ ನಡೆದಿದೆ. ಇದರಲ್ಲಿ ಸಮಾಜದ ಮುಸ್ಲಿಂ ರಾಜಕೀಯ ಮುಖಂಡರಾಗಲಿ ಅಥವಾ ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಗಳಾಗಲಿ ಹಸ್ತಕ್ಷೇಪ ಮಾಡಿರುವುದಿಲ್ಲ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ತಿಳಿಸಿದ್ದಾರೆ.
ದ.ಕ.ಜಿಲ್ಲಾ ವಕ್ಫ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಯ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಘೋಷಿತ ನಿರ್ಗಮಿತ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಸುಳ್ಳು ಆರೋಪ ಮಾಡುತ್ತಿರುವುದು ಹಾಗೂ ರಾಜಕಾರಣಿಗಳ ವ್ಯಕ್ತಿಗಳ ಹೆಸರನ್ನು ಹೇಳಿ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಶರೀಪುಲ್ ಮದನಿ ದರ್ಗಾ ಇದರ ಆಡಳಿತವನ್ನು ವಕ್ಫ್ ಕಾಯಿದೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಸ್ವಯಂ ಘೋಷಿತ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ನೇತೃತ್ವದ ಆಡಳಿತ ಸಮಿತಿ ಅಧಿಕಾರ ಚಲಾಯಿಸುತ್ತಾ ಬಂದಿದ್ದಾರೆ. ಈ ಹಿಂದೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇಬ್ರಾಹೀಂ ಗೂನಡ್ಕ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು, ಆಗಲೂ ಸಹ ಅಧಿಕಾರ ಹಸ್ತಾಂತರ ಮಾಡದೇ ಮಾನ್ಯ ಉಚ್ಚ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿ (ಸಂಖ್ಯೆ : 51434/2019) 4 ವರ್ಷಗಳ ಕಾಲ ಸ್ವಯಂ ಘೋಷಿತವಾಗಿ ಕಾರ್ಯಭಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ.
2022ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಆಡಳತ ಸಮಿತಿಯ ಅವಧಿ ಮುಕ್ತಾಯವಾಗಿರುವುದರಿಂದ ಪ್ರಕರಣ ನಡೆಸುವುದು ಸೂಕ್ತವಲ್ಲವೆಂದು ಭಾವಿಸಿ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ. ವಕ್ಫ್ ಕಾಯಿದೆ 1995 (ತಿದ್ದುಪಡಿ ಕಾಯಿದೆ 2013)ರ ನಿಯಮ 69(1) ಹಾಗೂ ಕರ್ನಾಟಕ ವಕ್ಫ್ ನಿಯಮ 2017ರ ನಿಯಮ 48ರ ಪ್ರಕಾರ ನಮೂನೆ 42ರಲ್ಲಿ ಬೈಲಾ ಸಲ್ಲಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಅನುಮೋದನೆ ಪಡೆಯಲಾಗಿದೆ ಎಂದರು.
ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ (ಪ್ರಕರಣ ಸಂಖ್ಯೆ 1946/2023) ಚುನಾವಣೆ ತಡೆಯಲು ಪ್ರಯತ್ನಿಸಿದ್ದರೂ, ಫಲಕಾರಿಯಾಗಲಿಲ್ಲ . ಸ್ವಯಂ ಘೋಷಿತ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಇವರು ಮತ್ತೊಮ್ಮೆ ಯು.ಬಿ ಸಿದ್ದೀಕ್ ಹೆಸರಲ್ಲಿ ಪ್ರಕರಣ ದಾಖಲಿಸಿ ನೋಂದಾವಣೆ ಪ್ರಕ್ರಿಯೆ ರದ್ದುಗೊಳಿಸಲು ಉಚ್ಚ ನ್ಯಾಯಾಲಯದಲ್ಲಿ (ಪ್ರಕರಣ ಸಂಖ್ಯೆ 1828/2023)ಪ್ರಕರಣ ದಾಖಲಿಸಿದ್ದರು. ಆದರೆ, ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ ಫೆ.7, 2023 ರಂದು ಕರ್ನಾಟಕ ರಾಜ್ಯ ವಕ್ಫ್ ನಿಯಮ 2017ರ ನಿಯಮ 54(2)ರಲ್ಲ್ಲಿ ಕಮಿಟಿ ರಚಿಸಲು ಕೇವಲ ಹಾಲಿ ಕಮಿಟಿಯವರಿಗೆ ಅವಕಾಶವಿದ್ದು ಸ್ವಯಂ ಘೋಷಿತ ಕಮಿಟಿಗೆ ಅಧಿಕಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ಬಿ.ಎ. ಅಬ್ದುಲ್ ನಾಸಿರ್ ಹೇಳಿದ್ದಾರೆ.
ಹಾಜಿ ಅಬ್ದುಲ್ ರಶೀದ್ ಮತ್ತು ಇಲ್ಯಾಸ್ ನೊಂದಣಿಗೆ ವಿರೋಧ ಮಾಡಿ ಇವರೇ ತಮ್ಮ ಹೆಸರು ಮಹಾ ಸಭೆಯ ಸದಸ್ಯತ್ವ ಸ್ಥಾನಕ್ಕೆ ನೊಂದಣಿ ಮಾಡಿಸಿಕೊಂಡು ಸಾಮಾನ್ಯ ಜನರಿಗೆ ಮೂರ್ಖರನ್ನಾಗಿ ಮಾಡಿ ಕೆಲವರಿಗೆ ಸದಸ್ಯತ್ವ ನೋಂದಣಿಯಾಗದಂತೆ ತಡೆವೊಡ್ಡಿದ್ದಾರೆ. ಆದರೆ ವಕ್ಫ್ ಮಂಡಳಿ ಕಾನೂನು ಬದ್ಧವಾಗಿ ಯಾರ ಒತ್ತಡಕ್ಕೆ ಮಣಿಯದೆ ಪ್ರತಿಷ್ಠಿತ ದರ್ಗಾದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ ಮತ್ತು ಎ.ಕೆ.ಜಮಾಲ್, ಸದಸ್ಯರಾದ ಅಶ್ರಫ್ ಕಿನಾರ ಮತ್ತು ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ