varthabharthi


ದಕ್ಷಿಣ ಕನ್ನಡ

15 ದಿನಗಳ ಒಳಗಾಗಿ ವಿವಾಹ ಪ್ರಮಾಣ ಪತ್ರ: ನಾಸಿರ್ ಲಕ್ಕಿ ಸ್ಟಾರ್

ವಾರ್ತಾ ಭಾರತಿ : 23 Mar, 2023

ಮಂಗಳೂರು, ಮಾ.23: ಮುಸ್ಲಿಮ್ ಸಮುದಾಯದಿಂದ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗೆ ಮದುವೆ ಸರ್ಟಿಫಿಕೇಟ್ ನೀಡಲು ಕರ್ನಾಟಕ ಸರಕಾರ ಫೆ. 21ರಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಅನುಮತಿಯನ್ನು ನೀಡಿರುತ್ತದೆ. ಸೂಕ್ತ ದಾಖಲೆಗಳನ್ನು ಜಿಲ್ಲಾ ವಕ್ಫ್ ಅಧಿಕಾರಿಗೆ ಸಲ್ಲಿಸಿದರೆ ಪರಿಶೀಲಿಸಿ 15 ದಿನದೊಳಗೆ ಮದುವೆ ಪ್ರಮಾಣ ಪತ್ರವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ತಿಳಿಸಿದ್ದಾರೆ.

ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ ಆದೇಶದಂತೆ ಮದುವೆ ಪ್ರಮಾಣ ಪತ್ರ ಪಡೆಯಲು ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಿ ಮದುವೆ ವಿವಾಹ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಮದುವೆ ವಿವಾಹ ಪತ್ರ ಅರ್ಜಿಯನ್ನು ವಧು ಅಥವಾ ವರ ಸಲ್ಲಿಸಬೇಕು. ಜಂಟಿ ವಿವಾಹ ದೃಢೀಕರಣ ಪತ್ರ ಸಲ್ಲಿಸತಕ್ಕದು (ಒಂಟಿ ವಿವಾಹ ದೃಢೀಕರಣ ಪತ್ರ ಆಂಗೀಕರಿಸಲಾಗುವುದಿಲ್ಲ) ನೋಟರಿಯಿಂದ ದೃಢೀಕರಣ ಮಾಡಿಸಬೇಕು. ಮಸೀದಿಯಿಂದ ನೀಡುವ ನಿಖಾನಾಮ (ದಫ್ತರ್) ಮೂಲ ಪ್ರತಿ ಜೆರಾಕ್ಸ್ ಪಡೆದು ಅದನ್ನು ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಯ ದೃಢೀಕರಣ ಅಗತ್ಯ ಎಂದರು.

ನಿಖಾನಾಮ(ದಫ್ತರ್) ನಲ್ಲಿರುವಂತೆ ವಿವಾಹ ದೃಢೀಕರಣ ಪತ್ರದಲ್ಲಿ ವರ ಮತ್ತು ವಧುವಿನ ಹೆಸರು ದಾಖಲಿಸಲಾಗುವುದು. ಆಧಾರ್ ಅಥವಾ ಪಾಸ್‌ಪೋರ್ಟ್‌ನಲ್ಲಿರುವಂತೆ ಹೆಸರುಗಳನ್ನು ದಾಖಲಿಸಬೇಕು. ಯಾವುದೇ ಕಾರಣಕ್ಕೂ ಹೆಸರುಗಳನ್ನು ಬದಲಾಯಿಸಲಾಗುವುದಿಲ್ಲ. ಹೆಸರುಗಳನ್ನು ತಿದ್ದುಪಡಿ ಮಾಡಿದ್ದಲ್ಲಿ ಅಂತಹ ಅರ್ಜಿದಾರರು ಮಸೀದಿಯ ಮೂಲ ನಿಖಾನಾಮ(ದಫ್ತರ್) ರಿಜಿಸ್ಟರ್ ವಕ್ಫ್ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ಕೇವಲ ಜೆರಾಕ್ಸ್ ಪ್ರತಿಯಲ್ಲಿ ತಿದ್ದುಪಡಿ ಮಾಡಿ ದೃಢೀಕರಣ ಮಾಡಿಸಿಕೊಂಡು ಬಂದಲ್ಲಿ ಅಂತಹ ನಿಖಾನಾಮ ಅಂಗೀಕರಿಸಲಾಗುವುದಿಲ್ಲ ಎಂದು ಹೇಳಿದರು.

ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿ ನಿಖಾ ಸಂದರ್ಭದಲ್ಲಿ ಆಧಾರ್ ಮತ್ತು ಪಾಸ್ ಪೋರ್ಟ್‌ನಲ್ಲಿ ಇರುವಂತೆ ಹೆಸರನ್ನು ದಾಖಲಿಸಬೇಕು. ಕೆಲವು ಮಸೀದಿಗಳಲ್ಲಿ ನಿಖಾನಾಮ ಹೊರತು ಪಡಿಸಿ ಬೇರೆ ನಿಖಾ ಸರ್ಟಿಫಿಕೇಟ್ ಅಂತ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಿಖಾನಾಮ ಹೊರತು ಪಡಿಸಿ ಬೇರೆ ನಿಖಾ ಸರ್ಟಿಫಿಕೇಟ್ ನೀಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಸ್ಪಷ್ಟಪಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)