varthabharthi


ಕರ್ನಾಟಕ

ಕೊಲೆ ಆರೋಪ: ದೂರು, ಪ್ರತಿದೂರು ದಾಖಲು

ಕನಕಪುರ | ಪುನೀತ್‌ಕೆರೆಹಳ್ಳಿ ತಂಡದಿಂದ ವಾಹನ ತಡೆದು ದಾಳಿ: ಓರ್ವನ ಅನುಮಾನಾಸ್ಪದ ಸಾವು

ವಾರ್ತಾ ಭಾರತಿ : 1 Apr, 2023

ಚಿತ್ರ-  ಪುನೀತ್‌ಕೆರೆಹಳ್ಳಿ | ಮೃತನ ಸಂಬಂಧಿಕರು

ಕನಕಪುರ, (ರಾಮನಗರ) ಎ.1: ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರೆಂದು ಕರೆಸಿಕೊಂಡ ದುಷ್ಕರ್ಮಿಗಳ ಗುಂಪೊಂದು ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ದಾಂಧಲೆ ನಡೆಸಿದ್ದು, ಈ ಸಂದರ್ಭದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಮೃತಪಟ್ಟವನನ್ನು ಮಂಡ್ಯದ ಇದ್ರೀಸ್ ಪಾಷಾ (35) ಎಂದು ತಿಳಿದುಬಂದಿದೆ. ವಾಹನದಲ್ಲಿದ್ದ ಸೈಯದ್ ಜಾಹೀರ್(40) ಎಂಬವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿರುವ ಸಂತ್ರಸ್ತನ ಕುಟುಂಬ ಹಾಗೂ ಸ್ನೇಹಿತರು ಸಾತನೂರು ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಘಟನಾ ವಿವರ: ಶುಕ್ರವಾರ ಮಧ್ಯರಾತ್ರಿಯಲ್ಲಿ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಮಳವಳ್ಳಿ ಕಡೆಯಿಂದ ತಮಿಳುನಾಡಿನ ಕುಮಂಗಲಗೆರೆ ಸಾಗಿಸುತ್ತಿದ್ದ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ಕೆರೆಹಳ್ಳಿ ಹಾಗೂ ಆತನ ಸ್ನೇಹಿತರು ವಾಹನವನ್ನು ತಡೆದು ವಾಹನದಲ್ಲಿದ್ದ ಮೂವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
  
ವಾಹನದಲ್ಲಿದ ಓರ್ವ ಪರಾರಿಯಾಗುವ ವೇಳೆ ಅನುಮಾನಸ್ಪದವಾಗಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ದೂರು,ಪ್ರತಿದೂರು:  ಮೃತನ ಪಾಲಕರು ಇದೊಂದು ಕೊಲೆ ಎಂದು ಆರೋಪಿಸಿದ್ದು, ಸಂಘಟನೆಯ ಪುನೀತ್‌ಕೆರೆಹಳ್ಳಿ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದಾರೆ. ನನ್ನ ಮಗನ ಸಾವಿಗೆ ಇವರೇ ಕಾರಣ ಎಂದು ಪ್ರತ್ಯೇಕ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆಗೆ ವಿಳಂಬ ಆರೋಪ: ಪ್ರಕರಣದಲ್ಲಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಇದ್ರೀಶ್‌ಪಾಷಾ ಮೃತದೇಹವನ್ನು ಕನಕಪುರ ನಗರ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಮಧ್ಯಾಹ್ನ 2 ಗಂಟೆಯಾದರೂ ಮೃತದೇಹದ ಮರಣೋತ್ತರ ಪರೀಕ್ಷೆಗೆ ವಿಳಂಬ ಮಾಡಿದರೆಂದು ಸಂಬಂಧಿಕರು ಆರೋಪಿಸಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್ಪಿ ಮೋಹನ್, ವೃತ್ತ ನಿರೀಕ್ಷಕರಾದ ಎಲ್.ಕೃಷ್ಣ, ಮಿಥುನ್‌ಶಿಲ್ಪಿ, ಠಾಣಾ ಆರಕ್ಷಕ ಉಪ ನಿರೀಕ್ಷಕ ಷಡಕ್ಷರಿ, ಭಾಸ್ಕರ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)